ಚಿಕ್ಕಬಳ್ಳಾಪುರ, (ಡಿ.24): ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಅಪರೇಷನ್ ಸರ್ಜರಿಗಳು ಮುಂದುವರಿಯುತ್ತಿದ್ದು, ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಟಗೊಳಿಸೋಕೆ ಹಾಗೂ ತಮ್ಮ ನೆಲೆಯನ್ನ ಭದ್ರಪಡಿಸಿಕೊಳ್ಳೊಕೆ ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ನಾಯಕರುಗಳನ್ನು ಪಕ್ಷಕ್ಕೆ ಸೆಳೆಯುವ ಕಾರ್ಯ ಮುಂದುವರಿಸಿದ್ದಾರೆ.

ಹೌದು...ಇತ್ತೀಚೆಗಷ್ಟೇ ಶಿಡ್ಲಘಟ್ಟದ ಮಾಜಿ ಶಾಸಕ ಎಂ.ರಾಜಣ್ಣ ಅವರನ್ನ ಬಿಜೆಪಿ ಸೇರಿಸಿಕೊಂಡಿರುವ ಬೆನ್ನಲ್ಲೇ ಇದೀಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡ, ಈ ಹಿಂದೆ ತಮ್ಮ ವಿರೋಧಿಯಾಗಿದ್ದ ಕೆ.ವಿ ನವೀನ್ ಕಿರಣ್ ಅವರನ್ನ ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಶಾಸಕ ಬಿಜೆಪಿ ಸೇರ್ಪಡೆ, ಸಿಎಂ ಭೇಟಿ ಮಾಡಿಸಿದ ಸಚಿವ ಸುಧಾಕರ್...!

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ನೇತೃತ್ವದಲ್ಲಿ ಯಡಿಯೂರಪ್ಪನವರ ಸಮ್ಮುಖದಲ್ಲಿ ಕೆ ವಿ ನವೀನ್ ಕಿರಣ್ ಅವರು ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ  ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧವೇ ಪ್ರತಿಸ್ಪರ್ಧಿಯಾಗಿ ನವೀನ್ ಕಿರಣ್ ಸ್ಪರ್ಧೆ ಮಾಡಿ ಸೋಲನುಭವಿಸಿದ್ರು. ಅಂದಿನಿಂದ ರಾಜಕೀಯವಾಗಿ ಸುಧಾಕರ್ ವಿರೋಧಿಯಾಗಿಯೇ ಇದ್ದ ನವೀನ್ ಕಿರಣ್, ಈಗ ಸ್ವತಃ ಸುಧಾಕರ್ ಅವರ ನೇತೃತ್ವದಲ್ಲಿ ಕಮಲ ಹಿಡಿದಿದ್ದಾರೆ. ಇದರಿಂದ ಕಾಂಗ್ರೆಸ್ ಭಾರಿ ಹಿನ್ನಡೆಯಾದಂತಾಗಿದೆ.

ಇಷ್ಟು ವರ್ಷಗಳ ಕಾಲ ತಮ್ಮನ್ನ ಬೆಳೆಸಿ ಬೆಂಬಲಿಸಿ ಪೋಷಿಸಿದ ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರಿಗೂ ವಿಡಿಯೋ ಮೂಲಕ ಧನ್ಯವಾದಗಳನ್ನ ಅರ್ಪಿಸಿದ್ದಾರೆ.