ಜಾತಿ ಜನಗಣತಿ ಮಾಡುವ ಆಸಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತ್ತು, ಅದಕ್ಕಾಗಿಯೇ ₹165 ಕೋಟಿ ಬಿಡುಗಡೆ ಮಾಡಿ 1.50 ಲಕ್ಷ ಶಿಕ್ಷಕರು ಓಡಾಡಿ ಜಾತಿ ಜನಗಣತಿಯ ವರದಿಯನ್ನು ಕೂಡ ತಯಾರಿಸಿದ್ದರು.
ಬೀದರ್ (ಜೂ.16): ಜಾತಿ ಜನಗಣತಿ ಮಾಡುವ ಆಸಕ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇತ್ತು, ಅದಕ್ಕಾಗಿಯೇ ₹165 ಕೋಟಿ ಬಿಡುಗಡೆ ಮಾಡಿ 1.50 ಲಕ್ಷ ಶಿಕ್ಷಕರು ಓಡಾಡಿ ಜಾತಿ ಜನಗಣತಿಯ ವರದಿಯನ್ನು ಕೂಡ ತಯಾರಿಸಿದ್ದರು. ಆದರೆ ಹೈಕಮಾಂಡ್ ಒತ್ತಡಕ್ಕೆ ಮಣಿದು ಮರು ಸಮೀಕ್ಷೆಗೆ ಅಸ್ತು ಎಂದಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ ಕಾಂಗ್ರೆಸ್ ಒತ್ತಡದಿಂದ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಜಾತಿ ಜನಗಣತಿ ವರದಿಗೆ ಕೆಲ ವ್ಯಕ್ತಿಗಳು ಮಾತ್ರ ವಿರೋಧ ಮಾಡಿದ್ದರು ಎಂದರು. ಸಿಎಂ ಕುರ್ಚಿ ಕಳೆದುಕೊಳ್ಳುವ ಆತಂಕದಲ್ಲಿ ಜಾತಿ ಜನಗಣತಿ ಸಿದ್ದರಾಮಯ್ಯ ಸದ್ಯಕ್ಕೆ ಮಾಡಲ್ಲ ಅಂದಿದ್ದಾರೆ. 9 ವರ್ಷದಲ್ಲಿ ಮಾಡದೇ ಇರೋದನ್ನು 90 ದಿನದಲ್ಲಿ ಮಾಡ್ತಾರಾ ಎಂದು ಪ್ರಶ್ನಿಸಿದರು. ಸಿಎಂ ಸ್ಥಾನದಲ್ಲಿ ಮುಂದುವರಿಬೇಕು ಎಂಬ ಉದ್ದೇಶದಿಂದ ಜಾತಿ ಜನಗಣತಿಗೆ ತಿಲಾಂಜಲಿ ಹಾಕುತ್ತಿದ್ದಾರೆ. ಅನೇಕ ಹಿಂದುಳಿದ ಸಮುದಾಯಗಳ ನೋವಿಗೆ ಸಿದ್ದರಾಮಯ್ಯ ಕಾರಣವಾಗಿದ್ದಾರೆ. ಅವರಿಗೆ ಕಾಂಗ್ರೆಸ್‌ನಲ್ಲಿ ಸ್ವಾತಂತ್ರ‍್ಯವಿಲ್ಲ ಎಂದರು.
ಜನರ ದಂಗೆ ಸನ್ನಿಹಿತ: ಕಾಂಗ್ರೆಸ್ ಸರ್ಕಾರ ಧರ್ಮ, ದೇಶ, ಸಂವಿಧಾನಕ್ಕೆ ನಿರಂತರವಾಗಿ ಅಪಚಾರ ಮಾಡುತ್ತಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದಿದ್ದರೆ ಜನರೇ ಸರ್ಕಾರದ ವಿರುದ್ಧ ದಂಗೆಯೇಳುವ ಕಾಲ ದೂರವಿಲ್ಲ ಎಂದು ಬಿಜೆಪಿ ಮುಖಂಡ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಘಟನೆಗೆ ಕಾರಣರಾದ ಮುಸ್ಲಿಂ ಗೂಂಡಾಗಳ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು. ಇದೀಗ ಹೈಕೋರ್ಟ್ ಈ ರೀತಿ ವಾಪಸ್ ತೆಗೆದುಕೊಂಡಿರುವ ಸಚಿವ ಸಂಪುಟದ ತೀರ್ಮಾನ ಸರಿಯಲ್ಲ ಎಂದು ಛೀಮಾರಿ ಹಾಕಿದೆ ಎಂದು ಕುಟುಕಿದರು.
ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಪೊಲೀಸ್ ಅಧಿಕಾರಿಗಳ ಮೇಲೆಯೇ ಹಲ್ಲೆ ಮಾಡಿದಂತಹ ಮುಸ್ಲಿಂ ಗೂಂಡಾಗಳ ಪರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿರುವುದೇ ತಪ್ಪು. ಸಚಿವ ಸಂಪುಟ ಸಭೆ ಎಂದರೆ ಮಕ್ಕಳು ಗೋಲಿ ಆಟವಾಡುವ ಜಾಗವಲ್ಲ. ಈಗ ಹೈಕೋರ್ಟ್ ಈ ತೀರ್ಮಾನದ ವಿರುದ್ಧ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಇದು ಮುಸ್ಲಿಂ ಗೂಂಡಾಗಳನ್ನು ರಕ್ಷಿಸುವ ತೀರ್ಮಾನವಾಗಿದೆ. ಅಲ್ಲದೇ, ಸಂವಿಧಾನಬಾಹಿರ ಕೂಡ. ಇನ್ನಾದರೂ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಬೇಕು ಎಂದರು.
ಮಂಗಳೂರಿನಲ್ಲಿ ಅಬ್ದುಲ್ ಕೊಲೆ, ಸುಹಾಸ್ ಶೆಟ್ಟಿ ಕೊಲೆ ಇವುಗಳನ್ನು ನಾವು ಒಪ್ಪುವುದಿಲ್ಲ. ಮಂಗಳೂರಿನಲ್ಲಿ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದ ಹಿನ್ನೆಲೆ ಮುಸ್ಲಿಮರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈಗ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಎಚ್ಚೆತ್ತುಕೊಂಡಿದ್ದಾರೆ. ಸುಹಾಸ್ ಶೆಟ್ಟಿ ರೌಡಿಶೀಟರ್ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ ಹಾಗಾದ್ರೆ ನಟಿ ರನ್ಯಾ ರಾವ್‌ಗೆ ಹಣ ಕೊಟ್ಟಾಗ ಆಕೆ ಸ್ಮಗ್ಲಿಂಗ್ ಮಾಡುವವರು ಎಂದು ಗೋತ್ತಾಗಲಿಲ್ಲವೇ? ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ಯುವಕನ ಕೊಲೆಯಾಗಿದೆ. ಇದು ತಪ್ಪು. ಇದನ್ನು ಯಾರೂ ಒಪ್ಪುವುದಿಲ್ಲ. ಆದರೆ, ಈ ಹಿಂದೆ ಹಿಂದೂಗಳ ಕೊಲೆಗಳು ನಡೆದವಲ್ಲ, ಆಗ ಹೋರಾಟ ಮಾಡಿದವರೆಲ್ಲ ಎಲ್ಲಿ ಹೋಗಿದ್ದರು? ಮುಸ್ಲಿಂ ಮುಖಂಡರು ಈಗ ತಾವು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ಕೊಡುತ್ತೇವೆ ಎಂದ ಮೇಲೆ ಸರ್ಕಾರಕ್ಕೆ ಬುದ್ದಿ ಬರುತ್ತದೆಯೇ? ಹಿಂದೂಗಳ ಹತ್ಯೆಯಾದಾಗ ಇವರೆಲ್ಲ ಎಲ್ಲಿ ಹೋಗಿದ್ದರು? ಇದೆಲ್ಲಾ ಬಹಳ ದಿನ ಉಳಿಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.