ಬೆಂಗಳೂರು, (ಡಿ.14): ಕಾಂಗ್ರೆಸ್‌ ಕಾರ್ಯಚಟುವಟಿಕೆಗಳಿಂದ ಅಂತರ ಆಯ್ದುಕೊಂಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಇಂದು (ಸೋಮವಾರ) ಜೆಡಿಎಸ್​ ವರಿಷ್ಠ ಹೆಚ್.​​ಡಿ. ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.

ಇಬ್ರಾಹಿಂ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದ ಭೇಟಿ ಬೆನ್ನಲ್ಲೇ ಹಿರಿಯ ನಾಯಕರ ನಡುವಣ ಮಹತ್ವದ ಸಭೆಯಲ್ಲಿ ಕುಮಾರಸ್ವಾಮಿ ಅವರು ಕೂಡ ಜೊತೆಗೂಡಿದರು. ಸುಮಾರು ಒಂದೂಕಾಲು ಗಂಟೆಯಿಂದ ಇಬ್ರಾಹಿಂ ಜೊತೆ ದೇವೇಗೌಡರು ಸಮಾಲೋಚನೆ ನಡೆಸಿದರು.

ಡಿಕೆಶಿ ಖುದ್ದು ಭೇಟಿಯಾಗಿ ಬೇಡವೆಂದ್ರೂ ದೇವೇಗೌಡ್ರ ಮನೆಗೆ ಹೋದ ಕಾಂಗ್ರೆಸ್ ಹಿರಿಯ ನಾಯಕ...!

ಇನ್ನು ಸಭೆ ಬಳಿಕ ಮಾತನಾಡಿದ ಇಬ್ರಾಹಿಂ, ನನ್ನ ದೇವೇಗೌಡ್ರ ನಡುವೆ ತಂದೆ, ಮಕ್ಕಳ ಭಾಂದವ್ಯವಿದೆ. ಪಕ್ಷಕ್ಕೆ ಸೇರ್ಪಡೆಯಾದರೆ ತಂದೆ ಮಗನಿಗೆ ಬೇಡ ಎನ್ನುತ್ತಾರಾ? ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಸೇರ್ಪಡೆಗೆ ಆಸಕ್ತಿ ತೋರಿದಂತಿದೆ.

 ನಾನು ಸದ್ಯ ಪ್ರವಾಸಕ್ಕೆ ಹೊರಡುತ್ತೇನೆ. ಬಳಿಕವೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದೆ. ವೈಯುಕ್ತಿಕ ಯಾರೊಂದಿಗೂ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದರು. 

ದೇಶದ ಜನರಿಗೆ ಒಳ್ಳೆಯದಾಗುವಂತೆ ನಡೆಯುವುದೇ ನನ್ನ ಉದ್ದೇಶ ಅಷ್ಟೇ. ನಾನು ಯಾವತ್ತೂ ಮುಸ್ಲಿಂ ನಾಯಕನಲ್ಲ, ಆ ರೀತಿ ಕರೆಯಿಸಿಕೊಳ್ಳುವ ಆಸೆ ನನಗೆ ಇಲ್ಲ. ಕಾಂಗ್ರೆಸ್​​ ಪೋಸ್ಟರ್​​​ನಲ್ಲಿ ಎಲ್ಲೂ ಸಾಬ್ರ ಫೋಟೋನೇ. ಯಾಕಿಲ್ಲ ಎಂದು ಪ್ರಶ್ನಿಸಿದರು.

ಈಗಾಗಲೇ ಎಚ್‌ಡಿ ಕುಮಾರಸ್ವಾಮಿ ಅವರು ಸಿ.ಎಂ. ಇಬ್ರಾಹಿಂದ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ಮಾಡಿದ್ದರು. ಅದರ ಮುಂದುವರೆದ ಭಾಗವಾಗಿ ಇಬ್ರಾಹಿಂ ಅವರು ದೇವೇಗೌಡ ಅವರನ್ನ ಭೇಟಿ ಮಾಡಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.