ಬಿಜೆಪಿ ಬಾಗಿಲು ತಟ್ಟಿದ ಕಾಂಗ್ರೆಸ್ ಮಾಜಿ ಸಂಸದ, ಯಡಿಯೂರಪ್ಪ ಜತೆ ಗುಪ್ತ್-ಗುಪ್ತ್ ಮಾತು
ಬಿಜೆಪಿ ಬಾಗಿಲು ತಟ್ಟಿದ ಕಾಂಗ್ರೆಸ್ ಮಾಜಿ ಸಂಸದ, ಯಡಿಯೂರಪ್ಪ ಜತೆ ಗುಪ್ತ್-ಗುಪ್ತ್ ಮಾತು
ಬೆಂಗಳೂರು, (ಸೆಪ್ಟೆಂಬರ್. 03): ಮೊನ್ನೇ ಅಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿರುವ ಮಾಜಿ ಸಂಸದ ಮುದ್ದಹನುಮೇಗೌಡ ಅವರು ಇದೀಗ ಬಿಜೆಪಿ ಬಾಗಿಲು ತಟ್ಟಿದ್ದಾರೆ.
ಹೌದು..ಇದಕ್ಕೆ ಪೂರಕವೆಂಬಂತೆ ಮುದ್ದಹನುಮೇಗೌಡ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಪಕ್ಷ ಸೇರ್ಪಡೆ ಬಗ್ಗೆ ಮಹತ್ವದ ಮಾತುಕತೆ ಮಾಡಿದ್ದಾರೆ.
ಕುಣಿಗಲ್ ನಿಂದ ವಿಧಾನಸಭಾ ಚುನವಣೆಗೆ ಸ್ಪರ್ಧಿಸಲು ಮುದ್ದಹನುಮೇಗೌಡ ಬಯಸಿದ್ದು, ತಮ್ಮ ಉದ್ದೇಶವನ್ನು ಯಡಿಯೂರಪ್ಪ ಅವರ ಮುಂದೆ ಬಿಚ್ಚಿಟ್ಟಿದ್ದಾರೆ.
ಮತ್ತೋರ್ವ ಹಿರಿಯ ನಾಯಕ ಕಾಂಗ್ರೆಸ್‌ಗೆ ಗುಡ್ ಬೈ: ಸಿದ್ದು, ಡಿಕೆಶಿ ಭೇಟಿಯಾಗಿ ರಾಜೀನಾಮೆ ಘೋಷಣೆ
ಇದಕ್ಕೆ ಪಕ್ಷ ಸೇರ್ಪಡೆಗೆ ಸೂಕ್ತ ವೇದಿಕೆ ಕಲ್ಪಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದು, ಇನ್ನಷ್ಟು ನಾಯಕರ ಜತೆಗೆ ಒಮ್ಮೆಲೆ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸೋಣ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಇದೇ ವಿಚಾರದ ಬಗ್ಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮುದ್ದುಹನುಮೇಗೌಡ ಈಗಾಗಲೇ ನನ್ನ ಜೊತೆ ಮಾತನಾಡಿದ್ದಾರೆ. ಪಕ್ಷಕ್ಕೆ ಸೇರುವುದಾಗಿ ತಿಳಿಸಿದ್ದಾರೆ.
ಅವರಷ್ಟೇ ಅಲ್ಲ. ಇನ್ನಷ್ಟು ಮುಖಂಡರು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.
2019ರಿಂದ ಅಂತರಕಾಯ್ದುಕೊಂಡಿದ್ದ ಮುದ್ದಹನುಮೇಗೌಡ
ಹೌದು...ಅಂದು ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿತ್ತು. ಬದಲಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರಿನಲ್ಲಿ ದೇವೇಗೌಡ ಅವರನ್ನ ಕಣಕ್ಕಿಳಿಸಲಾಯ್ತು. ಅಂದಿನಿಂದ ಹಿರಿಯ ನಾಯಕ ಮುದ್ದಹನುಮೇಗೌಡ್ರು ಕಾಂಗ್ರೆಸ್ ಕಾರ್ಯಚಟುವಟಿಕೆಗಳಿಂದ ದೂರ ಉಳಿಯುವ ಮೂಲಕ ಅಸಮಾಧಾನ ಹೊರಹಾಕುತ್ತಾ ಬಂದಿದ್ದಾರೆ.
ಕುಣಿಗಲ್ ಮೇಲೆ ಮುದ್ದಹನುಮೇಗೌಡ್ರ ಕಣ್ಣು
ಯೆಸ್...ಈ ಭಾರಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಜ್ಜಾಗಿರುವ ಮುದ್ದಹನುಮೇಗೌಡ್ರು, ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಆದರೆ, ಟಿಕೆಟ್ ಭರವಸೆ ಸಿಕ್ಕಿಲ್ಲ. ಯಾಕಂದ್ರೆ ಹಾಲಿ ಶಾಸಕ ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ದೂರದ ಸಂಬಂಧಿಯಾಗಿದ್ದಾರೆ. ಇದರಿಂದ ಅವರಿಗೆ ಟಿಕೆಟ್ ತಪ್ಪಿಸುವುದು ಕಷ್ಟಸಾಧ್ಯ ಎಂದು ಪರೋಕ್ಷವಾಗಿ ಮುದ್ದಹನುಮೇಗೌಡ್ರಿಗೆ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮುದ್ದಹನುಮೇಗೌಡ ಅವರು ಅಸಮಾಧಾನಗೊಂಡಿದ್ದು, ಇದೀಗ ಅಂತಿಮವಾಗಿ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ.
ಕೃಷ್ಣ ಕುಮಾರ್ ಅವಕಾಶ ನೀಡ್ತಾರಾ?
ಒಂದು ವೇಳೆ ಬಿಜೆಪಿ ವರಿಷ್ಠರು ಕುಣಿಗಲ್ ಕ್ಷೇತ್ರದ ಟಿಕೆಟ್ ಭರವಸೆ ನೀಡಿ ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ್ರೆ, ಇತ್ತ ಡಿ.ಕೃಷ್ಣ ಕುಮಾರ್ ಸೈಡ್ ಲೈನ್ ಆಗುವುದರಲ್ಲಿ ಅನುಮಾನವೇ ಇಲ್ಲ.
ಹೌದು...2018, 2013 ಹಾಗೂ 2008ರಲ್ಲಿ ಹೀಗೆ ಸತತ ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಕೃಷ್ಣ ಕುಮಾರ್ ಸೋಲುಕಂಡಿದ್ದು, 2023ರ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಮತ್ತೊಂದೆಡೆ ಕುಣಿಗಲ್‌ನಲ್ಲಿ ಕೃಷ್ಣ ಕುಮಾರ್ ವರ್ಕೌಟ್ ಆಗುತ್ತಿಲ್ಲವೆಂದು ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿ ಪಡಬೇಕಿಲ್ಲ. ಇದಕ್ಕೆ ಕೃಷ್ಣ ಕುಮಾರ್ ಒಪ್ಪುತ್ತಾರೋ? ಇಲ್ಲವೋ ಎನ್ನುವುದು ಮುಮದಿರುವ ಪ್ರಶ್ನೆ