ಬೆಂಗಳೂರು, (ಮೇ.26): ಕೊರೋನಾ ಅಟ್ಟಹಾಸದ ಮಧ್ಯೆ ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ರಂಗೇರಿದೆ. ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯಸಭೆ ಚುನಾವಣೆಯಲ್ಲಿ ಕೈ ಜೋಡಿಸಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಒಬ್ಬರು ಸದಸ್ಯರನ್ನು ಆಯ್ಕೆ ಮಾಡಲು ಜೂನ್‌ನಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದ್ದು, ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗೆ  ಬೆಂಬಲ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಮತ್ತೆ ಒಂದಾಗೋಣ ಬಾ ಎಂದ ಕೈ-ದಳ ದೋಸ್ತಿ...?

ರಾಜ್ಯಸಭೆಗೆ ದೊಡ್ಡಗೌಡ್ರು..?

ಹೌದು.. ಇದೇ ಜೂನ್ 25ಕ್ಕೆ ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರ ಅಧಿಕಾರ ಅವಧಿ ಮುಕ್ತಾಯವಾಗಿದ್ದು, ಈ ಸ್ಥಾನಕ್ಕೆ ದೇವೇಗೌಡನ್ನ ಆಯ್ಕೆ ಮಾಡುವ ಬಗ್ಗೆ ಕಾಂಗ್ರೆಸ್-ಜೆಡಿಎಸ್‌ ಒಂದು ಸುತ್ತಿನ ಮಾತುಕತೆ ನಡೆಸಿವೆ.

ಕೆಲವು ದಿನಗಳ ಹಿಂದೆ ದೇವೇಗೌಡರ ಮನೆಯಲ್ಲಿ ನಡೆದ ರಹಸ್ಯ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕಣಕ್ಕಿಳಿಸುವ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯಸಭೆ ಎಲೆಕ್ಷನಲ್ಲಿ ದೇವೇಗೌಡ್ರಿಗೆ ಚಾನ್ಸ್ ಕೊಟ್ಟರೆ, ಇದಕ್ಕೆ ಪ್ರತಿಯಾಗಿ ವಿಧಾನ ಪರಿಷತ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಲು ಜೆಡಿಎಸ್ ಸಹ ಸಮ್ಮತಿಸಿದೆ ಎನ್ನಲಾಗಿದ್ದು, ಈ ಕೊಡುಕೊಳ್ಳುವ ಮಾತುಕತೆ ಈಗಾಗಲೇ ನಡೆದಿದೆ.

ದೇವೇಗೌಡ್ರ ಜನ್ಮದಿನದಂದೇ ನಡೆದಿತ್ತಾ ಡೀಲ್?

ಯೆಸ್... ಇಂತಹದೊಂದು ಸಂಶಯ ಕಾಡುತ್ತಿದೆ. ಕರ್ನಾಟಕ ರಾಜ್ಯಸಭೆ ಚುನಾವಣೆ ಬಗ್ಗೆ ದೇವೇಗೌಡರ ಮನೆಯಲ್ಲೇ ಗುಪ್ತ್-ಗುಪ್ತ್ ಮೀಟಿಂಗ್ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬರ್ತ್ ಡೇ ವಿಶ್ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇಬ್ಬರೇ ಕೂತ ಊಟ ಮಾಡುವ ವೇಳೆ ಈ ಚರ್ಚೆ ನಡೆದಿರುವ ಸಾಧ್ಯತೆಗಳಿವೆ. 

ಪಕ್ಷಗಳ ಸಂಖ್ಯಾ ಬಲ

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು 48 ಶಾಸಕರ ಬಲ ಬೇಕಿದ್ದು, ಜೆಡಿಎಸ್ ವಿಧಾನಸಭೆಯಲ್ಲಿ 34 ಸದಸ್ಯ ಬಲ ಹೊಂದಿದೆ. ಒಂದು ವೇಳೆ ದೇವೇಗೌಡ್ರು ರಾಜ್ಯಸಭೆಗೆ ಆಯ್ಕೆಯಾಗಬೇಕಿದ್ರೆ, ಕಾಂಗ್ರೆಸ್‌ನ 14 ಶಾಸಕರು ಜೆಡಿಎಸ್ ಪರವಾಗಿ ಮತದಾನ ಮಾಡಬೇಕಾಗುತ್ತದೆ. 

ಒಟ್ಟಿನಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿ ಸೋಲು ಕಂಡಿರುವ ದೇವೇಗೌಡ ಅವರನ್ನ ಈಗ ರಾಜ್ಯಸಭೆ ಮೂಲಕ ಪುನಃ ರಾಷ್ಟ್ರ ರಾಜಕೀಯಕ್ಕೆ ಕಳುಹಿಸಲು ಕಾಂಗ್ರೆಸ್-ಜೆಡಿಎಸ್ ನಾಯಕರು ಚರ್ಚೆ ನಡೆಸಿದ್ದಾರೆ.

"