ಬೆಂಗಳೂರು[ಡಿ.12]: ಉಪ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿದ ರಾಜೀನಾಮೆಯನ್ನು ಹೈಕಮಾಂಡ್‌ ಇನ್ನೂ ಅಂಗೀಕರಿಸಿಲ್ಲ. ಮೂಲಗಳ ಪ್ರಕಾರ, ‘ನೀವು ರಾಜೀನಾಮೆ ನೀಡುವ ಅಗತ್ಯವಿಲ್ಲ. ಸದ್ಯಕ್ಕೆ ಹುದ್ದೆಯಲ್ಲಿ ಮುಂದುವರೆಯಿರಿ’ ಎಂದು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಅವರಿಂದ ಉಭಯ ನಾಯಕರಿಗೂ ಸೂಚನೆ ಬಂದಿದೆ ಎನ್ನಲಾಗಿದೆ.

ಆದರೆ, ಈ ಸೂಚನೆಗೆ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಏನು ಎಂಬುದು ತಿಳಿದುಬಂದಿಲ್ಲ. ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ಗಮನವನ್ನು ನೀಡಲು ಸಾಧ್ಯವಾಗಿಲ್ಲ. ಆರೋಗ್ಯ ಸುಧಾರಣೆ ನಂತರ ತಮ್ಮ ನಿಲುವು ಸ್ಪಷ್ಟಪಡಿಸಬಹುದು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ವಾಸ್ತವವಾಗಿ ರಾಜೀನಾಮೆ ನೀಡಿದ ನಂತರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸೋಮವಾರ ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿದ್ದ ಅಹ್ಮದ್‌ ಪಟೇಲ್‌ ಅವರು ಉಪ ಚುನಾವಣೆಯ ಸೋಲಿನ ಹೊಣೆಯನ್ನು ನೀವು ಮಾತ್ರ ಹೊರುವ ಅಗತ್ಯವಿಲ್ಲ. ಪಕ್ಷ ಸಂಕಷ್ಟದಲ್ಲಿರುವಾಗ ನೀವು ಕೂಡ ರಾಜೀನಾಮೆ ಸಲ್ಲಿಸಿ ಹಿನ್ನೆಲೆಗೆ ಸರಿಯಬಾರದು ಎಂದು ತಿಳಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ವರದಿ ಪಡೆದ ಹೈಕಮಾಂಡ್‌:

ಉಪ ಚುನಾವಣೆ ಸೋಲು ಹಾಗೂ ಸಿಎಲ್‌ಪಿ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ ಬೆನ್ನಲ್ಲೇ ಹೈಕಮಾಂಡ್‌ ಕೂಡ ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳ ಬಗ್ಗೆ ವರದಿ ಪಡೆದುಕೊಂಡಿದೆ ಎನ್ನಲಾಗಿದೆ. ಈ ವರದಿಯಲ್ಲಿ ಸಿದ್ದರಾಮಯ್ಯ ಅವರು ಎಲ್ಲಾ ನಾಯಕರನ್ನು ಒಗ್ಗೂಡಿ ಪ್ರಚಾರ ತಂತ್ರ ಹೆಣೆಯಲು ಮುಂದಾಗಲಿಲ್ಲ ಎಂಬ ಉಲ್ಲೇಖದ ಜತೆಗೆ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ಡಾ.ಜಿ.ಪರಮೇಶ್ವರ್‌, ಎಚ್‌.ಕೆ. ಪಾಟೀಲ್‌ ಆದಿಯಾಗಿ ಪ್ರಮುಖ ನಾಯಕರು ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ದುಡಿಯಲಿಲ್ಲ. ಚುನಾವಣೆಯ ಕಡೆಯ ದಿನಗಳಲ್ಲಿ ಕೆಲವರು ನಾಮ್‌ಕೆವಾಸ್ತೆ ತೊಡಗಿಕೊಂಡದ್ದು ಬಿಟ್ಟರೆ ಉಳಿದ ನಾಯಕರಾರ‍ಯರೂ ಪ್ರಚಾರದಲ್ಲಿ ತೊಡಗಿಕೊಳ್ಳಲಿಲ್ಲ ಎಂದು ತಿಳಿಸಲಾಗಿದೆ.

ಜತೆಗೆ, ಚುನಾವಣೆ ಸಮೀಪವಿರುವಾಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕುರಿತು ಇದೇ ನಾಯಕರು ಹೇಳಿಕೆ ಕೊಟ್ಟಿದ್ದು ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿತು. ಮತ್ತೆ ಅಸ್ಥಿರ ಸರ್ಕಾರ ಬೇಡವೆಂಬ ಕಾರಣಕ್ಕೆ ಜನರ ನಿಲುವು ಬದಲಾಯಿತು. ಇಂತಹ ಯಾವುದೇ ಗೊಂದಲಗೊಳಿಸುವ ಹೇಳಿಕೆ ನೀಡದೆ ನೇರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರೆ ಕಾಂಗ್ರೆಸ್‌ ಸಾಧನೆ ಮತ್ತಷ್ಟುಉತ್ತಮವಿರುತ್ತಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.

ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ದುರ್ಬಲವಾಗಿದೆ. ಸದನದ ಒಳಗೆ ಹಾಗೂ ಹೊರಗೆ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯವಿರುವ ಸಿದ್ದರಾಮಯ್ಯ ಅವರಿಗೆ ಸರಿಸಾಟಿಯಾಗುವ ನಾಯಕ ಸದ್ಯಕ್ಕೆ ಬೇರೆ ಯಾರೂ ಕಾಣುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕರಿಸಬಾರದು ಎಂಬ ನಿಲುವಿಗೆ ಹೈಕಮಾಂಡ್‌ ಬಂದಿದೆ ಎನ್ನಲಾಗಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಈ ಹಿಂದೆಯೂ ಒಮ್ಮೆ ರಾಜೀನಾಮೆಯ ಪ್ರಸ್ತಾಪ ಮಾಡಿದ್ದರು. ಅಲ್ಲದೆ, ಹುದ್ದೆಯಲ್ಲಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಕೆಲ ದಿನಗಳ ನಂತರ ಈ ಹುದ್ದೆಗೆ ಪರ್ಯಾಯ ನಾಯಕರೊಬ್ಬರನ್ನು ಗುರುತಿಸಬಹುದು. ಅಲ್ಲಿಯವರೆಗೂ ದಿನೇಶ್‌ ಅವರೇ ಹುದ್ದೆಯಲ್ಲಿ ಮುಂದುವರೆಯಲಿ ಎಂಬ ತೀರ್ಮಾನವನ್ನು ಹೈಕಮಾಂಡ್‌ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.