18ರಲ್ಲಿ 9 ಕ್ಷೇತ್ರಗಳ ಕೈ ಅಭ್ಯರ್ಥಿ ಅಂತಿಮ, ಉಳಿದ 9ಕ್ಕೆ ಎರಡನೇ ಪಟ್ಟಿ ನಿರೀಕ್ಷೆ, ಶಾಸಕರಿದ್ದಲ್ಲಿ ಸಲೀಸು..ಇಲ್ಲದಿರುವಲ್ಲೇ ತ್ರಾಸು, ಬಹು ಆಕಾಂಕ್ಷಿಗಳ ಪೈಪೋಟಿ.  

ಶ್ರೀಶೈಲ ಮಠದ

ಬೆಳಗಾವಿ(ಮಾ.26): ನಿರೀಕ್ಷೆಯಂತೆ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಹಾಲಿ ಐವರು ಶಾಸಕರಿಗೆ ಹಾಗೂ ಮೂವರು ಮಾಜಿ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದೆ. ಆಡಳಿತಾರೂಢ ಬಿಜೆಪಿಗಿಂತ ಮೊದಲೇ ಅಭ್ಯರ್ಥಿಗಳನ್ನು ಆಖಾಡಕ್ಕೆ ಇಳಿಸುವ ಮೂಲಕ ತೀವ್ರ ಪೈಪೋಟಿ ವೊಡ್ಡಲು ಕಾಂಗ್ರೆಸ್‌ ಸಜ್ಜಾಗಿದೆ.

ಯಮಕನಮರಡಿ (ಎಸ್‌ಟಿ ಮೀಸಲು) ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹಾಲಿ ಶಾಸಕಿ ಲಕ್ಷ್ಮೇ ಹೆಬ್ಬಾಳಕರ, ಖಾನಾಪುರದಿಂದ ಶಾಸಕಿ ಡಾ.ಅಂಜಲಿ ನಿಂಬಾಳ್ಕರ, ಬೈಲಹೊಂಗದಿಂದ ಹಾಲಿ ಶಾಸಕ ಮಹಾಂತೇಶ ಕೌಜಲಗಿ, ಚಿಕ್ಕೋಡಿಯಿಂದ ಶಾಸಕ ಗಣೇಶ ಹುಕ್ಕೇರಿ, ಕಾಗವಾಡದಿಂದ ರಾಜು ಕಾಗೆ, ಹುಕ್ಕೇರಿಯಿಂದ ಎ.ಬಿ.ಪಾಟೀಲ, ರಾಮದುರ್ಗದಿಂದ ಅಶೋಕ ಪಟ್ಟಣ ಹಾಗೂ ಕುಡಚಿ ಕ್ಷೇತ್ರದಿಂದ ಮಹೇಂದ್ರ ತಮ್ಮಣ್ಣವರ ಅವರಿಗೆ ಅವರಿಗೆ ಮೊದಲ ಹಂತದಲ್ಲಿ ಟಿಕೆಟ್‌ ನೀಡಲಾಗಿದೆ.

ಸತೀಶ್‌ ಜಾರಕಿಹೊಳಿ ಯಾವಾಗ ಸುನ್ನತ್‌ ಮಾಡ್ಸಿಕೊಂಡಿದ್ದಾರೆ: ಪ್ರತಾಪ್‌ ಸಿಂಹ

ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಮೊದಲ ಹಂತದಲ್ಲಿ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಈ ಕ್ಷೇತ್ರಗಳಲ್ಲಿ ಯಾವುದೇ ಗೊಂದಲ ಇಲ್ಲದಿದ್ದರಿಂದ ಟಿಕೆಟ್‌ ಘೋಷಿಸಲಾಗಿದೆ. ಕಾಂಗ್ರೆಸ್‌ನ ಹಾಲಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಆದರೆ, ಕಾಂಗ್ರೆಸ್‌ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಕಂಡುಬರುತ್ತಿಲ್ಲ. ಅದರಲ್ಲೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಚುನಾವಣೆ ಈ ಬಾರಿ ಗಮನ ಸೆಳೆದಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಎಂಟ್ರಿಕೊಟ್ಟು, ಲಕ್ಷ್ಮೇ ಹೆಬ್ಬಾಳಕರ ಅವರನ್ನು ಸೋಲಿಸುವುದಾಗಿ ಪಣ ತೊಟ್ಟಿದ್ದಾರೆ. ಇದನ್ನು ಸವಾಲಾಗಿ ಸ್ವೀಕರಿಸಿರುವ ಲಕ್ಷ್ಮೇ ಹೆಬ್ಬಾಳಕರ ಚುನಾವಣೆಗೆ ಯಾವುದೇ ಅಡ್ಡಿ ಆತಂಕವಿಲ್ಲದೇ ಒಗ್ಗಟ್ಟಿನಿಂದ ಮುನ್ನಡೆದಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿಯಲ್ಲಿ ನಡೆದ ಜನಧ್ವನಿ ಯಾತ್ರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಲಕ್ಷ್ಮೇ ಹೆಬ್ಬಾಳಕರ ಅವರನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡಿದ್ದರು. ಕಾಂಗ್ರೆಸ್‌ ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೇ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳಕರ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ ಅವರು ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಕಾಗವಾಡದಿಂದ ರಾಜು ಕಾಗೆ ಹಾಗೂ ಹುಕ್ಕೇರಿಯಿಂದ ಎ.ಬಿ.ಪಾಟೀಲ ಅವರಿಗೆ ನಿರೀಕ್ಷೆಯಂತೆಯೇ ಟಿಕೆಟ್‌ ನೀಡಲಾಗಿದೆ. ರಾಮದುರ್ಗ ಕ್ಷೇತ್ರದಲ್ಲಿ ಮಾಜಿ ಶಾಸಕ ಅಶೋಕ ಪಟ್ಟಣ ಅವರಿಗೆ ಟಿಕೆಟ್‌ ಘೋಷಣೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ಅರ್ಜುನ ಗುಡ್ಡದ ಅವರು ಬಂಡಾಯದ ಬಾವುಟ ಹಾರಿಸುವುದಾಗಿ ಘೋಷಣೆ ಮಾಡಿದ್ದಾರೆ.

ಕುಡಚಿ (ಎಸ್‌ಸಿ ಮೀಸಲು) ಕ್ಷೇತ್ರದಿಂದ ಹೊಸ ಮುಖಕ್ಕೆ ಮಣೆ ಹಾಕಿದ್ದು, ಮಹೇಂದ್ರ ತಮ್ಮಣ್ಣವರಿಗೆ ಟಿಕೆಟ್‌ ನೀಡಲಾಗಿದೆ. ಇಲ್ಲಿ ಮಾಜಿ ಶಾಸಕ ಎಸ್‌.ಬಿ.ಘಾಟಗೆ, ಅವರ ಪುತ್ರ ಅಮಿತ ಘಾಟಗೆ ಪ್ರಮುಖ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಘೋಷಣೆ ಆಗಿರುವುದರಿಂದ ಆಕಾಂಕ್ಷಿಗಳಾಗಿದ್ದ ಪ್ರಮುಖರ ಮುಂದಿನ ನಡೆಯೇನು? ಎಂಬುದೇ ತೀವ್ರ ಕುತೂಹಲ ಕೆರಳಿಸಿದೆ.

ಒಂಭತ್ತು ಕ್ಷೇತ್ರಕ್ಕೆ ಅಂತಿಮವಾಗದ ಟಿಕೆಟ್‌:

ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ನಿಪ್ಪಾಣಿ, ಗೋಕಾಕ, ಅರಬಾವಿ, ಕಿತ್ತೂರು, ರಾಯಬಾಗ, ಸವದತ್ತಿ, ಅಥಣಿ ಈ 9 ಕ್ಷೇತ್ರಗಳಿಗೆ ಇನ್ನು ಕಾಂಗ್ರೆಸ್‌ ಟಿಕೆಟ್‌ ಅಂತಿಮವಾಗಿಲ್ಲ. ಈ ಎಲ್ಲ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಟಿಕೆಟ್‌ ಘೋಷಣೆಯಾಗುವ ನಿರೀಕ್ಷೆಯಿದೆ. ಈ 9 ಕ್ಷೇತ್ರಗಳಲ್ಲಿಯೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.

ಕೈ ಟಿಕೆಟ್ ಘೋಷಣೆ ಬೆನ್ನಲ್ಲೇ ಬೆಳಗಾವಿಯಲ್ಲಿ ಭಿನ್ನಮತ ಸ್ಫೋಟ, ಸಿದ್ದರಾಮಯ್ಯ ನಿವಾಸಕ್ಕೆ ಸ್ವಾಮೀಜಿಗಳ ದೌಡು!

ಬೆಳಗಾವಿ ದಕ್ಷಿಣದಿಂದ ಮಾಜಿ ಶಾಸಕ ರಮೇಶ ಕುಡಚಿ, ಕೆಪಿಸಿಸಿ ಸದಸ್ಯೆ ಸರಳಾ ಸಾತಪೂತೆ, ಪ್ರಭಾವತಿ ಚಾವಡಿ, ರಮೇಶ ಗೋರಲ್‌, ಬೆಳಗಾವಿ ಉತ್ತರದಿಂದ ಮಾಜಿ ಶಾಸಕ ಪಿರೋಜ್‌ ಸೇಠ್‌, ರಾಜು ಸೇಠ್‌ , ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಸವದತ್ತಿಯಿಂದ ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡರ, ಸೌರಭ ಚೋಪ್ರಾ, ಆರ್‌.ವಿ.ಪಾಟೀಲ, ಎಚ್‌.ಎಂ.ರೇವಣ್ಣ, ಗೋಕಾಕದಿಂದ ಅಶೋಕ ಪೂಜಾರಿ, ಚಂದ್ರಶೇಖರ ಕೊಣ್ಣೂರ, ಪ್ರಕಾಶ ಭಾಗೋಜಿ, ಅರಬಾವಿ ಕ್ಷೇತ್ರದಿಂದ ಭೀಮಪ್ಪ ಗಡಾದ, ಲಖನ್‌ ಸವಸುದ್ದಿ, ಭೀಮಶಿ ಹಂದಿಗುದ್ದ, ಕಿತ್ತೂರಿನಿಂದ ಮಾಜಿ ಸಚಿವ ಡಿ.ಬಿ.ಇನಾಮದಾರ, ಬಾಬಾಸಾಹೇಬ ಪಾಟೀಲ, ಹಬೀಲ ಶಿಲ್ಲೇದಾರ, ಅಥಣಿಯಿಂದ ಎಸ್‌.ಕೆ.ಬುಟಾಳಿ, ಧರೆಪ್ಪ ಠಕ್ಕನ್ನವರ, ಗಜಾನನ ಮಂಗಸೂಳಿ, ಬಸವರಾಜ ಬುಟಾಳಿ, ನ್ಯಾ.ಶ್ರೀಕಾಂತ ಪೂಜಾರಿ, ಶಿವು ಗುಡ್ಡಾಪುರ, ಬಸವರಾಜ ಬೀಸನಕೊಪ್ಪ, ನಿಪ್ಪಾಣಿಯಿಂದ ಉತ್ತಮ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಹಾಗೂ ರಾಯಬಾಗದಿಂದ ಮಹಾವೀರ ಮೋಹಿತೆ, ನಿವೃತ್ತ ಐಎಎಸ್‌ ಅಧಿಕಾರಿ ಶಂಭು ಕಲ್ಲೋಳಿಕರ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಜೊತೆಗೆ ಯಾರಿಗೆ ಟಿಕೆಟ್‌ ನೀಡಬೇಕು? ಎನ್ನುವುದು ಪಕ್ಷಕ್ಕೆ ತಲೆನೋವಾಗಿದೆ. ಟಿಕೆಟ್‌ ಯಾರಿಗೆ ಎಂಬುದು ಇನ್ನೂ ಖಚಿತವಾಗಿಲ್ಲ. ಯಾರ ಹೆಸರು ಅಂತಿಮವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ಟಿಕೆಟ್‌ ಘೋಷಣೆ

ಚಿಕ್ಕೋಡಿ-ಗಣೇಶ ಹುಕ್ಕೇರಿ
ಕಾಗವಾಡ-ರಾಜು ಕಾಗೆ
ಕುಡಚಿ-ಮಹೇಂದ್ರ ತಮ್ಮಣ್ಣವರ
ಹುಕ್ಕೇರಿ-ಎ.ಬಿ.ಪಾಟೀಲ
ಯಮಕನಮರಡಿ-ಸತೀಶ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ-ಲಕ್ಷ್ಮೀ ಹೆಬ್ಬಾಳಕರ
ಖಾನಾಪುರ-ಡಾ.ಅಂಜಲಿ ನಿಂಬಾಳ್ಕರ
ಬೈಲಹೊಂಗಲ-ಮಹಾಂತೇಶ ಕೌಜಲಗಿ
ರಾಮದುರ್ಗ-ಅಶೋಕ ಪಟ್ಟಣ