ಲಕ್ಷ್ಮಿ ಹೆಬ್ಬಾಳ್ಕರ್-ಸಿ.ಟಿ.ರವಿ ಕೇಸಿನ ಬಗ್ಗೆ ಸಿಐಡಿ ತನಿಖೆ ನಡೆಸಲಿ: ಸಿಎಂ ಸಿದ್ದರಾಮಯ್ಯ
ಎಂಎಲ್ಸಿ ಸಿ.ಟಿ.ರವಿ-ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣವನ್ನೂ ಸಿಐಡಿಗೆ ವಹಿಸಲಾಗಿದೆ. ಅವಾಚ್ಯ ಪದಬಳಕೆ ಆಗಿರುವ ಬಗ್ಗೆ ಎಫ್‌ಎಸ್‌ಎಲ್ ವರದಿ ಬರಬೇಕಿದೆ. ಮಹಿಳಾ ಸಚಿವರಿಗೆ ಅವಹೇಳನ ಮಾಡಿರುವ ಆರೋಪವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಜ.02): ಎಂಎಲ್ಸಿ ಸಿ.ಟಿ.ರವಿ-ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಕರಣವನ್ನೂ ಸಿಐಡಿಗೆ ವಹಿಸಲಾಗಿದೆ. ಅವಾಚ್ಯ ಪದಬಳಕೆ ಆಗಿರುವ ಬಗ್ಗೆ ಎಫ್‌ಎಸ್‌ಎಲ್ ವರದಿ ಬರಬೇಕಿದೆ. ಮಹಿಳಾ ಸಚಿವರಿಗೆ ಅವಹೇಳನ ಮಾಡಿರುವ ಆರೋಪವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸುವರ್ಣ ಸೌಧದ ಆವರಣದಲ್ಲಿ ತಮ್ಮ ಮೇಲೆ ಹಲ್ಲೆ ಹಾಗೂ ಬೆಳಗಾವಿ ಪೊಲೀಸರ ವರ್ತನೆ ಕುರಿತು ಪರಿಷತ್ ಸದಸ್ಯ ಸಿ.ಟಿ.ರವಿಯವರು ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಸಿ.ಟಿ.ರವಿಯವರ ಮೇಲೆ ದೂರು ದಾಖಲಾಗಿ ಎಫ್‌ಐಆರ್ ಆಗಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಸಿ ವರದಿ ನೀಡಲಿ ಎಂದರು. ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಹೊಸ ವರ್ಷದ ಸಂದರ್ಭದಲ್ಲಿ ವಿರೋಧ ಪಕ್ಷದವರಿಗೆ ಭಗವಂತ ಸದ್ಭುದ್ದಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸರ್ಕಾರಿ ಬಸ್ ಮುಷ್ಕರಕ್ಕೆ ಬ್ರೇಕ್: ನೌಕರರ ಬೇಡಿಕೆಗಳ ಈಡೇರಿಕೆ ಕುರಿತು ಸಂಕ್ರಾಂತಿ ಬಳಿಕ ಸಾರಿಗೆ ನೌಕರರ ಸಂಘಟನೆಗಳ ಜತೆ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಡಿ.31ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಂದೂಡಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ. ಡಿ.31ರಿಂದ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿಯ ಅವಧಿಯಲ್ಲಿ ಬಾಕಿ ಉಳಿಸಿಕೊಂಡಿರುವ ಪಿಎಫ್, ಗ್ರ್ಯಾಚುಯಿಟಿ ಸೇರಿ ವಿವಿಧ ಬಾಕಿ ಹಣ ಚುಕ್ತಾಗೆ 2,000 ಕೋಟಿ ರು. ಬಿಡುಗಡೆ ಮಾಡುವ ಬಗ್ಗೆ ಜ.2ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಾಲದ ರೂಪದ ಈ ಹಣದ ಅಸಲು ಹಾಗೂ ಬಡ್ಡಿಯನ್ನು ಸರ್ಕಾರವೇ ಪಾವತಿಸಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸಾರಿಗೆ ನಿಗಮಗಳ ಪ್ರಯಾಣ ದರ ಪರಿಷ್ಕರಣೆ ಹಾಗೂ ಶಕ್ತಿ ಯೋಜನೆಯ 1,600 ಕೋಟಿ ರು. ಬಾಕಿ ಪಾವತಿ, ಸಾರಿಗೆ ನೌಕರರ ವೇತನ ಪರಿಷ್ಕರಣೆ, ಬಾಕಿ ವೇತನ ಬಿಡುಗಡೆ ಸೇರಿ ಇತರೆ ಬೇಡಿಕೆಗಳ ಕುರಿತೂ ಸಂಕ್ರಾಂತಿ ಬಳಿಕ ಸಾರಿಗೆ ನೌಕರರ ಸಂಘಟನೆಗಳ ಜತೆಯೇ ಸಭೆ ನಡೆಸಲಾಗುವುದು ಭರವಸೆ ನೀಡಿದರು. ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ 12 ಪುಟಗಳ ಪತ್ರವನ್ನು ಜಂಟಿ ಕ್ರಿಯಾ ಸಮಿತಿಗೆ ಬರೆದ ಪರಿಣಾಮ ಸಮಿತಿಯು ಮುಷ್ಕರ ಮುಂದೂಡುತ್ತಿರುವುದಾಗಿ ಪ್ರಕಟಿಸಿದೆ.
ಯುವ ಜನರಲ್ಲಿ ಡ್ರಗ್ಸ್ ಹಾವಳಿ, ಅಪರಾಧ ಹೆಚ್ಚಾಗುತ್ತಿದೆ: ಸಿಎಂ ಸಿದ್ದರಾಮಯ್ಯ ಆತಂಕ
ಇಲಾಖೆ ಭರವಸೆಗಳು: 2020ರಿಂದ ಪಾವತಿಯಾಗಬೇಕಿದ್ದ ನಿವೃತ್ತಿ ನೌಕರರ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಬಾಕಿ ಸಂಬಂಧ 224 ಕೋಟಿ ರು. ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಜತೆಗೆ ನಿಧಿ ಮತ್ತು ಡೀಸೆಲ್ ಹಣ ಬಾಕಿ ಪಾವತಿಗೆ 2,000 ಕೋಟಿ ರು. ಸಾಲದ ರೂಪದಲ್ಲಿ ನಿಗಮಗಳಿಗೆ ನೀಡಲು ಒಪ್ಪಿದ್ದು, ಹಣದ ಅಸಲು ಹಾಗೂ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಜ.15ರ ಬಳಿಕ ಮುಖ್ಯಮಂತ್ರಿಗಳು ನಡೆಸುವ ಸಭೆಯಲ್ಲಿ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚಿಸಲಿದ್ದಾರೆ. ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೇವೆಗೆ ಜ.6 ರಂದು ಮುಖ್ಯಮಂತ್ರಿಗಳು ಚಾಲನೆ ನೀಡುತ್ತಿದ್ದಾರೆ. ಹೀಗಾಗಿ ಮುಷ್ಕರ ಹಿಂಪಡೆದು ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅನ್ಬುಕುಮಾರ್ ಪತ್ರದಲ್ಲಿ ಕೋರಿದ್ದರು.