ಸಿಎಂ ಬೊಮ್ಮಾಯಿ ಒರಿಜಿನಲ್ RSS ಅಲ್ಲ; ಮುಸ್ಲಿಂ ಮೀಸಲಾತಿ ಕಡಿಮೆ ಮಾಡಲು ಸಾಧ್ಯವಿಲ್ಲ: CM Ibrahim
ಬೊಮ್ಮಾಯಿ ಒರಿಜಿನಲ್ ಆರ್‌ಎಸ್ಎಸ್ ಅಲ್ಲ. ಅವರದು ಅಡಬರಕಿ ಆರ್‌ಎಸ್‌ಎಸ್. ಆ ಕಡೆ ಅದು ಅಲ್ಲ, ಈ ಕಡೆಗೆ ಇದು ಅಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಇಬ್ರಾಹಿಂ ಟೀಕಾ ಪ್ರಹಾರ ನಡೆಸಿದ್ದಾರೆ. ಕಾಂಗ್ರೆಸ್ ವಿರುದ್ಧವೂ ಅವರು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಜಯಪುರದಲ್ಲಿ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ ಮೀಸಲಾತಿ ಕಡಿಮೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಎಂ. ಇಬ್ರಾಹಿಂ ಒರಿಜಿನಲ್ ಆರ್‌ಎಸ್ಎಸ್ ಇದ್ದಾಗಲೇ ಯಡಿಯೂರಪ್ಪಗೆ ಮೀಸಲಾತಿ ತೆಗೆಯಲು ಆಗಿಲ್ಲ, ಇನ್ನು ಬೊಮ್ಮಾಯಿ ಇದ್ದಾಗ ಆಗುತ್ತಾ..? ಬೊಮ್ಮಾಯಿ ಒರಿಜಿನಲ್ ಆರ್‌ಎಸ್ಎಸ್ ಅಲ್ಲ. ಅವರದು ಅಡಬರಕಿ ಆರ್‌ಎಸ್‌ಎಸ್. ಆ ಕಡೆ ಅದು ಅಲ್ಲ, ಈ ಕಡೆಗೆ ಇದು ಅಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿರುದ್ಧ ಇಬ್ರಾಹಿಂ ಟೀಕಾ ಪ್ರಹಾರ ನಡೆಸಿದ್ದಾರೆ.
ಇನ್ನೊಂದೆಡೆ, ಭಾರತ ಜೋಡೋಕ್ಕಿಂತ ಕಾಂಗ್ರೆಸ್ ಜೋಡೋ ಯಾತ್ರೆ ಮಾಡಬೇಕು. ನಾನು ರಾಹುಲ್ ಗಾಂಧಿಗೆ ಮೊದಲು ಇದನ್ನೇ ಹೇಳಿದ್ದೆ ಎಂದು ಕೈ ಪಕ್ಷದ ವಿರುದ್ಧವೂ ವಿಜಯಪುರದಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಟೀಕೆ ಮಾಡಿದ್ದಾರೆ. ಇನ್ನು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಆಗಿದ್ದು ಸಂತಸ ತಂದಿದ್ದು, ನಾನು ಹೇಳಿದಂತೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಆಗಿದ್ದಾರೆ. ಕರ್ನಾಟಕ, ದೇಶಕ್ಕೆ ಒಳ್ಳೆಯದು ಮಾಡ್ಲಿ ಎಂದು ಖರ್ಗೆಗೆ ಹೇಳೇನಿ ಎಂದೂ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಇದನ್ನು ಓದಿ: Tipu Express ರೈಲು ಹೆಸರು ಬದಲಾವಣೆ ವಿಚಾರ: ಹೆಸರು ಬದಲಿಸಿದ್ರೆ ಮರ್ಯಾದೆ ಕಡಿಮೆಯಾಗಲ್ಲ ಎಂದ ಇಬ್ರಾಹಿಂ
ಇನ್ನು, ರಾಜ್ಯ ವಿಧಾನಸಭೆಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯಲಿದೆ, ಜೆಡಿಎಸ್‌ಗೆ ಮೊದಲ ಸ್ಥಾನ ಹಾಗೂ ಬಿಜೆಪಿಗೆ 2ನೇ ಸ್ಥಾನ ಎಂದೂ ಸಿ.ಎಂ. ಇಬ್ರಾಹಿಂ ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಕ್ಕಿಂತ ವೀಕ್ ಆಗಿದೆ.. ಕಾಂಗ್ರೆಸ್ ಪಕ್ಷದಲ್ಲಿ 80 ಕಡೆಗೆ ಎಂಎಲ್‌ಎ ಅಭ್ಯರ್ಥಿಗಳು ಸಹ ಇಲ್ಲ. ಈ ಹಿನ್ನೆಲೆ ಈ ಸಲ ಜೆಡಿಎಸ್‌ಗೆ ಬಹುಮತ ಸಿಗುವ ನಿರೀಕ್ಷೆ ಇದೆ ಎಂದೂ ವಿಜಯಪುರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ಬರುವ 2023 ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನವೆಂಬರ್ 1 ರಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ನಡೆಸುತ್ತೇವೆ ಎಂದೂ ಜೆಡಿಎಸ್ ರಾಜ್ಯಾಧ್ಯಕ್ಷ ತಿಳಿಸಿದ್ದಾರೆ. ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಈ ಯಾತ್ರೆ ನಡೆಯಲಿದೆ. ಹಳೇ ಮೈಸೂರು ಭಾಗದಲ್ಲಿ ಪಂಚ ರತ್ನಯಾತ್ರೆ ಶುರುವಾಗುತ್ತದೆ. ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರ ಜೊತೆಗೆ ನಾನು ಯಾತ್ರೆ ಮಾಡುವೆ. ಮಾಜಿ ಪ್ರಧಾನಿ ದೇವೇಗೌಡರ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದು ಯಾತ್ರೆಯ ಉದ್ದೇಶವಾಗಿದೆ. ಬಿಜೆಪಿಗೆ ಮೋದಿ ಚಿಂತೆ, ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಚಿಂತೆ, ಜೆಡಿಎಸ್‌ಗೆ ಮಾತ್ರ ರಾಜ್ಯದ ಚಿಂತೆ ಇದೆ ಎಂದೂ ಜೆಡಿಎಸ್ ರಾಜ್ಯಾದ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಮಾಡದಿದ್ದರೆ ಪಕ್ಷ ವಿಸರ್ಜನೆ: ಸಿ.ಎಂ. ಇಬ್ರಾಹಿಂ
ಎಸ್‌ಸಿ- ಎಸ್‌ಟಿ ಮೀಸಲಾತಿ ಹೆಚ್ಚಳ ಕೇವಲ ಗಿಮಿಕ್: ಇಬ್ರಾಹಿಂ
ರಾಜ್ಯದಲ್ಲಿ ಎಸ್‌ಸಿ- ಎಸ್‌ಟಿ ಮೀಸಲಾತಿ ಹೆಚ್ಚಳ ಕೇವಲ ಗಿಮಿಕ್ ಎಂದು ಜೆಡಿಎಸ್ ರಾಜ್ಯಾದ್ಯಕ್ಷ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ. ಮೀಸಲಾತಿ ಬಗ್ಗೆ ಪರಾಮರ್ಶೆ ಆಗಬೇಕು, ಈ ಸರ್ಕಾರಕ್ಕೆ ದಿಕ್ಕಿಲ್ಲ, ದೆಸೆಯಿಲ್ಲ. ಇವರಿಗೆ ಬದ್ದತೆಯಿದ್ದರೆ ಒಂದು ಕಮಿಟಿ ರಚನೆ ಮಾಡಲಿ.. ಮೀಸಲಾತಿ ಕೇಳುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದೂ ಸಿ.ಎಂ. ಇಬ್ರಾಹಿಂ ಆಗ್ರಹಿಸಿದ್ದಾರೆ.
ಈ ಮಧ್ಯೆ, ಆರ್‌ಎಸ್‌ಎಸ್ ಬ್ಯಾನ್‌ಗೆ ಆಗ್ರಹ ಹಾಗೂ ಪಿಎಫ್‌ಐ ಸಂಘಟನೆ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ರಾಜ್ಯಾದ್ಯಕ್ಷರು, ಆರ್‌ಎಸ್‌ಎಸ್ ಬ್ಯಾನ್ ಅನ್ನುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತು? ಪಿಎಫ್‌ಐ ಬ್ಯಾನ್ ಎಂದಾಗ ಸ್ವಾಗತ ಅನ್ನೋರಿಗೆ ಶ್ರೀರಾಮಸೇನೆ ಅವರು ಚಿಕ್ಕಪ್ಪನ ಮಕ್ಕಳಾ?ಗೂಂಡಾಗಳು ಸತ್ತರೆ ಐದು ಲಕ್ಷ ಪರಿಹಾರ ಕೊಡುವವರು ಇವರು. ನಾವಿದ್ದಾಗ ಯಾವುದೇ ಧರ್ಮ ನೋಡದೆ ಹಿಂದು- ಮುಸ್ಲಿಂ ಎಲ್ಲರಿಗೂ ಸಮಾನ ಪರಿಹಾರ ಹಣ ನೀಡಿದ್ದೆವು. ನಾನು ಆರ್‌ಎಸ್‌ಎಸ್ ಆಗಲಿ ಪಿಎಫ್‌ಐ ಆಗಲಿ ಯಾವುದನ್ನೂ ನಿಷೇಧ ಮಾಡಿ ಎಂದಿಲ್ಲ. ಏನೇ ಇದ್ದರೂ ಜನರ ಮುಂದಿಡಿ ಎಂದು ವಿಜಯಪುರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.