ಮುಂಬರುವ ಚುನಾವಣಾ ಟಿಕೆಟ್‌ಗಾಗಿ ಕಾಂಗ್ರೆಸ್ ಅರ್ಜಿ ಆಹ್ವಾನ
- ಬರುವ ಏಪ್ರಿಲ್, ಮೇನಲ್ಲಿ ನಡೆಯಬೇಕಿದೆ ವಿಧಾನಸಭೆ ಚುನಾವಣೆ
- ಅಭ್ಯರ್ಥಿ ಆಯ್ಕೆಗೆ ಈಗಲೇ ಕಸರತ್ತು ಆರಂಭಿಸಿದ ಪ್ರತಿಪಕ್ಷ ಕಾಂಗ್ರೆಸ್
- ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರಕ್ಕೆ ನಿರ್ಧಾರ. ನ.5ರಿಂದ ಪ್ರಕ್ರಿಯೆ ಶುರು
- ಉಪಚುನಾವಣೆ ವೇಳೆ ಅರ್ಜಿ ಜತೆಗೆ 1 ಲಕ್ಷ ರು. ದೇಣಿಗೆ ಪಡೆದಿದ್ದ ಪಕ್ಷ
- ಈಗ ಅರ್ಜಿ ಜತೆಗೆ ಎಷ್ಟುಶುಲ್ಕ ಪಡೆಯಬೇಕು ಎಂಬ ನಿರ್ಧಾರವಿಲ್ಲ
- ಅರ್ಜಿ ಶುಲ್ಕ, ಸಲ್ಲಿಸಬೇಕಿರುವ ದಾಖಲೆಗಳ ಬಗ್ಗೆ ಶೀಘ್ರ ತೀರ್ಮಾನ
ಬೆಂಗಳೂರು (ಅ.31) : ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಕಾಂಗ್ರೆಸ್ ಅಧಿಕೃತ ಚಾಲನೆ ನೀಡಿದ್ದು, ನ.5ರಿಂದ ನ.15ರವರೆಗೆ 224 ಕ್ಷೇತ್ರಗಳಿಂದಲೂ ಅರ್ಹ ಆಕಾಂಕ್ಷಿಗಳಿಂದ ಟಿಕೆಟ್‌ಗೆ ಅರ್ಜಿ ಆಹ್ವಾನಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಪಕ್ಷದ ಕೆಲಸ ಮಾಡದವರಿಗೆ ಟಿಕೆಟಿಲ್ಲ: ಮತ್ತೊಮ್ಮೆ ಶಾಸಕರಿಗೆ ಎಚ್ಚರಿಕೆ ನೀಡಿದ ಡಿಕೆಶಿ
ಭಾನುವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದ ಸಿದ್ಧತೆ ಕುರಿತು ಚರ್ಚಿಸಲು ಹಿರಿಯ ನಾಯಕರ ಸಭೆ ನಡೆಯಿತು. ಈ ವೇಳೆ ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುವ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.
ಕಳೆದ ಉಪ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವವರು ಪಕ್ಷದ ನಿಧಿಗೆ 1 ಲಕ್ಷ ರು. ನೀಡಬೇಕು ಎಂದು ನಿಯಮ ರೂಪಿಸಲಾಗಿತ್ತು. ಇದೀಗ ಮುಂದಿನ ಸಾರ್ವತ್ರಿಕ ಚುನಾವಣೆಗೆ ಎಷ್ಟುಶುಲ್ಕ ನಿಗದಿ ಮಾಡಬೇಕು. ಯಾವ್ಯಾವ ದಾಖಲೆಗಳನ್ನು ಒದಗಿಸಬೇಕು ಎಂಬಿತ್ಯಾದಿ ಅಂಶಗಳ ಕುರಿತು ಚರ್ಚಿಸಲು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನ.4ರಿಂದ ಸುರ್ಜೇವಾಲಾ ಸರಣಿ ಸಭೆ:
ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿರುವ ಪರಿಸ್ಥಿತಿ ಹಾಗೂ ಯಾರಿಗೆ ಟಿಕೆಟ್ ನೀಡಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂಬ ಬಗ್ಗೆ ಚರ್ಚಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಜತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ನೇರ ಸಭೆ ಹಮ್ಮಿಕೊಂಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಮನ್ವಯ ಸಭೆ ಹೆಸರಿನಲ್ಲಿ ನ.4 ರಂದು ಶುಕ್ರವಾರ ಕೋಲಾರ, ವಿಜಯಪುರ, ಉತ್ತರ ಕನ್ನಡ, ನ.5 ರಂದು ಹಾಸನ, ದಕ್ಷಿಣ ಕನ್ನಡ, ಬೆಳಗಾವಿ ನಗರ ಮತ್ತು ಗ್ರಾಮೀಣ, ಚಿಕ್ಕೋಡಿ, ನ.8 ರಂದು ಬೆಂಗಳೂರು ನಗರ, ದಕ್ಷಿಣ, ಉತ್ತರ ಜಿಲ್ಲಾ ಕಾಂಗ್ರೆಸ್, ಬೆಂಗಳೂರು ಗ್ರಾಮಾಂತರ, ನ.9 ರಂದು ರಾಯಚೂರು, ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಉ.ಕರ್ನಾಟಕದಲ್ಲಿ ಕಾಂಗ್ರೆಸ್ 3 ಪ್ರತ್ಯೇಕ ರಾರಯಲಿ
ಬೆಂಗಳೂರು: ಭಾನುವಾರ ನಡೆದ ಕೆಪಿಸಿಸಿ ಸಭೆಯಲ್ಲಿ ರಾಜ್ಯದಲ್ಲಿ ನಡೆಯಬೇಕಿರುವ ಯಾತ್ರೆಗಳ ಬಗ್ಗೆಯೂ ಸುದೀರ್ಘ ಚರ್ಚೆ ನಡೆದಿದೆ. ಈ ವೇಳೆ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನೀಡಿರುವ ಟಾಸ್‌್ಕನಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮೂರು ಪ್ರತ್ಯೇಕ ರಾರಯಲಿಗಳು ನಡೆಯಬೇಕು ಎಂದು ಸಭೆಗೆ ತಿಳಿಸಿದ್ದಾರೆ.
ದಮ್ ಇದ್ದರೆ ಬಿಜೆಪಿ ವಿಜಯ ಯಾತ್ರೆ ತಡೀರಿ: ಸಿಎಂ ಬೊಮ್ಮಾಯಿ
ಮೊದಲಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯದ ವಿರುದ್ಧ ಟ್ರ್ಯಾಕ್ಟರ್ ರಾರಯಲಿ ನಡೆಸಲಾಗುವುದು. ಬಳಿಕ ಮಹದಾಯಿ ಯೋಜನೆ ಅನುಷ್ಠಾನ ಮಾಡದ ಬಗ್ಗೆ ಪ್ರತ್ಯೇಕ ರಾರಯಲಿ (ಟ್ರಾಕ್ಟರ್ ರಾರಯಲಿ ಅಲ್ಲ) ನಡೆಸಬೇಕು. ಬಳಿಕ ರಾಜ್ಯ ಬಿಜೆಪಿ ಸರ್ಕಾರವು 371-ಜೆ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಿದೆ ಎಂಬುದನ್ನು ಜನರಿಗೆ ತಿಳಿಸಲು ಪ್ರತ್ಯೇಕ ಯಾತ್ರೆ ನಡೆಸಬೇಕು. ಈ ವೇಳೆ ಕೇಂದ್ರವು 371-ಜೆ ಜಾರಿಗೆ ತರಲು ಹೊರಟಾಗ ಎಲ್.ಕೆ. ಅಡ್ವಾಣಿ ಹಾಗೂ ಎ.ಬಿ. ವಾಜಪೇಯಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಮೊದಲಿನಿಂದಲೂ ಬಿಜೆಪಿಯು ಇದರ ವಿರುದ್ಧವಿದೆ. ಇದರ ನಡುವೆಯೂ ಕಾಂಗ್ರೆಸ್ 371-ಜೆ ಸ್ಥಾನಮಾನ ನೀಡಿತು. ಹೀಗಾಗಿ ಬಿಜೆಪಿಯು 371-ಜೆ ಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ಸೂಕ್ತವಾಗಿ ಅನುಷ್ಠಾನ ಮಾಡದೆ ಈ ಭಾಗದ ಜನರಿಗೆ ದ್ರೋಹ ಬಗೆಯುತ್ತಿದೆ ಎಂದು ಬಿಂಬಿಸಬೇಕು ಎಂದು ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.