ಕುಟುಂಬ ಆಧಾರದಲ್ಲಿ ಸಿಎಂ ಆಯ್ಕೆ ಜೆಡಿಎಸ್‌ನಲ್ಲಿ ಮಾತ್ರ: ಸಚಿವ ಸುನಿಲ್ ಕುಮಾರ್
ಬಿಜೆಪಿಯಲ್ಲಿ ಜಾತಿ ಆಧಾರದಲ್ಲಿ ಮುಖ್ಯಮಂತ್ರಿಯನ್ನು ಮಾಡುವ ಪದ್ಧತಿ ಇಲ್ಲ. ಆದರೆ ಕುಟುಂಬದ ಆಧಾರದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇರುವುದು ಜೆಡಿಎಸ್‌ನಲ್ಲಿ ಮಾತ್ರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಉಡುಪಿ (ಫೆ.09): ಬಿಜೆಪಿಯಲ್ಲಿ ಜಾತಿ ಆಧಾರದಲ್ಲಿ ಮುಖ್ಯಮಂತ್ರಿಯನ್ನು ಮಾಡುವ ಪದ್ಧತಿ ಇಲ್ಲ. ಆದರೆ ಕುಟುಂಬದ ಆಧಾರದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇರುವುದು ಜೆಡಿಎಸ್‌ನಲ್ಲಿ ಮಾತ್ರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ. ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದರು. ಬಿಜೆಪಿಯಲ್ಲಿ ಕುಟುಂಬ, ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಆಗುವುದಿಲ್ಲ, ನಮ್ಮಲ್ಲಿ ಪಕ್ಷ ನಿಷ್ಠೆ ಮತ್ತು ಅನುಭವ ಇರಬೇಕು. ಯಾರದ್ದೋ ಮಗ ಅನ್ನುವ ಕಾರಣಕ್ಕೆ, ಯಾವುದೋ ಜಾತಿ ಎನ್ನುವ ಕಾರಣಕ್ಕೆ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಆಯ್ಕೆ ಆಗುವುದಿಲ್ಲ ಎಂದವರು ತಿರುಗೇಟು ನೀಡಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದ ಅಭಿವೃದ್ಧಿ ಎದುರಿಟ್ಟುಕೊಂಡು ಯಾವ ಚುನಾವಣೆಯನ್ನೂ ಎದುರಿಸಿಲ್ಲ, ಹಿಂದಿನಿಂದಲೂ ಜಾತಿ ಆಧಾರದಲ್ಲಿ ಮತದಾರರನ್ನು ವಿಭಜಿಸುತ್ತಾ ಬಂದಿವೆ. ಅದನ್ನೀಗ ಕುಮಾರಸ್ವಾಮಿ ಅವರು ಒಪ್ಪಿಕೊಂಡಂತಾಗಿದೆ. ಜೊತೆಗೆ ಕರ್ನಾಟಕದಲ್ಲಿ ಬಿಜೆಪಿಯ ಸರ್ಕಾರವೇ ಆಡಳಿತಕ್ಕೆ ಬರುತ್ತದೆ ಎಂದೂ ಒಪ್ಪಿಕೊಂಡಿದ್ದಾರೆ. ಆದರೆ ಬ್ರಾಹ್ಮಣರ ಹೆಸರಲ್ಲಿ ಕೀಳಾಗಿ ಮಾತನಾಡುವುದು ಮುಖ್ಯಮಂತ್ರಿಯಾಗಿದ್ದ ಅವರಿಗೆ ಶೋಭೆ ತರುವುದಿಲ್ಲ. ಬಿಜೆಪಿಯಲ್ಲಿ ಅರ್ಹತೆ ಇರುವ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ಅದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಚಿವ ಸುನಿಲ್ ಹೇಳಿದರು.
ನನ್ನ ಮೇಲೆ ದಾಳಿಗಷ್ಟೆ ಇಡಿ ಇರೋದು: ಡಿ.ಕೆ.ಶಿವಕುಮಾರ್
ತುಳು ರಾಜ್ಯ ಕೇಳುತ್ತಿಲ್ಲ: ತುಳು ಭಾಷೆಗೆ ರಾಜ್ಯದ 2ನೇ ಭಾಷೆಯನ್ನಾಗಿ ಘೋಷಿಸಲು ಅಧ್ಯಯನ ಸಮಿತಿ ರಚಿಸಿರುವುದಕ್ಕೆ ವ್ಯಕ್ತವಾಗಿರುವ ಟೀಕೆಗೆ ಉತ್ತರಿಸಿದ ಸುನಿಲ್, ಈ ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ, ಆದರೆ ತುಳು ಮತ್ತು ಕನ್ನಡ ಯಾವತ್ತೂ ಜೊತೆಜೊತೆಗಿವೆ. ನಾವೇನೂ ತುಳುನಾಡು ಪ್ರತ್ಯೇಕವಾಗಿ ಬೇಕು ಎಂದು ಕೇಳುತ್ತಿಲ್ಲ, ತುಳು ಭಾಷೆಗೆ 2ನೇ ಆದ್ಯತೆ ನೀಡಿ ಎಂದು ಕೇಳುತ್ತಿದ್ದೇವೆ. ಅದಕ್ಕೆ ಮೊದಲು ಸಾಧಕ ಬಾಧಕಗಳ ಚರ್ಚೆಗಾಗಿ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ನೋಡಿಕೊಂಡು ಮುಂದೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ವಿದ್ಯುತ್ ದರ ಏರಿಕೆ ಸಹಜ: ಬಜೆಟ್ ಸಂದರ್ಭ ಎಸ್ಕಾಂಗಳು ವಿವಿಧ ಯೋಜನೆಗಳನ್ನು ರೂಪಿಸುತ್ತದೆ. ವಿದ್ಯುತ್ ದರದ ನಿಗದಿಗೆ ಎಸ್ಕಾಂ ತನ್ನ ಅಭಿಪ್ರಾಯವನ್ನು ಕೆಇಆರ್‌ಸಿ ಮುಂದೆ ಇಡುತ್ತವೆ. ಕೆಇಆರ್‌ಸಿ ಸಾರ್ವಜನಿಕ ಅಭಿಪ್ರಾಯವನ್ನು ಪಡೆದುಕೊಳ್ಳುತ್ತಾರೆ. ಸಾರ್ವಜನಿಕ ಅಭಿಪ್ರಾಯ, ಎಸ್ಕಾಂನ ಅಭಿಪ್ರಾಯವನ್ನು ತೆಗೆದುಕೊಂಡು ಕೆಇಆರ್‌ಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಇದು ಇಷ್ಟುವರ್ಷದಿಂದ ಬಂದಿರುವ ಪದ್ಧತಿ, ಈ ವರ್ಷ ಕೂಡ ಆ ಪದ್ಧತಿಯಂತೆ ನಡೆಯುತ್ತದೆ ಎಂದರು.
ಉಕ್ಕು ಕಾರ್ಖಾನೆ ಉಳಿಸಲು ಎಲ್ಲ ಪ್ರಯತ್ನ: ಸಿಎಂ ಬೊಮ್ಮಾಯಿ ಭರವಸೆ
ಚಕ್ರತೀರ್ಥರನ್ನು ಕರೆದದ್ದು ತಪ್ಪೇನಲ್ಲ: ಉಡುಪಿಯಲ್ಲಿ ನಡೆಯವ ಪ್ರಥಮ ರಾಜ್ಯ ಯಕ್ಷಗಾನ ಸಮ್ಮೇಳನದ ದಿಕ್ಸೂಚಿ ಭಾಷಣಕ್ಕೆ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸಿರುವುದನ್ನು ಸಮರ್ಥಿಸಿಕೊಂಡ ಸುನೀಲ್ ಕುಮಾರ್, ಎಲ್ಲದರಲ್ಲೂ ತಪ್ಪು ಹುಡುಕುವುದು ಒಂದು ವಿಕೃತಿ. ರೋಹಿತ್ ಒಬ್ಬ ಲೇಖಕ, ರಾಷ್ಟ್ರೀಯ ವಿಚಾರ ಇಟ್ಟುಕೊಂಡು ಬರೆಯುವ ವ್ಯಕ್ತಿ, ಅವರನ್ನು ಸಮ್ಮೇಳನಕ್ಕೆ ಮಾತನಾಡಲು ಕರೆದಿರುವುದರಲ್ಲಿ ತಪ್ಪೇನಿಲ್ಲ. ನಮ್ಮದು ರಾಷ್ಟ್ರೀಯ ವಿಚಾರಗಳಲ್ಲಿ ಕೆಲಸ ಮಾಡುವ ಪಕ್ಷದವರು, ನಮ್ಮ ಸರ್ಕಾರ ರಾಷ್ಟ್ರೀಯ ವಿಚಾರಗಳನ್ನು ಬೆಂಬಲಿಸುತ್ತದೆ. ಆದ್ದರಿಂದ ರೋಹಿತ್ ಚಕ್ರತೀರ್ಥ ಮಾತ್ರ ಅಲ್ಲ, ಈ ತರಹದ ವಿಚಾರಧಾರೆ ಹೊಂದಿರುವ ಇನ್ನೂ 10 ಜನರನ್ನು ಆಹ್ವಾನಿಸುತ್ತೇವೆ ಎಂದರು.