ಕಾಂಗ್ರೆಸ್-ಬಿಜೆಪಿ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಕಿತ್ತಾಟ, ಯಾರ ಪಾಲಾಗುತ್ತೆ ಪಟ್ಟ?
* ಕಾಂಗ್ರೆಸ್-ಬಿಜೆಪಿ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ಕಿತ್ತಾಟ
* ಮ್ಯಾಜಿಕ್ ಸಂಖ್ಯೆ ಬಲದ ಲೆಕ್ಕಾಚಾರ ಜೋರು
* ಯಾರ ಪಾಲಾಗಲಿದೆ ನಗರಸಭೆ ಅಧ್ಯಕ್ಷ ಪಟ್ಟ?
ರಾಯಚೂರು(ಮಾ.28): ಸ್ಥಳೀಯ ನಗರಸಭೆ ಅಧ್ಯಕ್ಷರಾಗಿದ್ದ ಈ.ವಿನಯ ಕುಮಾರ ವಿರುದ್ಧ ಬಹುತೇಕ ಸದಸ್ಯರು ಮಂಡಿಸಿದ ಅವಿಶ್ವಾಸದಿಂದಾಗಿ ಅಧಿಕಾರ ಕಳೆದುಕೊಂಡ ಪರಿಣಾಮ ತೆರವಾದ ಆ ಜಾಗವನ್ನು ಭರ್ತಿ ಮಾಡಲು, ಅಧಿಕಾರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವುದಕ್ಕಾಗಿ ಬಿಜೆಪಿ-ಕಾಂಗ್ರೆಸ್ ತೀವ್ರ ಪೈಪೋಟಿ ನಡೆಸಿವೆ. ಮಾ.30 ಕ್ಕೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವುದರಿಂದ, ಅಧ್ಯಕ್ಷ ಸ್ಥಾನದ ಪಟ್ಟಯಾರ ಪಾಲಾಗಲಿದೆ ಎನ್ನುವ ಕುತೂಹಲವು ಜಾಸ್ತಿಯಾಗಿದೆ.
ತೆರವುಗೊಂಡಿರುವ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಿಂದ ಸಾಜೀದ್ ಸಮೀರ್, ಬಿಜೆಪಿಯಿಂದ ಲಲಿತಾ ಕಡಗೋಳ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅವರುಗಳಿಗೆ ಮತ ಹಾಕುವುದಕ್ಕಾಗಿ ಸದಸ್ಯರನ್ನು ಸೆಳೆಯಲು ಉಭಯ ಪಕ್ಷಗಳ ಮುಖಂಡರು ಹರಸಾಹಸ ಪಡುತ್ತಿದ್ದಾರೆ.
ಮ್ಯಾಜಿಕ್ ಸಂಖ್ಯೆಯ ಲೆಕ್ಕಾಚಾರ:
ಸ್ಪರ್ಧಿಸಲಿರುವ ಅಧ್ಯಕ್ಷರಿಗೆ ಬಹುತಮ ಪಡೆಯುವುದಕ್ಕಾಗಿ 19ರಿಂದ 20 ಮತಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮ್ಯಾಜಿಕ್ ಸಂಖ್ಯೆಯ ಲೆಕ್ಕಾಚಾರವು ನಡೆದಿದೆ. ನಮ್ಮ ಬಳಿ 19 ಸದಸ್ಯರಿದ್ದಾರೆ ಎಂದು ಬಿಜೆಪಿ ಆತ್ಮವಿಶ್ವಾಸದಲ್ಲಿದೆ. ಈ ಹಿನ್ನೆಲೆಯಲ್ಲಿ ಒಬ್ಬ ಪಕ್ಷೇತರ ಸದಸ್ಯರ ಜೊತೆಗೆ ಜೆಡಿಎಸ್ ಸದಸ್ಯರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಬಂಡಾಯದ ಸದಸ್ಯರಾಗಿರುವ ಏಳು ಜನರಲ್ಲಿ ಕೆಲವರು ಬಿಜೆಪಿಗೆ ಬೆಂಬಲಿಸುವ ಸಾಧ್ಯತೆಗಳಿವೆ. ಇದರ ಜೊತೆಗೆ ಸ್ವಪಕ್ಷದ ಸದಸ್ಯರಿಂದಲೆಯೇ ಅವಿಶ್ವಾಸಕ್ಕೊಳಗಾಗಿ ಅಧಿಕಾರ ತ್ಯಜಿಸಿರುವ ವಿನಯ ಕುಮಾರ ಯಾರಿಗೆ ಮತ ಹಾಕುತ್ತಾರೆ ಎನ್ನುವುದು ನಿಗೂಢವಾಗಿದೆ.
ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರಗೆ ಮತದಾನ ಹಕ್ಕನ್ನು ನೀಡುವ ವಿಷಯದಲ್ಲಿ ಜಿಲ್ಲಾಡಳಿತವು ಯಾವುದೇ ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ಅವರು ಹಕ್ಕು ಚಲಾಯಿಸುವುದು ಅನುಮಾನವಾಗಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮತ ಹಾಕುವ ಅಧಿಕಾರವನ್ನು ಕಳೆದುಕೊಂಡಿರುವ ರೇಣಮ್ಮ ಮತವು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಇನ್ನು ಕಾಂಗ್ರೆಸ್‌ಗೆ ಬೆಂಬಲಿಸಿದ್ದ ಹೇಮಲತಾ ಹಾಗೂ ಪಕ್ಷೇತರ ಸದಸ್ಯ ಸುನೀಲ್ ಕುಮಾರ ಅವರು ಇದೀಗ ಕಮಲದ ಕಡೆ ಮುಖ ಮಾಡಿರುವುದು ಇದರ ಜೊತೆಗೆ ಉಳಿದ ಎರಡ್ಮೂರು ಪಕ್ಷೇತರರು, ಜೆಡಿಎಸ್ ಸದಸ್ಯರು ಪಕ್ಷ ನಿಷ್ಠೆಯನ್ನು ಗಾಳಿಗೆ ತೂರಿ ಬಿಜೆಪಿಗೆ ಬೆಂಬಲಿಸಿದ್ದಾರೆ ಎನ್ನುವ ವಿಚಾರವು ಕೈ ಪಾಳೆಯಲ್ಲಿ ಕಸಿವಿಸಿಯನ್ನು ಮೂಡಿಸಿದೆ.
ಪಟ್ಟಕ್ಕಾಗಿ ಹಣದ ಹೊಳೆ:
ಹೊಂದಾಣಿಕೆ ರಾಜಕೀಯಕ್ಕೆ ಹೆಸರುವಾಸಿಯಾಗಿರುವ ರಾಯಚೂರು ನಗರಸಭೆ ಆಡಳಿತ ನಡೆಸುತ್ತಿರುವ ಸದಸ್ಯರು ಪಕ್ಷ ನಿಷ್ಠೆ, ವರಿಷ್ಠರ ಮೇಲೆ ಒಲವನ್ನು ತೋರಿಸದೇ ಇರುವುದು, ಅವಿಶ್ವಾಸವೇ ನಮ್ಮ ಉಸಿರು ಎನ್ನುವ ರೀತಿಯಲ್ಲಿ ವರ್ತಿಸುತ್ತಾ ಬಂದಿದ್ದಾರೆ. ಹಿಂದೆ ವಿನಯ ಕುಮಾರಗೆ ಅಧ್ಯಕ್ಷ ಪಟ್ಟಕಟ್ಟುವುದಕ್ಕಾಗಿ ಎಲ್ಲ ಸದಸ್ಯರು ಲಕ್ಷಾಂತರ ಹಣವನ್ನು ಪಡೆರುವ ವಿಷಯ ಬಹಿರಂಗವಾಗಿಯೇ ನಡೆತಿತ್ತು. ಇದೀಗ ಅಧ್ಯಕ್ಷ ಸ್ಥಾನ ಸಿದ್ಧಿಸಿಕೊಳ್ಳುವುದಕ್ಕಾಗಿ ಬಿಜೆಪಿ-ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿದೆ. ಅದಕ್ಕಾಗಿ ಸುಮಾರು ಎಂಟು ಕೋಟಿ ರು. ವೇಯಿಸಿರುವುದರ ಜೊತೆಗೆ ಸದಸ್ಯರಿಗೆ ಪ್ರವಾಸದ ಭಾಗ್ಯವನ್ನು ಸಹ ಕಲ್ಪಿಸಿಕೊಡಲಾಗಿದೆ. ಇಂತಹ ಸನ್ನಿವೇಶದ ಸುಳಿಯಲ್ಲಿ ಸ್ಥಳೀಯ ಸಿಎಂಸಿ ಸಿಕ್ಕಿ ಹಾಕಿಕೊಂಡಿರುವುದರಿಂದ ಪಕ್ಷ ನಿಷ್ಠೆ ಕುರಿತು ನಮ್ಮನ್ನು ಕೇಳಬೇಡಿ ಪ್ಲೀಸ್ ಎನ್ನುವ ಧೋರಣೆಯೇ ಎಲ್ಲರಲ್ಲಿಯೂ ಅಡಗಿರುವುದು ಜಗತ್ತಿಗೆ ಗೊತ್ತಿರುವ ವಿಷಯವಾಗಿದೆ.