Ramanagara: ಬಿಜೆಪಿಯ ನಿಜವಾದ ಬಿ ಟೀಮ್ ಕಾಂಗ್ರೆಸ್: ನಿಖಿಲ್ ಕುಮಾರಸ್ವಾಮಿ
ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದ ಹಾಗೂ ಹಿಜಾಬ್, ಹಲಾಲ್ ಪರವಾಗಿ ಧ್ವನಿ ಎತ್ತದ ಕಾಂಗ್ರೆಸ್ ಪಕ್ಷ ಬಿಜೆಪಿಯ ನಿಜವಾದ ಬಿ ಟೀಮ್ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹರಿಹಾಯ್ದರು.
ರಾಮನಗರ (ಜ.12): ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಲು ಸಹಕಾರ ನೀಡಿದ ಹಾಗೂ ಹಿಜಾಬ್, ಹಲಾಲ್ ಪರವಾಗಿ ಧ್ವನಿ ಎತ್ತದ ಕಾಂಗ್ರೆಸ್ ಪಕ್ಷ ಬಿಜೆಪಿಯ ನಿಜವಾದ ಬಿ ಟೀಮ್ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹರಿಹಾಯ್ದರು. ನಗರದ ಆರ್ ಎನ್ ಫಂಕ್ಷನ್ ಹಾಲ್ನಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋಮುವಾದಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಾಮ್ಯತೆ ಇದೆ. ಹೀಗಾಗಿಯೇ ಬಿಜೆಪಿ ಹಿಂದೂ-ಮುಸಲ್ಮಾನರ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಸುತ್ತಿದ್ದರೂ ಕಾಂಗ್ರೆಸ್ ಪ್ರತ್ಯುತ್ತರ ನೀಡುವ ಕೆಲಸ ಮಾಡುತ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿಯವರು ಟಿಪ್ಪು ಸುಲ್ತಾನ್, ಹಿಜಾಬ್, ಹಲಾಲ್ ವಿಚಾರಗಳನ್ನು ಮುಂದಿಟ್ಟುಕೊಂಡು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿರವರು ದಿಟ್ಟಉತ್ತರ ನೀಡುವ ಮೂಲಕ ಜೆಡಿಎಸ್ ನ ಜಾತ್ಯತೀತ ಬದ್ಧತೆಯನ್ನು ಪ್ರದರ್ಶಿಸಿದರು. ಈ ಕೆಲಸವನ್ನು ಕಾಂಗ್ರೆಸ್ ನಾಯಕರು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಮೂರುವರೆ ವರ್ಷಗಳಿಂದ ಬಿಜೆಪಿಯವರು ಆಡಳಿತ ನಡೆಸುತ್ತಿದ್ದಾರೆ. ಇಷ್ಟುವರ್ಷ ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಆಲೋಚನೆ ಬರಲಿಲ್ಲ. ಈಗ ಚುನಾವಣೆ ಸಮಯದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪಂಚರತ್ನ ಜಾರಿಗೆ: ನಿಖಿಲ್ ಕುಮಾರಸ್ವಾಮಿ
ನಾವು ಹಿಂದುಗಳೇ ಆಗಿದ್ದೇವೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ಥರು ಸಹೋದರರಂತೆ ಬಾಳ್ವೆ ಮಾಡಬೇಕೆಂದು ನಮ್ಮ ಹಿಂದುತ್ವ ಹೇಳಿಕೊಡುತ್ತದೆ. ಬಿಜೆಪಿಯವರು ಹಿಂದು ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುವುದು ಬೇಡ ಎಂದು ಹೇಳಿದರು. 2018ರ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಸೆಳೆಯುವ ಸಲುವಾಗಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಅಂತಿಮವಾಗಿ ಯಾವ ಪಕ್ಷಕ್ಕೂ ಸ್ಪಷ್ಟಬಹುಮತ ಬರದಿದ್ದಾಗ ಕಾಂಗ್ರೆಸ್ ನಾಯಕರು ಜೆಡಿಎಸ್ನೊಂದಿಗೆ ಮೈತ್ರಿಗಾಗಿ ನಮ್ಮ ಮನೆ ಬಾಗಿಲಿಗೆ ಬಂದರು. ಮುಂಬಾಗಲಲ್ಲಿ ಬಂದು ಅಧಿಕಾರ ನೀಡಿ, ಹಿಂಬಾಗಿಲಿನಿಂದ ಸರ್ಕಾರ ಉರುಲಿಸುವ ಕೆಲಸ ಮಾಡಿದರು.
ಬಿಜೆಪಿ ಸೇರ್ಪಡೆಯಾಗಿ ಮೈತ್ರಿ ಸರ್ಕಾರ ಉರುಳಿಸಿದ ಕಾಂಗ್ರೆಸ್ 17 ಶಾಸಕರು ಯಾರ ಶಿಷ್ಯರು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಪಕ್ಕೆ ಯಾವ ನೈತಿಕತೆ ಉಳಿದಿದೆ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದರು. ಜೆಡಿಎಸ್ ಮುಖಂಡ ಗಜಫರ್ ಆಲಿಬಾಬು ಮಾತನಾಡಿ, ರಾಮನಗರದಲ್ಲಿ ಹಿಂದೂ ಮುಸ್ಲಿಂ ಸಹೋದರರಂತೆ ಜೀವನ ನಡೆಸುವ ಶಾಂತಿಯ ವಾತಾವರಣ, ಗುಣಮಟ್ಟದ ಶಿಕ್ಷಣ, ಉದ್ಯೋಗ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಕಾರಣವೆಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿರವರು ರಾಮನಗರವನ್ನು ಜಿಲ್ಲೆಯನ್ನಾಗಿ ರಚನೆ ಮಾಡದೆ ಹೋಗಿದ್ದರೆ ಇನ್ನೂ 25 ವರ್ಷಗಳಾಗಿದ್ದರು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಜನರು ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಿದರು. ರಾಮನಗರದಲ್ಲಿ ನಾಲ್ಕು ಕಟ್ಟಡಗಳನ್ನು ನಿರ್ಮಿಸಿದ್ದು ಮಾತ್ರವಲ್ಲದೆ ರಾಜೀವ್ ಗಾಂಧಿ ವಿವಿ, ಹೈಟೆಕ್ ಜಿಲ್ಲಾಸ್ಪತ್ರೆ ನಿರ್ಮಾಣ ಸೇರಿದಂತೆ ಕೋಟ್ಯಂತರ ರುಪಾಯಿ ಅನುದಾನ ತಂದು ಅಭಿವೃದ್ಧಿಗೆ ಮುನ್ನುಡಿ ಬರೆದರು ಎಂದು ತಿಳಿಸಿದರು. ಕೋಮುವಾದಿ ಬಿಜೆಪಿ ಹಿಜಾಬ್, ಹಲಾಲ್, ಅಜಾನ್ ಹೆಸರಿನಲ್ಲಿ ದಾಳಿ ಮಾಡಿದಾಗಲೆಲ್ಲ ಕುಮಾರಸ್ವಾಮಿ ಅಲ್ಪಸಂಖ್ಯಾತರ ಬೆನ್ನಿಗೆ ನಿಂತರು. ಅಲ್ಪಸಂಖ್ಯಾತರೇ ಹೆಚ್ಚಾಗಿ ವಾಸಿಸುವ ವಾರ್ಡುಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದರು.
ನೆರೆ ಹಾವಳಿಯಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ಒದಗಿಸಿದರು. ಇಷ್ಟಾದರು ರಾಮನಗರ ಕ್ಷೇತ್ರಕ್ಕೆ 25 ವರ್ಷಗಳಲ್ಲಿ ಕುಮಾರಸ್ವಾಮಿ ಕೊಡುಗೆ ಏನೆಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಅವರದೇ ಪಕ್ಷ ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನೆಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಉತ್ತರಿಸಲಿ ಎಂದು ಗಜಫರ್ ಆಲಿ ಬಾಬು ಸವಾಲು ಹಾಕಿದರು. ನಗರಸಭಾ ಸದಸ್ಯರಾದ ಗ್ಯಾಬ್ರಿಯಲ್, ಮುನಜಿಲ್ ಆಗಾ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ರಾಜ್ಯ ವಕ್ತಾರ ಉಮೇಶ್, ನಗರ ಘಟಕ ಅಧ್ಯಕ್ಷ ಸುಹೇಲ್ ಪಾಷ , ಮುಖಂಡರಾದ ಅತಾವುಲ್ಲಾ, ಸುಹೇಲ್ ಪಾಷ, ಇರ್ಷಾದ್ ಅಹಮದ್, ಮತೀನ್ ಮತ್ತಿತರರು ಉಪಸ್ಥಿತರಿದ್ದರು.
ಡಿಕೆ ಸಹೋದರರ ಪಾಲಿಗೆ ಇಕ್ಬಾಲ್ ಕುರಿ ಇದ್ದಂತೆ: ರಾಮನಗರ ಕ್ಷೇತ್ರದಲ್ಲಿ ತಮ್ಮ ವೋಟ್ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳಲು ಡಿಕೆ ಸಹೋದರರು ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್ ಅವರನ್ನು ಕುರಿಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ನಗರ ಘಟಕ ಅಧ್ಯಕ್ಷ ಸುಹೇಲ್ ಪಾಷಾ ವ್ಯಂಗ್ಯವಾಡಿದರು. ಡಿಕೆ ಸಹೋದರರಿಗೆ ಸಂಸತ್ ಚುನಾವಣೆಗಾಗಿ ವೋಟ್ ಬ್ಯಾಂಕ್ ಕಾಪಾಡಿಕೊಳ್ಳಲು ಒಂದು ಕುರಿ ಬೇಕು. ಅದಕ್ಕಾಗಿ ಇಕ್ಬಾಲ್ ಅವರನ್ನು ಕ್ಷೇತ್ರದಲ್ಲಿ ಬಿಟ್ಟಿದ್ದಾರೆ ಎಂದು ಟೀಕಿಸಿದರು. ರಾಮನಗರ ಕ್ಷೇತ್ರಕ್ಕೆ ಕುಮಾರಸ್ವಾಮಿ ಕೊಡುಗೆ ಏನೆಂದು ಪ್ರಶ್ನಿಸುವ ಕಾಂಗ್ರೆಸ್ ನಾಯಕರು, ಸಂಸದರು ಎಷ್ಟುಅನುದಾನ ನೀಡಿದ್ದಾರೆ.
ಮಾತೃದ್ರೋಹ ಮಾಡಿದವರಿಗೆ ಬುದ್ಧಿ ಕಲಿಸಿ: ನಿಖಿಲ್ ಕುಮಾರಸ್ವಾಮಿ
ಅವರ ಕೊಡುಗೆ ಏನೆಂದು ಉತ್ತರಿಸಲಿ. ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲಾಗದೆ ಬಟ್ಟೆ, ಪಾತ್ರೆ ನೀಡಿ ಮತಗಳ ಖರೀದಿಗೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ರವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ, ಶಾಸಕರಾಗಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಾಮಥ್ಯರ್ ಅವರಲ್ಲಿ ಕಾಣುತ್ತಿಲ್ಲ. ಅಲ್ಪಸಂಖ್ಯಾತರು ಸಮುದಾಯದ ನಾಯಕ ಎಂಬ ಭ್ರಮೆಯಿಂದ ಹೊರ ಬರಬೇಕು. ಯಾವ ಶಾಸಕ ಶಕ್ತಿಯುತರಾಗಿರುತ್ತಾರೊ ಅವರು ಮಾತ್ರ ವಿಶೇಷ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಬೇರೆ ಶಾಸಕಿಯರಿಗೆ ಹೋಲಿಸಿದರೆ ಅನಿತಾರವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದಾರೆ. ನಗರಸಭೆಗೆ 50 ರಿಂದ 60 ಕೋಟಿ ಅನುದಾನ ಬಂದಿದ್ದು, ಅದರ ಸದ್ಬಳಕೆ ಸರಿಯಾಗಿ ಆಗುತ್ತಿಲ್ಲ ಎಂದು ಸುಹೇಲ್ ಪಾಷಾ ದೂರಿದರು.
ನಿಖಿಲ್ ಗೆಲುವಿಗೆ ಅಲ್ಲಾ ಹೆಸರಲ್ಲಿ ಶಪಥ: ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಮ್ಮುಖದಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಅಲ್ಲಾನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಬೋಧಿಸಿದ ಪ್ರಸಂಗ ನಡೆಯಿತು. ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮುಖಂಡ ಗಜಫರ್ ಆಲಿ ಬಾಬುರವರು ಅಲ್ಲಾನ ಹೆಸರಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕೈ ಬಲಪಡಿಸುವ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಶಪಥ ಮಾಡಿಸಿದರು. ನಿಖಿಲ್ ಅವರನ್ನು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಇದ್ಕಕಾಗಿ ನಾವೆಲ್ಲರು ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಕಾರ್ಯಕರ್ತರು ಪ್ರತಿಜ್ಞೆ ಸ್ವೀಕರಿಸಿದರು.