ಸಿದ್ದರಾಮಯ್ಯ ಅವರನ್ನು ಪುಣ್ಯಾತ್ಮ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೊಂದಿಗೆ ಹೋಲಿಕೆ ಮಾಡಿ ಅಪಮಾನಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಬೆಂಗಳೂರು (ಜು.27): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪುಣ್ಯಾತ್ಮ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರೊಂದಿಗೆ ಹೋಲಿಕೆ ಮಾಡಿ ಅಪಮಾನಿಸಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕೊಡುಗೆಗಿಂತ ಸಿದ್ದರಾಮಯ್ಯ ಅವರ ಕೊಡುಗೆ ದೊಡ್ಡದು ಎಂಬ ಶಾಸಕ ಯತೀಂದ್ರ ಸಿದ್ಧರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಲ್ವಡಿ ಅವರಂತಹ ಪುಣ್ಯಾತ್ಮರಿಗೆ ತುಲನೆ ಮಾಡಿ ಅವರಿಗೂ ಅಪಮಾನಿಸುವ ಕೆಲಸ ಮಾಡಬಾರದು. ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನು ರಾಜ್ಯದ ಜನ ನೋಡಿದ್ದಾರೆ. ಹುಚ್ಚು ಹೇಳಿಕೆ ನೀಡುವ ಮುಖಾಂತರ ಸಿದ್ದರಾಮಯ್ಯ ಅವರನ್ನು ಅಟ್ಟಕ್ಕೇರಿಸುವ ಕೆಲಸ ಮಾಡುತ್ತಾರೆ. ಅದರಿಂದ ಅವರಿಗೂ ಪ್ರಯೋಜವಿಲ್ಲ, ರಾಜ್ಯಕ್ಕೂ ಪ್ರಯೋಜನವಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಪತನ: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನವೆಂಬರ್‌ ಪೂರ್ವದಲ್ಲಿ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದರು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಧ್ಯ ಭಿನ್ನಮತ ಉದ್ಭವಿಸಿದೆ. ಇದಕ್ಕೆ ಉದಾಹರಣೆಯಂತೆ ಮೈಸೂರಲ್ಲಿ ಜರುಗಿದ ಕಾಂಗ್ರೆಸ್‌ ಸಮಾವೇಶದಲ್ಲಿ ಡಿಕೆಶಿ ಹೆಸರು ಬಳಸದೇ ಇರುವುದು ಇವರ ಭಿನ್ನಮತ ಸ್ಫೋಟವಾದಂತಾಗಿದೆ. ಇದರಿಂದ ರಾಜ್ಯ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.

ಅಭಿವೃದ್ಧಿ ಕಾಮಗಾರಿ ನಡೆಯದ ಹಿನ್ನೆಲೆ ಜನತೆ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೇ ಆಡಳಿತಾರೂಢ ಶಾಸಕರೇ ಆರೋಪ ಮಾಡುತ್ತಿರುವುದು ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿ ಎಂದರು. ಕಾಂಗ್ರೆಸ್‌ ಶಾಸಕರೇ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿದ್ದಂತೆ ಶಾಸಕರಿಗೆ ₹50 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.

ಇನ್ನೊಂದೆಡೆ ಆಡಳಿತಾರೂಢ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸುವ ಹುನ್ನಾರ ನಡೆಸಿದ್ದಾರೆ. ಕುದುರೆ ವ್ಯಾಪಾರ ಪ್ರಾರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಬಗ್ಗೆ ಸವಾಲು ಹಾಕುತ್ತಿದ್ದಾರೆ. ಮೊದಲಿಗೆ ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸವಾಲು ಹಾಕಲಿ ಎಂದರು. ಕೊಪ್ಪಳದಲ್ಲಿ ಕೆಕೆಆರ್‌ಡಿಯಲ್ಲಿ ₹72 ಕೋಟಿ ಭ್ರಷ್ಟಾಚಾರ ನಡೆದಿದೆ, ಕಾಮಗಾರಿ ನಡೆಸದೆ ಹಣ ಕಬಳಿಸಿರುವುದು ಎಲ್ಲರಿಗೆ ಗೊತ್ತಿದ್ದ ವಿಷಯ ಎಂದರು. ಶಾಸಕ ಗಾಲಿ ಜನಾರ್ದನ ರಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದಾರೆ. ಅವರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದರು.