Asianet Suvarna News Asianet Suvarna News

ಶೀಘ್ರ ಸಂಪುಟ ವಿಸ್ತರಣೆಗೆ ವರಿಷ್ಠರ ಭರವಸೆ: ಸಿಎಂ ಬೊಮ್ಮಾಯಿ

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರು ಆದಷ್ಟೂ ಬೇಗನೇ ಮಾಡೋಣ ಎಂಬ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Cabinet Expansion Will Done Shortly Says CM Basavaraj Bommai gvd
Author
First Published Sep 24, 2022, 2:00 AM IST

ಬೆಂಗಳೂರು (ಸೆ.24): ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರು ಆದಷ್ಟೂ ಬೇಗನೇ ಮಾಡೋಣ ಎಂಬ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನ ಮುಕ್ತಾಯವಾಗಲು ಕಾಯುತ್ತಿದ್ದೆವು. ಪಕ್ಷದ ವರಿಷ್ಠರು ನನ್ನನ್ನು ಕರೆಸಿ ಮಾತನಾಡಿದರೆ ಆದಷ್ಟು ಬೇಗನೇ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು.

ಕೆಲವೇ ದಿನಗಳಲ್ಲಿ ಈ ಬಗ್ಗೆ ವರಿಷ್ಠರ ಅನುಮತಿ ಪಡೆದು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಸಚಿವ ಸ್ಥಾನ ಆಕಾಂಕ್ಷಿಗಳಾದ ಕೆ.ಎಸ್‌.ಈಶ್ವರಪ್ಪ, ರಮೇಶ್‌ ಜಾರಕಿಹೊಳಿ ಅವರು ಮುನಿಸಿಕೊಂಡು ಅಧಿವೇಶನದಿಂದ ದೂರ ಉಳಿದರಲ್ಲ ಎಂಬ ಪ್ರಶ್ನೆಗೆ, ವೈಯಕ್ತಿಕ ಕಾರಣಗಳಿಗಾಗಿ ಅವರು ಅಧಿವೇಶನಕ್ಕೆ ಆಗಮಿಸಲಿಲ್ಲ ಎಂದು ಬೊಮ್ಮಾಯಿ ಸಮಜಾಯಿಷಿ ನೀಡಿದರು.

ವಕ್ಫ್ ಆಸ್ತಿ ಕಬಳಿಕೆಯ ವರದಿ ಸದನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ

ಮುಂದಿನ ಅಧಿವೇಶನದಲ್ಲಿ ಸಭಾಪತಿ ಚುನಾವಣೆ: ವಿಧಾನಪರಿಷತ್ತಿನ ಸಭಾಪತಿ ಸ್ಥಾನದ ಚುನಾವಣೆ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೀಗಾಗಿ, ಆ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿರುವ ಹಾಗೂ ಪಕ್ಷದ ನಾಯಕರು ಮಾತು ಕೊಟ್ಟಿರುವ ಬಸವರಾಜ ಹೊರಟ್ಟಿಅವರು ಇನ್ನಷ್ಟುದಿನಗಳ ಕಾಲ ಸಭಾಪತಿ ಸ್ಥಾನಕ್ಕಾಗಿ ಕಾಯಬೇಕಾಗಿದೆ. 

ಆಗಲೂ ಅವರನ್ನೇ ಸಭಾಪತಿಯನ್ನಾಗಿ ಮಾಡುತ್ತಾರೆಯೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳೂ ಚಕಾರ ಎತ್ತಿಲ್ಲ. ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಮುಂದಿನ ಅಧಿವೇಶನದಲ್ಲಿ ಸಭಾಪತಿ ಸ್ಥಾನದ ಚುನಾವಣೆ ನಡೆಯಲಿದೆ ಎಂದಷ್ಟೇ ಹೇಳಿದರು. ಈ ತಿಂಗಳ 21ರಂದು ಸಭಾಪತಿ ಸ್ಥಾನದ ಚುನಾವಣೆ ನಡೆಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲು ಸರ್ಕಾರ ಸಜ್ಜಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪಕ್ಷದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಪ್ರಸ್ತಾವನೆಗೆ ಬ್ರೇಕ್‌ ಹಾಕಲಾಯಿತು.

ಗುಣಮಟ್ಟ ಶಿಕ್ಷಣ ವರದಿ ನೀಡಿದರೆ ಜಾರಿ: ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕುರಿತು ನಡೆಯುತ್ತಿರುವ ಡೈಡ್ಯಾಕ್‌ ಶೃಂಗಸಭೆಯು ತನ್ನ ವರದಿಯನ್ನು ’ಶಿಕ್ಷಣದ ಬಗೆಗಿನ ಬೆಂಗಳೂರು ಘೋಷಣೆ’ ಹೆಸರಿನಲ್ಲಿ ಸರ್ಕಾರಕ್ಕೆ ಸಲ್ಲಿಸಿದರೆ ತಜ್ಞರ ಜೊತೆ ಚರ್ಚಿಸಿ ಅದನ್ನು ಜಾರಿಗೆ ತರುವ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಆರಂಭವಾಗಿರುವ 3 ದಿನಗಳ ಇಂಡಿಯಾ ಡೈಡ್ಯಾಕ್‌ ಅಸೋಸಿಯೇಷನ್‌ ಆಯೋಜಿರುವ ಶಿಕ್ಷಣ ಮತ್ತು ಕೌಶಲ ಕುರಿತ ಏಷಿಯನ್‌ ಶೃಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೃಂಗಸಭೆಯು ಮುಂದಿನ ಪೀಳಿಗೆಯ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವೇದಿಕೆ ಆಗಬೇಕು. ಬದಲಾದ ಕಾಲಘಟ್ಟದ ಅವಶ್ಯಕತೆಗಳನ್ನು ಪೂರೈಸುವ ಉತ್ತಮ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ‘ಡೈಡ್ಯಾಕ್‌’ ಶೃಂಗಸಭೆಯಲ್ಲಿ ಚರ್ಚೆಯಾಗುವ ಅಭಿಪ್ರಾಯ ಮತ್ತು ಪರಿಹಾರಗಳನ್ನು ಅನುಷ್ಠಾನಕ್ಕೆ ತರುವ ಯೋಚನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಖಾಸಗಿಗೆ ಟ್ರಸ್ಟ್‌: ಸಿಎಂ ಬೊಮ್ಮಾಯಿ ಭೇಟಿಯಾದ ಅಶ್ವತ್ಥ್‌, ಸರ್ಕಾರದ ಉತ್ತರಕ್ಕೆ ಪಟ್ಟು ಹಿಡಿದ ಜೆಡಿಎಸ್‌

ಶಿಕ್ಷಣ ನೀತಿ, ಕಲಿಸುವ ವಿಧಾನ ಬದಲಾಗಿದೆ. ಬದಲಾವಣೆ ಸರಿಯಾದ ದಿಕ್ಕಿನಲ್ಲಿರಬೇಕು. ಶಿಕ್ಷಣ ಪದವಿಯೊಂದಿಗೆ ಮುಕ್ತಾಯಗೊಳ್ಳಬಾರದು. ಸಮಾಜದ ಸಂಸ್ಕೃತಿ ಹಾಗೂ ಉದ್ಯೋಗ ಪ್ರಪಂಚದೊಂದಿಗೆ ಸರಾಗವಾಗಿ ಬೆರೆಯುವಂತಿರಬೇಕು. ಸಮಾಜದಿಂದ ಬಂದಿದ್ದು, ಸಮಾಜಕ್ಕೆ ಹಿಂತಿರುಗಬೇಕು. ಶಿಕ್ಷಣ, ಸುಸ್ಥಿರ, ನವೀಕರಿಸಬಹುದಾದ ವ್ಯವಸ್ಥೆಯಾಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

Follow Us:
Download App:
  • android
  • ios