ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಚುನಾಯಿತರ ಪಟ್ಟಿ ಪ್ರಕಟಿಸಿ ಆಯ್ಕೆ ಪ್ರಮಾಣ ಪತ್ರ ನೀಡಿದ ಚುನಾವಣಾಧಿಕಾರಿ ಎಚ್.ಸಿ.ನೀರಾವರಿ
ಬೆಂಗಳೂರು(ಆ.04): ಜೆಡಿಎಸ್ ರಾಜ್ಯಮಟ್ಟದ ಸಾಂಸ್ಥಿಕ ಚುನಾವಣೆ ಪೂರ್ಣಗೊಂಡಿದ್ದು, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ರಾಜ್ಯಾಧ್ಯಕ್ಷರಾಗಿರುವ ಇಬ್ರಾಹಿಂ ಅವರ ನೇಮಕವನ್ನು ಪಕ್ಷದ ಸಾಂಸ್ಥಿಕ ಚುನಾವಣೆ ಮೂಲಕ ದೃಢೀಕರಿಸಿದಂತಾಗಿದೆ.
ಪಕ್ಷದ ರಾಜ್ಯ ಕಾರ್ಯಕಾರಿಣಿ ಮಂಡಳಿಯ ಸದಸ್ಯರಾಗಿ 65 ಮಂದಿ ಆಯ್ಕೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಚುನಾವಣಾಧಿಕಾರಿ ಎಚ್.ಸಿ.ನೀರಾವರಿ ಅವರು ಚುನಾಯಿತರ ಪಟ್ಟಿ ಪ್ರಕಟಿಸಿ ಆಯ್ಕೆ ಪ್ರಮಾಣ ಪತ್ರ ನೀಡಿದರು.
ಸಿ.ಎಂ.ಇಬ್ರಾಹಿಂ ಸ್ಥಾನಕ್ಕೆ ಬೈ ಎಲೆಕ್ಷನ್, ಹಿಂದೂಳಿದ ವರ್ಗಕ್ಕೆ ಮಣೆ ಹಾಕಿದ ಬಿಜೆಪಿ
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸಾಂಸ್ಥಿಕ ಚುನಾವಣೆಯನ್ನು ಪೂರ್ಣವಾಗಿ ಮತ್ತು ನಿಯಮಬದ್ಧವಾಗಿ ನಡೆಸಿದ ಎಚ್.ಸಿ.ನೀರಾವರಿ ಅಭಿನಂದನೆಗಳು. ಈವರೆಗೆ ಈ ಚುನಾವಣೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನುವ ನೋವು ದೇವೇಗೌಡ ಅವರಿಗೆ ಇತ್ತು. ಆ ಕೊರತೆಯನ್ನು ನೀರಾವರಿ ಅವರು ನೀಗಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಸಿ.ಎಂ.ಇಬ್ರಾಹಿಂ ಅವರು ಆಯ್ಕೆಯಾಗಿದ್ದಾರೆ. ಹಾಗೆಯೇ 65 ಜನ ನಾಯಕರು ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ರಾಹಿಂ ಅವರು ಹಿಂದೆ ಅಧ್ಯಕ್ಷರಾಗಿದ್ದಾಗ ಪಕ್ಷ ಅಭೂತಪೂರ್ವ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು. ಈಗ ಅದೇ ಇತಿಹಾಸ ಮರುಕಳಿಸಲಿದೆ ಎಂದರು.
