Assembly Election: ಬೆಲ್ಲದಗೆ ಕಹಿ ನೀಡಲು ಕಾಂಗ್ರೆಸ್‌ನಲ್ಲಿ ಹುಟ್ಟಿಕೊಂಡ ದೊಡ್ಡ ಪಡೆ!

  • ಬೆಲ್ಲದಗೆ ಕಹಿ ನೀಡಲು ಕಾಂಗ್ರೆಸ್‌ನಲ್ಲಿ ಹುಟ್ಟಿಕೊಂಡ ದೊಡ್ಡ ಪಡೆ!
  • ಪಶ್ಚಿಮ ಕ್ಷೇತ್ರಕ್ಕೆ ಕಾಂಗ್ರೆಸ್‌ ಆಕಾಂಕ್ಷಿಗಳಾಗಿ ಹತ್ತು ಜನರಿಂದ ಅರ್ಜಿ ಸಲ್ಲಿಕೆ
  • ಮೂರು ದಶಕಗಳ ಕಾಲ ಕ್ಷೇತ್ರ ಆಳಿದ ಬೆಲ್ಲದ ಕುಟುಂಬ
Congress force is ready to give a shock to Aravinda Bellad assembly election rav

ಬಸವರಾಜ ಹಿರೇಮಠ

ಧಾರವಾಡ (ನ.26) : ಬಿಜೆಪಿ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ ಕ್ಷೇತ್ರವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕಸಿದುಕೊಳ್ಳಲು ಹವಣಿಸುತ್ತಿದೆ. ಈ ಮೊದಲಿನಿಂದಲೂ ಈ ಪ್ರಯತ್ನಗಳು ನಡೆದರೂ ಈ ಬಾರಿ ಮಾತ್ರ ವಿಶೇಷ ಪ್ರಯತ್ನಗಳು ನಡೆದಿವೆ.

ಎಂಟು ವಾರ್ಡ್‌ಗಳನ್ನು ಹೊರತುಪಡಿಸಿ ಇಡೀ ಧಾರವಾಡ ನಗರ ಹಾಗೂ ಹುಬ್ಬಳ್ಳಿಯ ಭಾಗಶಃ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಮತದಾರರು ಇದ್ದಾರೆ. ಎಲ್ಲ ವರ್ಗದ ಜನರಿದ್ದು ಕ್ಷೇತ್ರದ ವ್ಯಾಪ್ತಿಯೂ ದೊಡ್ಡದು. ಇಲ್ಲಿಯ ವರೆಗೆ ಸಾಕಷ್ಟುಅಭಿವೃದ್ಧಿ ಕೆಲಸಗಳು ಆಗಿದ್ದು ಅದಕ್ಕಿಂತ ಹೆಚ್ಚಾಗಿ ಬಾಕಿ ಸಹ ಇವೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾಗಲು ಕಾಂಗ್ರೆಸ್‌ ಪಕ್ಷದಿಂದ ದುಂಬಾಲು ಬಿದ್ದಿದ್ದಾರೆ. ಈ ಕ್ಷೇತ್ರಕ್ಕೆ ಬರೋಬ್ಬರಿ ಹತ್ತು ಜನ ಟಿಕೆಟ್‌ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ.

ಮುಸ್ಲಿಂರ 2ಬಿ ಮೀಸಲು ಹಿಂಪಡೆಯಲು ಯತ್ನಾಳ್, ಬೆಲ್ಲದ್ ಆಗ್ರಹ

ಈ ಹಿಂದಿನ ಎರಡು ಚುನಾವಣೆಗಳಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ ಇಸ್ಮಾಯಿಲ್‌ ತಮಟಗಾರ ಸ್ಪರ್ಧಿಸಿ ಹೀನಾಯವಾಗಿ ಸೋಲು ಕಂಡಿದ್ದರು. ಬೆಲ್ಲದ ಅಥವಾ ಬಿಜೆಪಿ ವಿರುದ್ಧ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸಮರ್ಥ ಅಭ್ಯರ್ಥಿಗಳೇ ಇಲ್ಲವೇ ಎನ್ನುವಂತಾಗಿತ್ತು. ಆದರೆ, ಈಗ ಬದಲಾಗಿದೆ. ಬಿಜೆಪಿ ವಿರುದ್ಧ ಹತ್ತು ಅಭ್ಯರ್ಥಿಗಳು ಹುಟ್ಟಿಕೊಂಡಿದ್ದು ನಮಗೆ ಈ ಬಾರಿ ಟಿಕೆಟ್‌ ದೊರತರೆ ಬಿಜೆಪಿ ಸೋಲಿಸುತ್ತೇವೆಂದು ಪಣ ತೊಟ್ಟಿದ್ದಾರೆ.

ಯಾರಾರ‍ಯರು ಆಕಾಂಕ್ಷಿಗಳು:

ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಸದ್ಯಕ್ಕೆ ಬಿಜೆಪಿಗೆ ಕಾಂಗ್ರೆಸ್ಸಿನಿಂದ ಪ್ರಬಲ ಪೈಪೋಟಿ. ಕಳೆದ ಬಾರಿಯೂ ಟಿಕೆಟ್‌ ಕೇಳಿದ್ದು ಇಸ್ಮಾಯಿಲ್‌ ತಮಟಗಾರ ಪಾಲಾಗಿತ್ತು. ಈ ಬಾರಿ ತಮಟಗಾರ ಗ್ರಾಮೀಣಕ್ಕೆ ಹೋಗುತ್ತಿದ್ದು ದಾರಿ ಸರಳವಾಗಿದೆ. ತಕ್ಕ ಮಟ್ಟಿಗೆ ಕ್ಷೇತ್ರದ ಸಂಚಾರ ಮಾಡಿದ್ದು ತಮ್ಮ ಹೆಸರನ್ನು ಮತದಾರರ ಮನಕ್ಕೆ ಮುಟ್ಟಿಸಿದ್ದಾರೆ. ಹಾಗೆಯೇ, ಬ್ಲಾಕ್‌ ಅಧ್ಯಕ್ಷ ನಾಗರಾಜ ಗೌರಿ ಸಹ ಟಿಕೆಟ್‌ ಕೇಳಿದ್ದು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನು, ಕೆಪಿಸಿಸಿ ಸದಸ್ಯರಾಗಿ, ಮಾಧ್ಯಮ ವಕ್ತಾರರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿರುವ ನ್ಯಾಯವಾದಿ ಪಿ.ಎಚ್‌. ನೀರಲಕೇರಿ ಸಹ ಪ್ರಬಲ ಆಕಾಂಕ್ಷಿ. ಈ ಹಿಂದೆ ವಿಧಾನಪರಿಷತ್‌ ಚುನಾವಣೆ ಸಹ ಎದುರಿಸಿರುವ ಅವರು ರಾಜಕೀಯ ವಿಶ್ಲೇಷಣೆ, ಚರ್ಚೆಯಲ್ಲಿ ಚಾಣಾಕ್ಷರು. ಇದರೊಂದಿಗೆ ಸದ್ಯ ಮಹಾನಗರ ಪಾಲಿಕೆ ಸದಸ್ಯರಾಗಿರುವ, ಮರಾಠಾ ಸಮುದಾಯ ಮುಖಂಡ ಮಯೂರ ಮೋರೆ ಸಹ ಅರ್ಜಿ ಸಲ್ಲಿಸಿದ್ದಾರೆ. ಯುವಕ ಹಾಗೂ ವೈದ್ಯರಾಗಿರುವ ಅವರು ಕ್ಷೇತ್ರದ ಜನರ ಸೇವೆಗೆ ಅವಕಾಶ ಕೇಳಿದ್ದಾರೆ.

ಹಾಗೆಯೇ, ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಹಾಗೂ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿಅವರ ಸಹೋದರ ಶರಣಪ್ಪ ಕೊಟಗಿ ಸಹ ಪ್ರಬಲ ಆಕಾಂಕ್ಷಿ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದು ಅವಕಾಶ ನೀಡಿದರೆ ವಿದ್ಯಾಕಾಶಿ ಧಾರವಾಡ ನಗರವನ್ನು ಮತ್ತಷ್ಟುಅಭಿವೃದ್ಧಿಗೊಳಿಸುವದಾಗಿ ಹೇಳುತ್ತಾರೆ. ಸಾಕಷ್ಟುಸಾಮಾಜಿಕ ಸೇವೆ ಮಾಡುತ್ತಿರುವ ಕೊಟಗಿ ಈ ಸಲ ಟಿಕೆಟ್‌ಗೆ ಭಾರೀ ಪೈಪೋಟಿ ಒಡ್ಡಿದ್ದಾರೆ.

ಬ್ಲಾಕ್‌ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಬಸವರಾಜ ಮಲಕಾರಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದು ಅವಕಾಶ ಕೇಳಿದ್ದಾರೆ. ಮಾಜಿ ಸಚಿವ ಎಸ್‌.ಆರ್‌. ಮೋರೆ ಅವರ ಪುತ್ರಿ ಕೀರ್ತಿ ಮೋರೆ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ, ಕಾಂಗ್ರೆಸ್‌ ಮುಖಂಡ ಅಲ್ತಾಫ್‌ ಕಿತ್ತೂರ, ಸಮಾಜ ಸೇವಕ ಆರ್‌.ಕೆ. ಪಾಟೀಲ ಹಾಗೂ ರಫೀಕ್‌ ಸಾವಂತನ್ನವರ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ.

ಚಂದ್ರಕಾಂತ ಬೆಲ್ಲದ ಅವರು ನಾಲ್ಕು ಬಾರಿ ಹಾಗೂ ಸದ್ಯ ಶಾಸಕರಾಗಿರುವ ಅರವಿಂದ ಬೆಲ್ಲದ ಅವರು ಎರಡು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಬೆಲ್ಲದ ಕುಟುಂಬಕ್ಕೆ ಈ ಕ್ಷೇತ್ರ ಮೀಸಲು ನೀಡಲಾಗಿದೆಯೇ ಎಂಬ ಪ್ರಶ್ನೆ ಕಾಂಗ್ರೆಸ್‌ ಮುಖಂಡರು ಹಾಕುತ್ತಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರ ಸೇವೆಗೆ ನಮಗೂ ಅವಕಾಶ ಒದಗಿಸಿಕೊಡಿ ಎಂದು ಬೆನ್ನು ಬಿದ್ದಿರುವ ಅವರು ಟಿಕೆಟ್‌ಗಾಗಿ ಪಕ್ಷದಲ್ಲಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಚುನಾವಣೆಗೆ ಇನ್ನೂ ಆರೇಳು ತಿಂಗಳು ಇರುವಾಗಲೇ ಕ್ಷೇತ್ರದಲ್ಲಿ ಇಷ್ಟೊಂದು ಪೈಪೋಟಿ ನಡೆದಿದ್ದು ಬಿಜೆಪಿ ಭದ್ರಕೋಟೆಯನ್ನು ಒಡೆಯಲು ಕಾಂಗ್ರೆಸ್‌ ಯಾರನ್ನು ಅಖಾಡಕ್ಕೆ ಇಳಿಸಳಿದೆ ಎಂಬುದನ್ನು ಕಾದು ನೋಡಬೇಕಿದೆ.

ಹುಬ್ಬಳ್ಳಿಗೆ ಆಗಮಿಸಿದ ಬಿಜೆಪಿ ಉಸ್ತುವಾರಿ, ಶಾಸಕ ಬೆಲ್ಲದ ಶಕ್ತಿ ಪ್ರದರ್ಶನ

ಪಶ್ಚಿಮ ಕ್ಷೇತ್ರಕ್ಕೆ ಬಿಜೆಪಿಯಿಂದ ಈ ಬಾರಿ ಅರವಿಂದ ಬೆಲ್ಲದ ಮಾತ್ರವಲ್ಲದೇ ಇನ್ನೊರ್ವ ಲಿಂಗಾಯತ ಮುಖಂಡರೊಬ್ಬರು ಟಿಕೆಟ್‌ ಕೇಳಿದ್ದಾರೆ. ಕೈಗಾರಿಕೋದ್ಯಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರಾಗಿರುವ ಸಿ.ಎಸ್‌. ಪಾಟೀಲ (ರಾಜು) ಬಿಜೆಪಿಯಿಂದ ಟಿಕೆಟ್‌ ಕೇಳಿದ್ದಾರೆ. ಇನ್ನು, ಜೆಡಿಎಸ್‌ನಿಂದ ಈ ಕ್ಷೇತ್ರಕ್ಕೆ ಗುರುರಾಜ ಹುಣಸೀಮರದ ಸ್ಪರ್ಧಿಸುತ್ತಿದ್ದು ಕ್ಷೇತ್ರಕ್ಕೆ ತೀವ್ರ ಪೈಪೋಟಿ ಏರ್ಪಡುವುದರಲ್ಲಿ ಸಂಶಯವೇ ಇಲ್ಲ.

Latest Videos
Follow Us:
Download App:
  • android
  • ios