*  ನಿಮ್ಮ ಮೂಲ ಯಾವುದು ಮೊದಲು ಹೇಳಿ*  ಆರೆಸ್ಸೆಸ್‌ನ ಮೂಲ ಪ್ರಶ್ನಿಸಿದ್ದಕ್ಕೆ ತಿರುಗೇಟು*  ಪ್ರಧಾನಿ ಮೋದಿ ಅವರನ್ನು ನೆಹರು ಅವರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ 

ಬೆಂಗಳೂರು(ಮೇ.29):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದ್ರಾವಿಡರೇ ಅಥವಾ ಆರ್ಯರೇ ಎಂಬುದಕ್ಕೆ ಮೊದಲು ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ನವರು ಹೊರಗಿನಿಂದ ಬಂದವರು, ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರುಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಹೋಲಿಕೆ ಸರಿಯಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ತಮ್ಮ ನಿವಾಸದ ಬಳಿ ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್‌ ಮೂಲದ ಬಗ್ಗೆ ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರು ಮೊದಲು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಹೇಳಬೇಕು ಎಂದು ಕಿಡಿಕಾರಿದರು.

RSS ಮೂಲ ಪ್ರಶ್ನಿಸಿದ ಸಿದ್ದುಗೆ ಬಿಜೆಪಿ ತರಾಟೆ: ದೇಶ ಕಟ್ಟುವ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ!

ಪ್ರಧಾನಿ ಮೋದಿ ಅವರನ್ನು ನೆಹರು ಅವರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಚೀನಾ ದೇಶ ಭಾರತ ಗಡಿಯನ್ನು ಆಕ್ರಮಿಸಿದಾಗ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ನೆಹರೂ ಅವರು ಗಡಿಭಾಗವನ್ನು ಬಿಟ್ಟುಕೊಟ್ಟರು. ಆದರೆ, ಮೋದಿಯವರು ಚೀನಾ ದೇಶ ಗಡಿಪ್ರದೇಶ ಆಕ್ರಮಿಸಿಕೊಳ್ಳಲು ಬಂದಾಗ ಗಟ್ಟಿಯಾಗಿ ನಿಂತು ಆ ಪ್ರದೇಶವನ್ನು ಉಳಿಸಿಕೊಂಡರು ಎಂದು ಹೇಳಿದರು.

ಪಾಕಿಸ್ತಾನದ ಜತೆಗೆ ರಾಜಿ ಮಾಡಿಕೊಳ್ಳಲಿಲ್ಲ. ಭಾರತದ ಅಖಂಡತೆ ಮತ್ತು ಏಕತೆಗೆ ಸಾಧನೆಯನ್ನು ಮಾಡಿದ್ದಾರೆ. ಮೋದಿಯವರು ಭಾರತವನ್ನು ಶಕ್ತಿಶಾಲಿಯಾಗಿ ಮಾಡಿದ್ದಾರೆ. ಹೀಗಾಗಿ ನೆಹರು ಅವರೊಂದಿಗೆ ಹೋಲಿಕೆ ಸಾಧ್ಯವೇ ಇಲ್ಲ ಎಂದರು.