ವಿರೋಧ ಪಕ್ಷಗಳು ಪ್ರತಿ ಮಾತಿನಲ್ಲೂ ಸರ್ಕಾರದ ಬಳಿ ಹಣವಿಲ್ಲ, ದಿವಾಳಿಯಾಗಿದೆ ಎಂದು ಆರೋಪಿಸುತ್ತಿವೆ. ಆದರೆ, ಸರ್ಕಾರ ಒಂದೇ ಸಚಿವ ಸಂಪುಟ ಸಭೆಯಲ್ಲಿ ₹3,647 ಕೋಟಿ ಮೊತ್ತದ ಯೋಜನೆಗಳ ಅನುಷ್ಠಾನಕ್ಕೆ ಅನುಮೋದಿಸುತ್ತಿದೆ.

ಬೆಂಗಳೂರು (ಏ.26): ವಿರೋಧ ಪಕ್ಷಗಳು ಪ್ರತಿ ಮಾತಿನಲ್ಲೂ ಸರ್ಕಾರದ ಬಳಿ ಹಣವಿಲ್ಲ, ದಿವಾಳಿಯಾಗಿದೆ ಎಂದು ಆರೋಪಿಸುತ್ತಿವೆ. ಆದರೆ, ಸರ್ಕಾರ ಒಂದೇ ಸಚಿವ ಸಂಪುಟ ಸಭೆಯಲ್ಲಿ ₹3,647 ಕೋಟಿ ಮೊತ್ತದ ಯೋಜನೆಗಳ ಅನುಷ್ಠಾನಕ್ಕೆ ಅನುಮೋದಿಸುತ್ತಿದೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಇಷ್ಟು ದೊಡ್ಡ ಮೊತ್ತದ ಯೋಜನೆಗಳನ್ನು ಅನುಷ್ಠಾನ ಮಾಡಲು ಹೇಗೆ ಸಾಧ್ಯ? ಗ್ಯಾರಂಟಿಗಳಿಗೆ ಹಣ ಖರ್ಚು ಮಾಡುತ್ತೇವೆ ಎಂಬ ಹೊಟ್ಟೆಯುರಿಯಿಂದ ವಿಪಕ್ಷದವರು ಆರೋಪಿಸುತ್ತಿದ್ದಾರೆ. 

ಸರ್ಕಾರ ಮಾತ್ರ ಎಲ್ಲ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನೂ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜುಂಡಪ್ಪ ವರದಿಯಂತೆ ಜಾಮರಾಜನಗರ ಜಿಲ್ಲೆಯು ಹಿಂದುಳಿದ ಜಿಲ್ಲೆಗೆ ಸೇರ್ಪಡೆಯಾಗಿದೆ. ಆದರೆ, ಆ ಹಣೆಪಟ್ಟಿಯನ್ನು ಕಳಚಲು ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಮಲೆಮಹದೇಶ್ವರ ಬೆಟ್ಟದಲ್ಲೇ ಸಚಿವ ಸಂಪುಟ ಸಭೆ ನಡೆಸಿ, ಚಾಮರಾಜನಗರ ಜಿಲ್ಲೆಗಾಗಿ ಆರೋಗ್ಯ, ನೀರಾವರಿ ಸೇರಿ ಇನ್ನಿತರ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಗುಪ್ತಚರ ಇಲಾಖೆ ವೈಫಲ್ಯ ಇದೆ: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುಲ್ವಾಮ ದಾಳಿಯಲ್ಲಿ 40 ಮಂದಿ ಸೈನಿಕರು ಅಸುನೀಗಿದ್ದರು‌, ಮೊನ್ನೆ ಘಟನೆಯಲ್ಲಿ 26 ಮಂದಿ ಅಸುನೀಗಿದ್ದಾರೆ. ಪುಲ್ವಾಮ ದಾಳಿ ಬಳಿಕ ಕೇಂದ್ರ ಸರ್ಕಾರ ವಿರಮಿಸಬಾರದಿತ್ತು, ಮೂರನೇ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು. 

ಮಲೆ ಮಹದೇಶ್ವರ ಬೆಟ್ಟ ಮದ್ಯಪಾನ ಮುಕ್ತ: ಸಿಎಂ ಸಿದ್ದರಾಮಯ್ಯ

ಮೊನ್ನೆ ನಡೆದ ಉಗ್ರದಾಳಿ ಅತ್ಯಂತ ಅಮಾನವೀಯ ಹೇಯ ಕೃತ್ಯ, ಮೃತ ಕುಟುಂಬಸ್ಥರ ಜೊತೆ ನಾವಿದ್ದು ಎಲ್ಲರಿಗೂ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ, ಬಹಳ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು. ಉಗ್ರರು ಎಲ್ಲೇ ಇರಲಿ, ಯಾವ ಜಾತಿ-ಧರ್ಮದವರೇ ಆಗಿರಲಿ ಅವರನ್ನು ಮಟ್ಟ ಹಾಕಬೇಕು, ಕೇಂದ್ರ ಸರ್ಕಾರವು ಉಗ್ರ ಚಟುವಟಿಕೆ ಬೆಳೆಯಲು, ನಡೆಸಲು ಅವಕಾಶ ಕೊಡಬಾರದು ಎಂದು ಹೇಳಿದರು.