ಮೈಸೂರು ಮೇಯರ್ ಮೈತ್ರಿ ದಂಗಲ್: ಮಧ್ಯಪ್ರವೇಶಿಸಿದ ಕಾಂಗ್ರೆಸ್ ಹೈಕಮಾಂಡ್
ಮೈಸೂರು ಪಾಲಿಕೆ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ.
ಬೆಂಗಳೂರು, (ಮಾ.01): ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುಂದುವರಿಸಿರುವ ಕುರಿತು ಹೈಕಮಾಂಡ್ಗೆ ವರದಿ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆ ಎಐಸಿಸಿ ಆಂತರಿಕ ತನಿಖಾ ಜವಾಬ್ದಾರಿಯನ್ನು ಎಐಸಿಸಿ ಕಾರ್ಯದರ್ಶಿ ಮಧು ಯಷ್ಕಿ ಗೌಡ್ ಅವರ ಹೆಗಲಿಗೆ ಹಾಕಲಾಗಿದೆ. ಇದರಿಂದ ಮಧು ಯಷ್ಕಿ ಗೌಡ್ ನಾಳೆಯೇ ಮೈಸೂರಿಗೆ ಬಂದು ಕಾರ್ಪೋರೆಟರ್ಗಳ ಜೊತೆ ಒನ್ ಟು ಒನ್ ಸಭೆ ನಡೆಸಲಿದ್ದಾರೆ.
ಬಿಜೆಪಿಯನ್ನ ಅಧಿಕಾರದಿಂದ ದೂರ ಇಡುವಲ್ಲಿ ಕೈ ಸಕ್ಸಸ್, ಆದ್ರೂ ಸಿದ್ದುಗೆ ಹಿನ್ನಡೆ
ಕಾಂಗ್ರೆಸ್ ನಾಯಕರ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿದ್ದ ಮೈಸೂರು ಪಾಲಿಕೆ ಮೈತ್ರಿಯಿಂದ ಸಿದ್ದರಾಮಯ್ಯ ಅವರಿಗೆ ಭಾರೀ ಹಿನ್ನಡೆಯಾಗಿತ್ತು. ಅಲ್ಲದೇ ಸಿದ್ದರಾಮಯ್ಯ ಬೆಂಬಲಿತ ನಾಯಕರು ಮೈತ್ರಿ ಕುರಿತಂತೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಇದರ ನಡುವೆಯೇ ತನ್ವೀರ್ ಸೇಠ್ ಕೂಡ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇದಲ್ಲದೇ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳಿದ್ದವು. ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಹೈಕಮಾಂಡ್ ಆಂತರಿಕ ತನಿಖೆಗೆ ತನಿಖಾಧಿಕಾರಿಯನ್ನು ನೇಮಿಸಿದೆ.