* ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಸಿದ್ಧಾಂತ ವಿರೋಧಿಸಿ ಚಡ್ಡಿ ಸುಡುವ ಅಭಿಯಾನ* ಚಡ್ಡಿ ಸುಡುವ ಅಭಿಯಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರ* ಆರೆಸ್ಸೆಸ್‌ನಲ್ಲಿ ನಿಮ್ಮ ಸ್ಥಾನಮಾನ ಇಷ್ಟಕ್ಕೇ ಸೀಮಿತ* ಚಡ್ಡಿ ಹೊತ್ತು ಚಳವಳಿ ನಡೆಸಿದ ಛಲವಾದಿಗೆ ಸಿದ್ದು ಟಾಂಗ್‌

ಬೆಂಗಳೂರು(ಜೂ.08): ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಸಿದ್ಧಾಂತ ವಿರೋಧಿಸಿ ಚಡ್ಡಿ ಸುಡುವ ಅಭಿಯಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿ ಅವರು ಹಳೆ ಚಡ್ಡಿ ತುಂಬಿರುವ ಬಾಕ್ಸ್‌ ಹೊತ್ತುಕೊಂಡ ಫೋಟೋ ಟ್ವೀಟ್‌ ಮಾಡಿರುವ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ದಲಿತರು ಈ ಸಂದೇಶ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಆರ್‌ಎಸ್‌ಎಸ್‌ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ಸ್ಥಾನ ನೀಡಿಲ್ಲ. ಒಂದೇ ಸಮುದಾಯಕ್ಕೆ ಸೇರಿದವರಿಗೆ ಮಣೆ ಹಾಕಲಾಗುತ್ತಿದೆ ಎಂದು ಹೇಳಿದ್ದ ಸಿದ್ದರಾಮಯ್ಯ, ಛಲವಾದಿ ನಾರಾಯಣಸ್ವಾಮಿಯವರು ಹಳೆಯ ಚಡ್ಡಿ ತುಂಬಿರುವ ಬಾಕ್ಸ್‌ ಹೊತ್ತುಕೊಂಡಿರುವ ಫೋಟೋವನ್ನು ಟ್ವೀಟ್‌ ಮಾಡಿ, ಆರ್‌ಎಸ್‌ಎಸ್‌ ದಲಿತರನ್ನು ಇಂತಹ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

‘ಆರ್‌ಎಸ್‌ಎಸ್‌ನ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳಿಗೆ ಏಕೆ ಅವಕಾಶವಿಲ್ಲ ಎಂಬ ನನ್ನ ಪ್ರಶ್ನೆಗೆ ಆರ್‌ಎಸ್‌ಎಸ್‌ನವರು, ಬಿಜೆಪಿಯವರು ದಲಿತ ಶಾಸಕರ ಮೂಲಕ ರೀತಿ ಉತ್ತರ ಕೊಡಿಸಿದ್ದಾರೆ. ಆರ್‌ಎಸ್‌ಎಸ್‌ಗೆ ಬೆಂಬಲ ನೀಡಲು ಹಳೆ ಚಡ್ಡಿ ಹೊತ್ತುಕೊಂಡು ಮೆರವಣಿಗೆ ಮಾಡಿದ ನಾರಾಯಣಸ್ವಾಮಿಯವರೇ, ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೇ ಸೀಮಿತ. ಆರ್‌ಎಸ್‌ಎಸ್‌ ಉನ್ನತ ಹುದ್ದೆಗೆ ನೀವು ಸದಾ ಅಸ್ಪೃಶ್ಯರೇ’ ಎಂದು ಸೂಚ್ಯವಾಗಿ ಹೇಳಿದ್ದಾರೆ.

ಗುಲಾಮಿ ಮನಸ್ಥಿತಿಗೆ ಧಿಕ್ಕಾರ:

‘ಯಾರಾರ‍ಯರದ್ದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು ಮನಸ್ಸಿಗೆ ನೋವಾಯಿತು. ನಿಮ್ಮನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷತೆಯಂತಹ ಸ್ಥಾನದಲ್ಲಿ ಕಾಣುವ ಆಸೆ ನನಗಿದೆ. ನಿಮ್ಮ ಪ್ರತಿಭಟನೆಯ ಹಕ್ಕನ್ನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಯ ಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ ಮನಸ್ಥಿತಿಗೆ ನನ್ನ ಧಿಕ್ಕಾರವಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಛಲವಾದಿ ನಾರಾಯಣಸ್ವಾಮಿಯವರೇ ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಿರಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.