Asianet Suvarna News Asianet Suvarna News

ಕಾಂಗ್ರೆಸ್‌ಗೆ ಜನಾದೇಶ ಇದೆ, ಆಪರೇಷನ್‌ ಕಮಲ ಪ್ರಮೇಯವೇ ಇಲ್ಲ: ಶ್ರೀರಾಮುಲು

ಬಿಜೆಪಿಗೆ ಆಪರೇಷನ್‌ ಕಮಲ ಮಾಡಿ, ಈ ಸರ್ಕಾರ ಬೀಳಿಸುವ ದರ್ದು ಇಲ್ಲ. ರಾಜ್ಯದ ಜನರು ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದು, 136 ಶಾಸಕರು ಗೆದ್ದಿದ್ದಾರೆ. ಗ್ಯಾರಂಟಿಗಳ ಮೇಲೆ ಗೆದ್ದಿರುವ ಇಬ್ಬರು ಶಾಸಕರು ಈಗ ಆಪರೇಷನ್‌ ಕಮಲದ ಬಗ್ಗೆ ಹೇಳುತ್ತಿದ್ದಾರೆ: ಮಾಜಿ ಸಚಿವ ಬಿ. ಶ್ರೀರಾಮುಲು 

Congress Has Mandate there is no Operation BJP Says B Sriramulu grg
Author
First Published Oct 29, 2023, 12:49 PM IST

ಹೊಸಪೇಟೆ(ಅ.29): ರಾಜ್ಯದ ಜನತೆ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದಾರೆ. ಹಾಗಾಗಿ ಆಪರೇಷನ್‌ ಕಮಲ ಮಾಡುವ ಪ್ರಮೇಯವೇ ಉದ್ಭವವಾಗುವುದಿಲ್ಲ. ಈ ಸರ್ಕಾರ ಐದು ವರ್ಷ ಪೂರೈಸಲಿ ಎಂದು ನಾನು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಳ್ಳುವೆ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲಾಗುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಹೊಸದಾಗಿ ಆಯ್ಕೆಯಾಗಿರುವ ಇಬ್ಬರು ಶಾಸಕರು ತಮ್ಮ ನಾಯಕರನ್ನು ಮೆಚ್ಚಿಸಲು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಆಡಿಯೋ ಇದೆ ಎಂದು ಹೇಳುತ್ತಿದ್ದಾರೆ. ಬಿಜೆಪಿಗೆ ಆಪರೇಷನ್‌ ಕಮಲ ಮಾಡಿ, ಈ ಸರ್ಕಾರ ಬೀಳಿಸುವ ದರ್ದು ಇಲ್ಲ. ರಾಜ್ಯದ ಜನರು ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದು, 136 ಶಾಸಕರು ಗೆದ್ದಿದ್ದಾರೆ. ಗ್ಯಾರಂಟಿಗಳ ಮೇಲೆ ಗೆದ್ದಿರುವ ಇಬ್ಬರು ಶಾಸಕರು ಈಗ ಆಪರೇಷನ್‌ ಕಮಲದ ಬಗ್ಗೆ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.

ಶ್ರೀರಾಮುಲುವನ್ನು ರಾಜ್ಯಮಟ್ಟದಲ್ಲಿ ಬೆಳೆಸಿದ್ದೇ ನಾನು: ಜನಾರ್ದನ ರೆಡ್ಡಿ

ಬಿಜೆಪಿ ಆಪರೇಷನ್‌ ನಡೆಸಿಲ್ಲ:

ಈ ಸರ್ಕಾರದಲ್ಲಿ ರಾಜ್ಯದ ಯಾವುದೇ ಶಾಸಕರಿಗೆ ನಯಾ ಪೈಸೆ ಅನುದಾನ ದೊರೆತಿಲ್ಲ. ಸಿಎಂ ಹಾಗೂ ಡಿಸಿಎಂ ಗಮನ ಸೆಳೆಯಲು ಶಾಸಕರು ಈ ರೀತಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯಿಂದ ಆಪರೇಷನ್‌ ಕಮಲ ನಡೆದೇ ಇಲ್ಲ. ನಾವು ಏಕೆ ಆಪರೇಷನ್‌ ಮಾಡಬೇಕು? ಅವರೇ ಅನುದಾನಕ್ಕಾಗಿ ಈ ರೀತಿ ಹೇಳುತ್ತಿದ್ದಾರೆ. ಶಾಸಕರೇ ಸರ್ಕಾರದ ಗಮನ ಸೆಳೆಯಲು ಆಪರೇಷನ್‌ ಕಮಲದ ಹೇಳಿಕೆ ಕೊಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್‌ನಲ್ಲಿ ಮೊದಲು ಎರಡು ಬಾಗಿಲು ಇತ್ತು. ಈಗ ಆರು ಬಾಗಿಲುಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅಲ್ಲದೇ ಪರಮೇಶ್ವರ, ಹರಿಪ್ರಸಾದ್‌ ಮತ್ತಿತರ ನಾಯಕರ ಬಣಗಳು ಕಾಂಗ್ರೆಸ್‌ನಲ್ಲಿದೆ. ಹಾಗಾಗಿ ಶಾಸಕರು ಸಿಎಂ ಹಾಗೂ ಡಿಸಿಎಂ ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಆಪರೇಷನ್‌ ಕಮಲದ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ ಎಂದರು.

60 ಪರ್ಸೆಂಟ್‌ ಸರ್ಕಾರ: 

ಕಾಂಗ್ರೆಸ್‌ನವರು ಸುಖಾಸುಮ್ಮನೆ ನಮ್ಮ ಮೇಲೆ 40 ಪರ್ಸೆಂಟ್ ಸರ್ಕಾರ ಎಂದು ಸುಳ್ಳು ಆರೋಪ ಹೊರಿಸಿದರು. ಈಗಿನ ಕಾಂಗ್ರೆಸ್‌ ಸರ್ಕಾರ 60 ಪರ್ಸೆಂಟ್‌ ಸರ್ಕಾರ ಆಗಿದೆ. ಇಲ್ಲಿ ಸಂಗ್ರಹವಾಗಿದ್ದ ಹಣ ಎಲ್ಲಿಗೆ ಹೋಗುತ್ತಿತ್ತು ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಇಡಿ, ಐಟಿ, ಸಿಬಿಐ ಆಗಲಿ ಸ್ವತಂತ್ರ ಸಂಸ್ಥೆಗಳಾಗಿವೆ. ಅವರು ಬಿಜೆಪಿ, ಕಾಂಗ್ರೆಸ್‌ ಎಂಬ ಭೇದ ಎಣಿಸದೇ ಎಲ್ಲರ ಮನೆಗಳ ಮೇಲೂ ರೇಡ್‌ ಮಾಡಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರ ಮನೆಗಳ ಮೇಲೂ ರೇಡ್‌ ಮಾಡಿರಲಿಲ್ವಾ? ಬಿಜೆಪಿ ನಾಯಕರ ಮನೆಗಳ ಮೇಲೂ ಐಟಿ, ಇಡಿ ದಾಳಿಗಳಾಗಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಟಿಕೆಟ್‌ ವಂಚನೆ ಕೇಸ್‌ ಟ್ವಿಸ್ಟ್‌: ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮುಲು ಹೆಸರೇಳಿದ ಆರೋಪಿ

ಕನಕಪುರ, ರಾಮನಗರ ಭಾಗದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಸ್ತಿ ಮಾಡಿದ್ದಾರೆ. ಹಾಗಾಗಿ ಬೆಂಗಳೂರಿನ ರೇಟ್‌ ಸಿಗಲಿ ಎಂದು ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರ್ಪಡೆ ಮಾಡಲು ಹೊರಟಿದ್ದಾರೆ. ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಆ ಮಟ್ಟಕ್ಕಿಲ್ಲ. ಬಳ್ಳಾರಿ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿಕೆ ನೀಡಿದರೂ ಉಭಯ ಜಿಲ್ಲೆಗಳನ್ನು ಮತ್ತೆ ಒಂದೇ ಜಿಲ್ಲೆಯನ್ನಾಗಿಸುವುದು ಅವರ ಕೈಯಲಿಲ್ಲ. ಇದು ಸಾಧ್ಯನಾ? ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.

ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆಯನ್ನು ಹೈಕಮಾಂಡ್‌ ಮಾಡಲಿದೆ. ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Follow Us:
Download App:
  • android
  • ios