ಬೆಂಗಳೂರು (ಸೆ.04): ನೆರೆ ಪರಿಹಾರ, ವಿವಿಧ ಅಭಿವೃದ್ಧಿ ಯೋಜನೆಗಳು, ಸಂಪುಟ ವಿಸ್ತರಣೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಕೇಂದ್ರದ ನಾಯಕರನ್ನು ಭೇಟಿ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಂದಿನ ವಾರ ದೆಹಲಿಗೆ ತೆರಳುವ ಸಾಧ್ಯತೆಯಿದೆ. 

ಹಲವು ದಿನಗಳಿಂದ ದೆಹಲಿಗೆ ತೆರಳಲು ಕಾಯುತ್ತಿರುವ ಯಡಿಯೂರಪ್ಪ ಅವರು ಈ ತಿಂಗಳ 14ರಿಂದ ಆರಂಭವಾಗುವ ಸಂಸತ್ತಿನ ಅಧಿವೇಶನವಾಗುವುದರಿಂದ ಅಷ್ಟರೊಳಗೇ ಭೇಟಿ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೆರೆ ಪರಿಹಾರ ಮತ್ತಿತರ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಲಿರುವ ಅವರು ಸಂಪುಟ ಕಸರತ್ತಿನ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.

ಸಿಎಂ ಲಂಚ್‌ ಮೀಟಿಂಗ್: ಹೋಟೆಲ್‌ನಲ್ಲಿ ಆಪ್ತರ ಜತೆ ಬಿಎಸ್‌ವೈ ಮಹತ್ವದ ಚರ್ಚೆ

ಇದೇ ವೇಳೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಗೆ ಪಕ್ಷದ ಮುಖಂಡರಿಂದ ಎದುರಾಗಿರುವ ತೊಡಕನ್ನು ನಿವಾರಿಸುವಂತೆ ಆ ಕ್ಷೇತ್ರದ ಅನರ್ಹ ಶಾಸಕರ ಬೇಡಿಕೆ ಬಗ್ಗೆಯೂ ಮುಖ್ಯಮಂತ್ರಿಗಳು ವರಿಷ್ಠರ ಜೊತೆ ಸಮಾಲೋಚನೆ ನಡೆಸುವ ಸಂಭವವಿದೆ ಎನ್ನಲಾಗುತ್ತಿದೆ.