Asianet Suvarna News Asianet Suvarna News

ಸಾಕಷ್ಟು ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ: ಸಚಿವ ಮುನಿಯಪ್ಪ

‘ಅನ್ನಭಾಗ್ಯ’ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉಚಿತ ಪಡಿತರ ವಿತರಿಸಲು ರಾಜ್ಯಕ್ಕೆ 1.35 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ, ಕೇಂದ್ರ ಆಹಾರ ಸಚಿವರು ಅಕ್ಕಿ ನೀಡಲು ನಿರಾಕರಿಸಿದ್ದಾರೆ ಎಂದು ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. 

Central govt is not providing enough rice despite having sufficient stock Says Minister KH Muniyappa gvd
Author
First Published Jun 24, 2023, 6:43 AM IST

ನವದೆಹಲಿ (ಜೂ.24): ‘ಅನ್ನಭಾಗ್ಯ’ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಉಚಿತ ಪಡಿತರ ವಿತರಿಸಲು ರಾಜ್ಯಕ್ಕೆ 1.35 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ, ಕೇಂದ್ರ ಆಹಾರ ಸಚಿವರು ಅಕ್ಕಿ ನೀಡಲು ನಿರಾಕರಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. ದೆಹಲಿಯಲ್ಲಿ ಶುಕ್ರವಾರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪೀಯೂಷ್‌ ಗೋಯಲ್‌ ಅವರನ್ನು ಭೇಟಿ ಮಾಡಿ, ‘ಅನ್ನಭಾಗ್ಯ’ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವ ಸಂಬಂಧ ಚರ್ಚೆ ನಡೆಸಿದರು. 

ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಯೋಜನೆಗಾಗಿ 1.35 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ವಿತರಿಸುವಂತೆ ಸಚಿವರಿಗೆ ಮನವಿ ಮಾಡಿದೆ. ಆದರೆ, ವಿವಿಧ ಯೋಜನೆಗಳಿಗಾಗಿ 300 ಲಕ್ಷ ಟನ್‌ ಅಕ್ಕಿ ದಾಸ್ತಾನನ್ನು ಮೀಸಲಿಡಲಾಗಿದೆ. ಹೀಗಾಗಿ, ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ನಾವು ‘ಅನ್ನಭಾಗ್ಯ’ ಯೋಜನೆಯನ್ನು ಅನುಷ್ಠಾನಕ್ಕೆ ತಂದೇ ತರುತ್ತೇವೆ ಎಂದು ಹೇಳಿದರು.

ನನಗೆ 100 ದಿನ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಡಿ, ಪಕ್ಷವನ್ನು ಸಂಘಟಿಸುವೆ: ವಿ.ಸೋಮಣ್ಣ

ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಅಕ್ಕಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಮಾಡುತ್ತಿದೆ, ಬಡವರ ಹಸಿವು ನೀಗಿಸುವ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ವಿಪ ಸದಸ್ಯ ಸಲೀಂ ಅಹ್ಮದ್‌ ಹೇಳಿದರು. ಅವರು ಶುಕ್ರವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದುಡ್ಡು ಕೊಡುತ್ತೇವೆ ಅಕ್ಕಿ ಕೊಡಿ ಎಂದರೆ ಕೇಂದ್ರ ನಿರಾಕರಣೆ ಮಾಡುತ್ತಿದೆ. 

ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿಲ್ಲ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ, ಅಕ್ಕಿ ಕೊಡಬಹುದು. ಆದರೆ ಅಕ್ಕಿಗಾಗಿ ರಾಜಕಾರಣ ಮಾಡೋದು ದುರ್ದೈವ ಸಂಗತಿಯಾಗಿದೆ. ದೆಹಲಿಗೆ ತೆರಳಿದ ನಮ್ಮ ಸಚಿವ ಕೆ. ಎಚ್‌. ಮುನಿಯಪ್ಪ ಅವರನ್ನು ಮೂರು ದಿನ ಕಾಯಿಸಿದ್ದಾರೆ. ಇವಾಗ ಅಕ್ಕಿ ನೀಡಲು ನಿರಾಕರಣೆ ಮಾಡಿದ್ದಾರಂತೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. 

ಅಕ್ಕಿ ಸಿಗದ ಕಾರಣ ಜುಲೈನಿಂದ ಅನ್ನಭಾಗ್ಯ ಜಾರಿ ಇಲ್ಲ, ಆಗಸ್ಟ್‌ಗೆ ನೀಡಲು ಯತ್ನ: ಸಚಿವ ಮುನಿಯಪ್ಪ

ಮಹಿಳೆಯರು ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಅಕ್ಕಿ ನೀಡಿದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ವೋಟ್‌ ಹಾಕೋದಿಲ್ಲ ಅಂತಾ ನಿರಾಕರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೈ ಮುಗಿದು ಕೇಳುತ್ತೇವೆ, ಅಕ್ಕಿಯಲ್ಲಿ ರಾಜಕೀಯ ಮಾಡಬೇಡಿ, ಕೇಂದ್ರದಲ್ಲಿ ರಾಜ್ಯದ ನಿರ್ಮಲಾ ಸೀತಾರಾಮ, ಪ್ರಹ್ಲಾದ್‌ ಜೋಶಿ ಸಚಿವರಾಗಿದ್ದಾರೆ. ಅವರಾದರೂ ಹೇಳಿ ರಾಜಕೀಯ ಬಿಟ್ಟು ರಾಜ್ಯಕ್ಕೆ ಸಹಾಯ ಮಾಡಬೇಕೆಂದು ಒತ್ತಾಯಿಸಿದರು. ಕೇಂದ್ರದ ಬಿಜೆಪಿ ಸರ್ಕಾರ ಎಷ್ಟೇ ತೊಂದರೆ ನೀಡಿದರೂ ಅಕ್ಕಿ ಯೋಜನೆ ಜಾರಿ ಮಾಡಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

Latest Videos
Follow Us:
Download App:
  • android
  • ios