Asianet Suvarna News Asianet Suvarna News

ಈ ಕಾಂಗ್ರೆಸ್ ನಾಯಕರಿಗೆ ಸಿಗುತ್ತಾ ಪಕ್ಷದಿಂದ ಗೇಟ್ ಪಾಸ್ ..?

ರಾಜ್ಯ ರಾಜಕೀಯದಲ್ಲಿ ವಿವಿಧ ರೀತಿಯ ಬೆಳವಣಿಗೆಗಳು ಆಗುತ್ತಿದೆ. ಇದೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಈ ಸಭೆಗೆ ಗೈರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Congress Leader May Take Action Against Rebel Leaders In CLP Meet
Author
Bengaluru, First Published Jan 18, 2019, 7:37 AM IST

ಬೆಂಗಳೂರು :  ಅತೃಪ್ತ ಕಾಂಗ್ರೆಸ್ಸಿಗರ ಗೂಢ ಆಟಗಳಿಗೆ ಕೊನೆಹಾಡಲು ಶಾಸಕಾಂಗ ಪಕ್ಷದ ಸಭೆ ಕರೆದಿರುವ ಕಾಂಗ್ರೆಸ್ ನಾಯಕರು ಕೇವಲ ಪಕ್ಷಾಂತರ ನಿಷೇಧ ಕಾಯ್ದೆ ಮಾತ್ರವಲ್ಲದೆ, ಸುಪ್ರೀಂಕೋರ್ಟ್‌ನ ಹಲವು ಆದೇಶಗಳನ್ನು ಆಧಾರವಾಗಿಟ್ಟುಕೊಳ್ಳುವ ಮೂಲಕ ಶುಕ್ರವಾರ ಗೈರು ಹಾಜರಾಗುವವರನ್ನು ಸಂಕಷ್ಟಕ್ಕೆ ಸಿಲುಕಿಸಲು ಸಜ್ಜಾಗಿ ದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ವಿಪ್ ಉಲ್ಲಂಘನೆಯನ್ನು ಪಕ್ಷ ವಿರೋಧಿ ನಡವಳಿಕೆ ಎಂದು ಪರಿಗಣಿಸಲು ಅವಕಾಶ ಇದೆ. ಇದರ ಆಧಾರದ ಮೇಲೆ ತನ್ನ ಸದಸ್ಯರ ಮೇಲೆ ಕ್ರಮ ಕೈಗೊಳ್ಳಲು ಪಕ್ಷಕ್ಕೆ ಅವಕಾಶವಿದೆ. 

ಆದರೆ, ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿದರೆ ಅದನ್ನು ವಿಪ್ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆಯಿದೆ. ಗೈರು ಹಾಜರಾತಿಗೆ ಸಬೂಬು ನೀಡುವ ಮೂಲಕ ಇಂತಹ ಕಡ್ಡಾಯಗೊಳಿಸುವಿಕೆಯಿಂದ ಬಚಾವ್ ಆಗುವ ಅವಕಾಶ ಅತೃಪ್ತ ಶಾಸಕರಿಗೆ ಇದೆ ಎಂದು ವಾದಿಸಲಾಗುತ್ತಿದೆ. ಆದರೆ, 1994ರ ರವಿನಾಯಕ್ ವರ್ಸ್‌ಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪಕ್ಷಾಂತರದಂತಹ ನಡೆ ಅಥವಾ ವಿಪ್ ಉಲ್ಲಂಘನೆಯನ್ನು ಮಾತ್ರವಲ್ಲ, ಶಾಸಕರ ನಡವಳಿಕೆಯನ್ನು ಸಹ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಂತಹ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ.

ಆದರೆ, ಶಾಸಕರ ನಡವಳಿಕೆ ಪಕ್ಷ ವಿರೋಧಿಯಾಗಿತ್ತು ಎಂಬುದನ್ನು ಸದರಿ ಪಕ್ಷದ ನಾಯಕರು ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸುವಂತಿರಬೇಕು. ಹೀಗೆ ಸಾಕ್ಷ್ಯಾಧಾರ ಕಲೆ ಹಾಕುವ ಪ್ರಯತ್ನ ಭಾಗವಾಗಿಯೂ ಶುಕ್ರವಾರದ ಶಾಸಕಾಂಗ ಪಕ್ಷದ ಸಭೆಯನ್ನು ಕಾಂಗ್ರೆಸ್ ನಾಯಕರು ಬಳಸಿಕೊಳ್ಳಲಿದ್ದಾರೆ. ಈ ಸಭೆಗೆ ಹಾಜರಾಗುವಂತೆ ಕಡ್ಡಾಯಗೊಳಿಸಿದ್ದರೂ, ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರೂ ಸಭೆಗೆ ಹಾಜರಾಗಲಿಲ್ಲ ಎಂದರೆ ಅದು ಖಚಿತವಾಗಿ ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ ಎಂಬುದು ಕಾಂಗ್ರೆಸ್ ನಾಯಕರ ಅಂಬೋಣ. ಹಾಗಂತ ಶಾಸಕಾಂಗ ಪಕ್ಷದ ಸಭೆಗೆ ಗೈರುಹಾಜರಾದ ಕೂಡಲೇ ಶಾಸಕರ ಮೇಲೆ ಕ್ರಮ ಜರುಗಿಸಲು ಸಾಧ್ಯವಿಲ್ಲ. 

ಮೊದಲಿಗೆ ಶಾಸಕಾಂಗ ಪಕ್ಷದ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎನ್ನಲಾದ ಶಾಸಕರ ವಿರುದ್ಧ ಸಾಕ್ಷ್ಯಾಧಾರ ಕಲೆ ಹಾಕಬೇಕು (ಉದಾಹರಣೆಗೆ- ಮುಂಬೈನಲ್ಲಿ ಬಿಜೆಪಿ ಶಾಸಕರ ಜತೆ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದು, ಬಿಜೆಪಿ ನಾಯಕರೊಂದಿಗೆ  ಕಾಣಿಸಿಕೊಂಡಿದ್ದು, ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಹಾಗೂ ಪಕ್ಷದ ಸೂಚನೆಗಳನ್ನು ಉಲ್ಲಂಘಿಸಿದ್ದು). ಈ ಸಾಕ್ಷ್ಯಾಧಾರಗಳ ಜತೆಗೆ ಸ್ಪೀಕರ್ ಅವರಿಗೆ ದೂರು ನೀಡಬೇಕು. ಈ ದೂರಿನ ಅನ್ವಯ ಸ್ಪೀಕರ್ ಅವರು ಶಾಸಕರ ಸಮಜಾಯಿಷಿ ಕೇಳಬೇಕು. ಈ ಸಮಜಾಯಿಷಿ ವೇಳೆ ತಾವು ತಪ್ಪು ಮಾಡಿಲ್ಲ ಎಂದು ಶಾಸಕರು ಸಾಕ್ಷ್ಯಾಧಾರ ಒದಗಿಸಬಹುದು. ಅವನ್ನು ಪರಿಗಣಿಸಿ ತಮ್ಮ ವಿವೇಚನೆಯ ಮೇರೆಗೆ ಸ್ಪೀಕರ್ ಅವರು ಸದರಿ ಶಾಸಕರನ್ನು ಅನರ್ಹ ಮಾಡಬಹುದು. ಇದನ್ನು ಕೋರ್ಟಲ್ಲಿ ಪ್ರಶ್ನಿಸಬಹುದು.

Follow Us:
Download App:
  • android
  • ios