Asianet Suvarna News Asianet Suvarna News

ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಪಾಲಾಗಬೇಕು: ಸಚಿವ ದಿನೇಶ್ ಗುಂಡೂರಾವ್

ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ 7 ಸ್ಥಾನಗಳಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರು ಗೆದ್ದಿರುವುದು ಪಕ್ಷಕ್ಕೆ ಶಕ್ತಿ ಬಂದಂತಿದೆ: ದಿನೇಶ್ ಗುಂಡೂರಾವ್ 

Chamarajanagar Lok Sabha constituency should go to Congress Says Dinesh Gundu Rao grg
Author
First Published Dec 25, 2023, 4:00 AM IST

ನಂಜನಗೂಡು(ಡಿ.25):  ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಚುನಾವಣೆಯಾಗಿದ್ದು ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲಬೇಕಾದ ಅನಿವಾರ್ಯತೆ ಇರುವುದರಿಂದ ಚಾಮರಾಜ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಾಗಿ ದುಡಿದು ಪಕ್ಷ ಜಯಗಳಿಸುವಂತೆ ಕೆಲಸ ಮಾಡಬೇಕು ಎಂದು ಆರೋಗ್ಯ ಸಚಿವ ಮತ್ತು ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದರು.

ತಾಲೂಕಿನ ದೊಡ್ಡಕವಲಂದೆ ಗ್ರಾಮದ ನೀಲಾಂಬಿಕೆ ಕಲ್ಯಾಣ ಮಂಟಪದಲ್ಲಿ ಗುಂಡ್ಲುಪೇಟೆ, ನಂಜನಗೂಡು, ವರುಣಾ, ನರಸೀಪುರ, ಕೊಳ್ಳೇಗಾಲ, ಚಾಮರಾಜನಗರ, ಹನೂರು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಹಣ್ಣುಗಳ ರಾಜ ಮಾವು ಹೂ ಬಿಡುವ ಪ್ರಕ್ರಿಯೆ ಆರಂಭ- ಮಾವು ಸಸ್ಯ ಸಂರಕ್ಷಣಾ ಕ್ರಮ ಬಗ್ಗೆ ರೈತರಿಗೆ ಸಲಹೆ

ಕಾರ್ಯಕರ್ತರ ಪರಿಶ್ರಮದಿಂದ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ 7 ಸ್ಥಾನಗಳಲ್ಲಿ ಕಾಂಗ್ರೇಸ್ ಪಕ್ಷದ ಶಾಸಕರು ಗೆದ್ದಿರುವುದು ಪಕ್ಷಕ್ಕೆ ಶಕ್ತಿ ಬಂದಂತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ್ ಗೆಲ್ಲುವ ವಿಶ್ವಾಸವಿತ್ತು. ಆದರೆ ಕೆಲವೇ ಮತಗಳ ಅಂತರದಿಂದ ಸೋಲಬೇಕಾಯಿತು. ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದಾಗಿ ರಾಜ್ಯದಲ್ಲಿ ಹೆಚ್ಚು ಸ್ಥಾನವನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಎಲ್ಲಾ ಮುಖಂಡರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸರ್ಮರ್ಥ ನಾಯಕನನ್ನು ಕಳೆದುಕೊಂಡಿರುವುದು ಪಕ್ಷಕ್ಕೆ ದೊಡ್ಡ ನಷ್ಟ. ಅವರು ಸೋತ ಕಹಿ ನೆನಪು ಅವರನ್ನು ಬಾಧಿಸುತ್ತಿತ್ತು. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದರು.

ಪಕ್ಷದ ಕಾರ್ಯಕರ್ತರು, ಮುಖಂಡರು, ಶಾಸಕರ ಮತ್ತು ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿ ಸಲ್ಲಿಸುವಂತೆ ಪಕ್ಷ ಸೂಚಿಸಿದೆ. ನಾವು ಪೂರ್ವಭಾವಿ ಸಭೆ ನಡೆಸುತ್ತಿದ್ದೇವೆ. ಕ್ಷೇತ್ರದಲ್ಲಿ ನಂಜುಂಡಸ್ವಾಮಿ, ಕಾಗಲವಾಡಿ ಶಿವಣ್ಣ, ಸುನೀಲ್ ಬೋಸ್, ಪುಷ್ಪಾವತಿ ಅಮರನಾಥ್, ಬಿ. ಸೋಮಶೇಖರ್ ಸೇರದಂತೆ 7 ಮಂದಿ ಆಕಾಂಕ್ಷಿಗಳಿದ್ದಾರೆ. ಎಲ್ಲಾ ಆಕಾಂಕ್ಷಿಗಳೂ ಕೂಡ ಪಕ್ಷದ ತೀರ್ಮಾನಕ್ಕೆ ಬದ್ದರಾಗಿರುವುದಾಗಿ ಹೇಳಿದ್ದಾರೆ. ನಾವು ಪ್ರತ್ಯೇಕವಾಗಿ ಉಸ್ತುವಾರಿ ಸಚಿವರ, ಶಾಸಕರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ, ಆಕಾಂಕ್ಷಿಗಳ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿ ಮಾಡಲಿದ್ದೇನೆ. ಪಕ್ಷದ ವರಿಷ್ಠರ ತೀರ್ಮಾನದಂತೆ ಯಾರೇ ಅಭ್ಯರ್ಥಿಯಾದರೂ ಒಟಗಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸನ್ನದ್ದರಾಗಿ ಎಂದು ಕರೆ ನೀಡಿದರು.

ಶಾಸಕ ದರ್ಶನ್ ಧ್ರುವನಾರಾಯಣ್, ಮಾತನಾಡಿ ನನ್ನ ತಂದೆ ಈ ಕ್ಷೇತ್ರದಲ್ಲಿ 2 ಬಾರಿ ಸಂಸದರಾಗಿ ಅಭಿವೃದ್ಧಿ ಕಾರ್ಯದಲ್ಲಿ ದೇಶದಲ್ಲಿ 4ನೇ, ರಾಜ್ಯದಲ್ಲಿ ಮೊದಲನೆ ಸಂಸದರಾಗಿ ಹೊರ ಹೊಮ್ಮಿದ್ದರು. ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದರೂ ಕೂಡ ಅವರು ಸೋಲಬೇಕಾಯಿತು. ಕೆಲವೇ ಮತಗಳ ಅಂತರದಿಂದ ಸೋತಿದ್ದ ಕಹಿ ಅನುಭವ ಕೊನೆವರೆಗೂ ಅವರನ್ನು ಬಾಧಿಸುತ್ತಿತ್ತು. ಅವರ ನೋವು ಮರೆಯುವಂತೆ ಪಕ್ಷದ ಅಭ್ಯರ್ಥಿಗೆ ಐತಿಹಾಸಿಕ ಗೆಲುವು ತಂದುಕೊಡಿ ಎಂದು ಕರೆ ನೀಡಿದರು.

ಕಾಗಲವಾಡಿ ಶಿವಣ್ಣ ಮಾತನಾಡಿ, 2004ರಲ್ಲಿ ನಾನು ಲೋಕಸಭಾ ಸದಸ್ಯನಾಗಿ ಸೋನಿಯಾಗಾಂಧಿ ಅವರ ಮಾತಿಗೆ ಬೆಲೆಕೊಟ್ಟು ಮತಹಾಕಿ ಕೇಂದ್ರದಲ್ಲಿ ಸರ್ಕಾರ ಉಳಿಸಿದ್ದೆ. ಈ ಬಾರಿ ಅವಕಾಶ ಕಲ್ಪಿಸಿ ಎಂದರು.
ಸುನೀಲ್ ಬೋಸ್ ಮಾತನಾಡಿ, 2008ರರಿಂದ ಪಕ್ಷಕ್ಕಾಗಿ ದುಡಿದು ಸಂಘಟನೆಯಲ್ಲಿ ತೊಡಗಿದ್ದೇನೆ. ನಾನು ಪ್ರಬಲ ಆಕಾಂಕ್ಷಿಯಾಗಿದ್ದು ವರಿಷ್ಠರು ನನಗೊಂದು ಅವಕಾಶ ಕಲ್ಪಿಸಿ ಎಂದರು.

ಮಾಜಿ ಶಾಸಕ ನಂಜುಂಡಸ್ವಾ,ಮಿ ಮಾತನಾಡಿ, ನಾನು ಶಾಸಕನಾಗಿ ಕೆಲಸಮಾಡಿದ್ದೇನೆ. ಜೊತೆಗೆ ಧ್ರುವನಾರಾಯಣ್ ಅವರ ಗೆಲುವಿಗೆ ಶ್ರಮಿಸಿದ್ದೇನೆ, ಧ್ರುವನಾರಾಯಣ್ ಅವರ ನೆನಪು ಉಳಿಸಲು ನನಗೊಂದು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಹೊಟೇಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ : ಮುಖ್ಯಮಂತ್ರಿ

ಡಾ. ಪುಷ್ಪಾವತಿ ಅಮರನಾಥ್ ಮಾತನಾಡಿ, ನಾನು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇನೆ. ಈ ಬಾರಿ ನನಗೆ ಅವಕಾಶ ನೀಡಿದ್ದಲ್ಲಿ ಮಹಿಳೆಯರಿಗೆ ಗೌರವ ತಂದುಕೊಟ್ಟಂತಾಗುತ್ತದೆ. ಆದ್ದರಿಂದ ನನಗೆ ಈ ಬಾರಿ ಟಿಕೇಟ್ ನೀಡುವ ವಿಶ್ವಾಸವಿದೆ ಎಂದರು.

ಆಕಾಂಕ್ಷಿ ಬಿ. ಸೋಮಶೇಖರ್ ಮಾತನಾಡಿದರು. ಸಮಾರಂಭದಲ್ಲಿ ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಎ.ಆರ್. ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಡಾ.ಡಿ. ತಿಮ್ಮಯ್ಯ, ಮಾಜಿ ಶಾಸಕರಾದ ಜಯಣ್ಣ, ನರೇಂದ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯ್ಕುಮಾರ್, ಚಾಮರಾಜನಗರ ಅಧ್ಯಕ್ಷ ಮರಿಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ವಿಧಾನ ಸಭಾ ಉಸ್ತುವಾರಿ ಸೋಮೇಶ್, ಮುಖಂಡರಾದ ಕೆ. ಮಾರುತಿ, ಸಿ.ಎಂ. ಶಂಕರ್, ಕುಳ್ಳಯ್ಯ, ಮೂಗಶೆಟ್ಟಿ ಮೊದಲಾದವರು ಇದ್ದರು.

Follow Us:
Download App:
  • android
  • ios