ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ಗೆ ಲಾಭ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ
ಬಿಜೆಪಿ ಸರ್ಕಾರದ ದುರಾಡಳಿತ, ಮುಸ್ಲಿಂ ಸಮುದಾಯದ ವಿರೋಧಿ ಧೋರಣೆಗಳಿಂದಾಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.
ಶ್ರೀರಂಗಪಟ್ಟಣ (ಮೇ.21): ಬಿಜೆಪಿ ಸರ್ಕಾರದ ದುರಾಡಳಿತ, ಮುಸ್ಲಿಂ ಸಮುದಾಯದ ವಿರೋಧಿ ಧೋರಣೆಗಳಿಂದಾಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು. ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರಿಗೆ ಕೃತಜ್ಞತಾ ಹಾಗೂ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯದ ಮೇಲೆ ದಬ್ಬಾಳಿಕೆ ನಡೆಸಿದ ಪರಿಣಾಮ ಈ ಬಾರಿ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಅಲ್ಲದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣದಿಂದಾಗಿ ಕುರುಬ ಜನಾಂಗವೆಲ್ಲ ಅವರ ಬೆಂಬಲಕ್ಕೆ ನಿಂತಿತು ಎಂದರು.
ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಕುರುಬ ಸಮುದಾಯದ 25,000 ಮತದಾರರಿದ್ದಾರೆ. ಸಿದ್ದರಾಮಯ್ಯನವರು ಇದು ನನ್ನ ಕಡೆ ಚುನಾವಣೆ ಎಂದು ಹೇಳಿದ್ದು ತಮ್ಮ ಸಮುದಾಯದವರು ಸಿಎಂ ಆಗಲಿ ಎಂಬ ಭಾವನೆಯಿಂದ ಕುರುಬ ಹಾಗೂ ಮುಸಲ್ಮಾನ ಸಮುದಾಯದವರು ಒಂದು ಗೂಡಿದ ಪರಿಣಾಮ ಜೆಡಿಎಸ್ ಗೆ ಹಿನ್ನೆಡೆಯಾಗಿದೆ ಎಂದು ಹೇಳಿದರು. ಚುನಾವಣೆ ಬರುತ್ತದೆ, ಹೋಗುತ್ತದೆ ಜೆಡಿಎಸ್ ಕಾರ್ಯಕರ್ತರು ಧೈರ್ಯವಾಗಿರಿ. 2008 ರಲ್ಲಿ ನಾನು ಶಾಸಕನಾಗುವುದನ್ನು ತಪ್ಪಿಸಲು ದೊಡ್ಡ ವ್ಯೂಹ ರಚನೆ ಮಾಡಲಾಗಿತ್ತು. 2013ರಲ್ಲೂ ಷಡ್ಯಂತ್ರ ನಡೆಯಿತು. 2018 ರಲ್ಲಿ ಎಲ್ಲರ ಹಾರೈಕೆಯೊಂದಿಗೆ ದೊಡ್ಡ ಗೆಲುವು ಸಾಧಿಸಿ ಶಾಸಕನಾದೆ.
ರಾಜ್ಯ ರಾಜಕಾರಣದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ಕೆ.ಎಚ್.ಮುನಿಯಪ್ಪ
ನನ್ನ ಶಾಸಕ ಪದವಿಗೆ ದ್ರೋಹ ಬಗೆಯದೆ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇನೆ. ನಾನು ನೊಂದ ಜನರಿಗೆ ಪ್ರಾಮಾಣಿಕವಾಗಿ ಸೇವೆ ಮಾಡಿದ್ದೇನೆ. ಎಂದಿಗೂ ಕಾಲಹರಣ ಮಾಡಿಲ್ಲ. ಕೆಲವರಿಗೆ ನನ್ನಿಂದ ಮುಜುಗರ ಆಗಿರುವುದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು. ಹಿಜಾಬ್ ವಿವಾದ ಆರಂಭವಾದ ಮೂರು ದಿನಗಳವರೆಗೆ ಕಾಂಗ್ರೆಸ್ ನಾಯಕರು ಮಾತನಾಡಲಿಲ್ಲ. ನಾನು ಎಚ್.ಡಿ. ಕುಮಾರಸ್ವಾಮಿ ಅವರು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದೆವು. ಸರ್ವರೂ ಶಾಂತಿ ಸಹಬಾಳ್ವೆಯಿಂದ ಬಾಳ್ವೆ ಮಾಡಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿ ಸರ್ಕಾರ ದ್ವೇಷದ ರಾಜಕೀಯ ಮಾಡಿದ್ದರಿಂದ ಮುಸ್ಲಿಮರು ಒಂದುಗೂಡಿದ್ದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಜೆಡಿಎಸ… ಅಭ್ಯರ್ಥಿಗಳ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ಕ್ಷೇತ್ರದ ನೂತನ ಶಾಸಕರಿಗೆ ಅಭಿನಂದನೆಗಳು. ನಿಮ್ಮ ಒಳ್ಳೆಯ ಕೆಲಸಕ್ಕೆ ನಾವು ಕೂಡ ಸಾಥ್ ನೀಡುತ್ತೇವೆ. ಕೆಟ್ಟ, ದ್ವೇಷದ ಕೆಲಸ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ. ನನ್ನ ಜೀವ ಇರುವವರೆಗೂ ನಾನು ಜನರ ಪರವಾಗಿ ಇರುತ್ತೇನೆ. ಚುನಾವಣೆಗಳಿಗೂ ಸ್ಪರ್ಧೆ ಮಾಡುತ್ತೇನೆ. ನನ್ನ ಯೋಗ್ಯತೆ ಮೇಲೆ ಅಧಿಕಾರ ಬರುವ ದಿನಗಳವರೆಗೂ ಕಾಯುತ್ತೇನೆ. ಕಾರ್ಯಕರ್ತರು ನನ್ನ ಮೇಲೆ ಇಷ್ಟೊಂದು ಪ್ರೀತಿ, ವಿಶ್ವಾಸ ಇಟ್ಟಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಪಕ್ಷದ ಕಾರ್ಯಕರ್ತರ ಜೊತೆ ನಾನಿರುತ್ತೇನೆ ನೀವೆಲ್ಲ ಧೈರ್ಯವಾಗಿರಬೇಕು ಎಂ ಕಿವಿಮಾತು ಹೇಳಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್‌ಡಿಕೆ ಮುಂದಿದೆ ಸಾಕಷ್ಟು ಅಭಿವೃದ್ಧಿ ಸವಾಲುಗಳು
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪೈಲ್ವಾನ್ ಮುಕುಂದ, ಯುವ ಘಟಕ ಅಧ್ಯಕ್ಷ ಕಡತನಾಳು ಸಂಜಯ, ಕಾರ್ಯಾಧ್ಯಕ್ಷ ನಗುವನಹಳ್ಳಿ ಶಿವಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಮ್ಮಿಗೆ ಕಾಳೇಗೌಡ, ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ಶ್ರೀನಿವಾಸ್, ಲಿಂಗರಾಜು, ಕೃಷ್ಣಪ್ಪ, ನರಸಿಂಹೇಗೌಡ, ಎಸ್.ಟಿ ರಾಜು, ಗಂಜಾಂ ಶಿವು, ಮಾಜಿ ಸದಸ್ಯ ಸಾಯಿ ಕುಮಾರ್, ನಳಿನ ಸೇರಿದಂತೆ ಹಲವು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.