Asianet Suvarna News Asianet Suvarna News

ಶಿವಮೊಗ್ಗದಲ್ಲಿ ಚನ್ನಬಸಪ್ಪ ಗೆಲುವಿಗೆ ಶ್ರಮಿಸುವೆ: ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಆಪ್ತ ಹಾಗೂ ಬಿಜೆಪಿ ಮುಖಂಡ ಚನ್ನಬಸಪ್ಪ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದನ್ನು ಪಕ್ಷದ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಸ್ವಾಗತಿಸಿದ್ದಾರೆ ಹಾಗೂ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. 

Channabasappa will strive for victory in Shivamogga Says KS Eshwarappa gvd
Author
First Published Apr 20, 2023, 12:33 PM IST | Last Updated Apr 20, 2023, 12:33 PM IST

ಬೆಂಗಳೂರು (ಏ.20): ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ತಮ್ಮ ಆಪ್ತ ಹಾಗೂ ಬಿಜೆಪಿ ಮುಖಂಡ ಚನ್ನಬಸಪ್ಪ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದನ್ನು ಪಕ್ಷದ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಸ್ವಾಗತಿಸಿದ್ದಾರೆ ಹಾಗೂ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಚನ್ನಬಸಪ್ಪ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ‘ಚನ್ನಬಸಪ್ಪ ಅವರಿಗೆ ಟಿಕೆಟ್‌ ನೀಡಿದ್ದಕ್ಕೆ ನನಗೆ ಖುಷಿ ಇದೆ. ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟಿದ್ದು ಸ್ವಾಗತಾರ್ಹ. ಚನ್ನಬಸಪ್ಪ ಅವರು ತಳಮಟ್ಟದಿಂದ ಶ್ರಮಪಟ್ಟು ಬಂದವರು’ ಎಂದರು.

‘ಚನ್ನಬಸಪ್ಪ ಅವರ ಗೆಲುವಿಗೆ ನಾವೆಲ್ಲ ಒಟ್ಟಾಗಿ ಶ್ರಮಿಸುತ್ತೇವೆ ಹಾಗೂ ನಾವು ಗೆದ್ದೇ ಗೆಲ್ಲುತ್ತೇವೆ. ಶಿವಮೊಗ್ಗದಲ್ಲಿ ಗೆಲ್ಲದೇ ಇನ್ನೆಲ್ಲಿ ಗೆಲ್ಲಬೇಕು?’ ಎಂದು ಪ್ರಶ್ನಿಸಿದರು. ‘ನಾನು ನನ್ನ ಕುಟುಂಬಕ್ಕೆ, ಪುತ್ರ ಕಾಂತೇಶ್‌ ಅವರಿಗೆ ಟಿಕೆಟ್‌ ಕೇಳಿದ್ದು ನಿಜ. ಇದೇ ವೇಳೆ, ಸೊಸೆಗೆ ಟಿಕೆಟ್‌ ನೀಡುವುದಾಗಿ ಹೈಕಮಾಂಡೇ ಹೇಳಿತ್ತು. ಆದರೆ ಸೊಸೆಗೆ ಟಿಕೆಟ್‌ ಬೇಡ ಎಂದು ನಾವೇ ಕುಟುಂಬದವರು ಹೇಳಿದ್ದೆವು’ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಪುತ್ತೂರಲ್ಲಿ ಬಿಜೆಪಿ VS ಹಿಂದುತ್ವ ಸ್ಪರ್ಧೆ: ಬಿಜೆಪಿ ಅಭ್ಯರ್ಥಿ ಪರ ಅಖಾಡಕ್ಕಿಳಿದ ಸಂಘ ಪರಿವಾರ

ಈಶ್ವರಪ್ಪ ಆಪ್ತ ಚನ್ನಬಸಪ್ಪಗೆ ಶಿವಮೊಗ್ಗ ಟಿಕೆಟ್‌: ಆಡಳಿತಾರೂಢ ಬಿಜೆಪಿಯು ಬಾಕಿ ಉಳಿದ ಶಿವಮೊಗ್ಗ ಕ್ಷೇತ್ರಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರ ಕುಟುಂಬದ ಬದಲು ಅವರ ಆಪ್ತರಾಗಿರುವ ಎಸ್‌.ಎನ್‌. ಚನ್ನಬಸಪ್ಪ ಅವರಿಗೆ ಟಿಕೆಟ್‌ ಘೋಷಿಸಿದೆ.

ಇದೇ ವೇಳೆ ಮಾನ್ವಿ ಕ್ಷೇತ್ರಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್‌ ತೊರೆದು ಬಂದ ಮಾಜಿ ಸಂಸದ ಬಿ.ವಿ.ನಾಯಕ್‌ ಅವರಿಗೆ ಟಿಕೆಟ್‌ ನೀಡಿದೆ. ನಾಯಕ್‌ ಅವರು ಮಂಗಳವಾರವಷ್ಟೇ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಬುಧವಾರ ತಡರಾತ್ರಿ ಆಡಳಿತಾರೂಢ ಬಿಜೆಪಿಯು ಬಾಕಿ ಉಳಿದ ಎರಡು ಕ್ಷೇತ್ರಗಳಿಗೆ ಟಿಕೆಟ್‌ ಘೋಷಿಸುವುದರೊಂದಿಗೆ ಎಲ್ಲ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದಂತಾಗಿದೆ. ಒಟ್ಟು 21 ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪಿದ್ದು, ಇದೇ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ತಣಿದ ಶಿವಮೊಗ್ಗ ಕುತೂಹಲ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗ ಕ್ಷೇತ್ರದ ಹಾಲಿ ಶಾಸಕರಾದ ಈಶ್ವರಪ್ಪ ಅವರು ಬಹಿರಂಗವಾಗಿಯೇ ಚುನಾವಣಾ ರಾಜಕೀಯದಿಂದ ದೂರ ಸರಿಯುವ ನಿರ್ಧಾರ ಪ್ರಕಟಿಸಿದ ಬಳಿಕ ಅವರ ಪುತ್ರ ಕಾಂತೇಶ್‌ ಅವರಿಗೆ ಟಿಕೆಟ್‌ ಸಿಗಬಹುದು ಎಂಬ ಮಾತು ಕೇಳಿಬಂದಿತ್ತು. ಬಳಿಕ ಕಾಂತೇಶ್‌ ಅವರ ಪತ್ನಿಯ ಹೆಸರೂ ಕೇಳಿ ಬಂದಿತ್ತು. ಇದರ ಜೊತೆಗೆ ವಿಧಾನಪರಿಷತ್‌ ಮಾಜಿ ಸದಸ್ಯ ಭಾನುಪ್ರಕಾಶ್‌ ಪುತ್ರ ಹರಿಕೃಷ್ಣ, ಎಸ್‌. ದತ್ತಾತ್ರಿ, ಎಸ್‌.ಎಸ್‌. ಜ್ಯೋತಿಪ್ರಕಾಶ್‌ ಹೆಸರು ಪ್ರಸ್ತಾಪವಾಗಿದ್ದವು.

ಜನಾರ್ದನ ರೆಡ್ಡಿ ಬಳ್ಳಾರಿ ಭೇಟಿಗೆ ಸುಪ್ರೀಂಕೋರ್ಟ್‌ ನಿರಾಕರಣೆ

ಆದರೆ, ಅಚ್ಚರಿ ಎಂಬಂತೆ ಲಿಂಗಾಯತ ಸಮುದಾಯಕ್ಕೆ ಸೇರಿದ ಚನ್ನಬಸಪ್ಪ ಅವರಿಗೆ ಟಿಕೆಟ್‌ ಘೋಷಿಸಿದೆ. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳೂ ನಿರ್ಣಾಯಕ ಸ್ಥಾನದಲ್ಲಿವೆ. ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನಪರಿಷತ್‌ ಸದಸ್ಯ ಹಾಗೂ ಲಿಂಗಾಯತ ಸಮುದಾಯದ ಆಯನೂರು ಮಂಜುನಾಥ್‌ ಅವರು ಬಿಜೆಪಿ ತೊರೆದು ಜೆಡಿಎಸ್‌ನಿಂದ ಕಣಕ್ಕಿಳಿಯುತ್ತಿರುವ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಮತ್ತು ಸಂಘ ಪರಿವಾರದ ಚೆನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಯಿತು ಎನ್ನಲಾಗಿದೆ.

Latest Videos
Follow Us:
Download App:
  • android
  • ios