Asianet Suvarna News Asianet Suvarna News

ಯಾವುದೇ ಕಾರಣಕ್ಕೂ ವಿಜಯೇಂದ್ರ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ: ಬಿಎಸ್‌ವೈ

ಯಾವುದೇ ಕಾರಣಕ್ಕೂ ಬಿ.ವೈ.ವಿಜಯೇಂದ್ರ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ವರುಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಕುರಿತ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

BY Vijayendra will not contest in the Varuna constituency for any reason Says BS Yediyurappa gvd
Author
First Published Apr 1, 2023, 4:40 AM IST

ಮೈಸೂರು (ಏ.01): ಯಾವುದೇ ಕಾರಣಕ್ಕೂ ಬಿ.ವೈ.ವಿಜಯೇಂದ್ರ ವರುಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ವರುಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಕುರಿತ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ವರುಣದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್‌ ಒಪ್ಪಿತ್ತು. ಕಾರ್ಯಕರ್ತರು ಕೂಡ ವಿಜಯೇಂದ್ರ ಸ್ಪರ್ಧೆಗೆ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನೇ ವರುಣದಿಂದ ಸ್ಪರ್ಧೆ ಬೇಡ ಎಂದು ಹೇಳಿದ್ದೇನೆ. ಈ ವಿಚಾರದಲ್ಲಿ ನಾನು ಹೈಕಮಾಂಡ್‌ನ ಮನವೊಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ಅವರು ವರುಣದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾನು ಶಿಕಾರಿಪುರದಿಂದ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ. ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹೀಗಾಗಿ, ವಿಜಯೇಂದ್ರ ಅಲ್ಲಿಂದ ಸ್ಪರ್ಧೆ ಮಾಡಬೇಕು. ಇದು ನನ್ನ ನಿರ್ಧಾರ. ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ. ವಿಜಯೇಂದ್ರ ಈ ಬಾರಿ ಶಿಕಾರಿಪುರದಿಂದಲೇ ಸ್ಪರ್ಧಿಸುತ್ತಾರೆ. ವರುಣ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಹಾಕುತ್ತೇವೆ’ ಎಂದು ಖಡಕ್ಕಾಗಿ ನುಡಿದರು. ಜೊತೆಗೆ, ‘ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುತ್ತಾರೆ. ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಶಿಕಾರಿಪುರ ನನ್ನನ್ನು ಸಿಎಂ ಮಾಡಿದ ಕ್ಷೇತ್ರ. ಆ ಕ್ಷೇತ್ರವನ್ನು ಬಿಡಲು ಸಾಧ್ಯವೇ ಇಲ್ಲ. ಹೀಗಾಗಿ, ವರುಣದಲ್ಲಿ ವಿಜಯೇಂದ್ರ ಸ್ಪರ್ಧೆ ಕುರಿತಾಗಿ ಚರ್ಚೆಯೇ ಬೇಡ’ ಎನ್ನುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದರು. 

ಕೆಲಸ ಮಾಡುವ ತಾಕತ್‌ ಇರುವುದು ಬಿಜೆಪಿಗಷ್ಟೇ ಅದು ಕಾಂಗ್ರೆಸ್‌ಗಿಲ್ಲ: ಅಣ್ಣಾಮಲೈ

ಹೈಕಮಾಂಡ್‌ನ ಮನವೊಲಿಸುವೆ: ವರುಣದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್‌ ಒಪ್ಪಿತ್ತು. ಕಾರ್ಯಕರ್ತರು ಕೂಡ ಒತ್ತಡ ಹಾಕುತ್ತಿದ್ದಾರೆ. ಆದರೆ, ನಾನೇ ವರುಣದಿಂದ ಸ್ಪರ್ಧೆ ಬೇಡ ಎಂದ್ದೇನೆ. ಈ ವಿಚಾರದಲ್ಲಿ ನಾನು ಹೈಕಮಾಂಡ್‌ನ ಮನವೊಲಿಸುತ್ತೇನೆ. ವರುಣದಿಂದ ಬೇರೆ ಪ್ರಬಲ ಅಭ್ಯರ್ಥಿಯನ್ನು ಹಾಕುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು: ಸಂಸದ ಬಿ.ವೈ.ರಾಘವೇಂದ್ರ

ಕಾಂಗ್ರೆಸ್‌-60-70 ಸ್ಥಾನ ದಾಟಲ್ಲ: ನಾನು ಕಾಂಗ್ರೆಸ್‌ ಮುಖಂಡರನ್ನು ಕೇಳುತ್ತೇನೆ. ನಿಮ್ಮ ನಾಯಕರು ಯಾರು? ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸಮನಾಗಲು ಸಾಧ್ಯವೇನು? ಈಗಾಗಲೇ ಕಾಂಗ್ರೆಸ್‌ನವರು ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಇದು ತಿರುಕನ ಕನಸು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ 60-70 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಬಗ್ಗೆ ಭವಿಷ್ಯ ನುಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ಇನ್ನು ಎರಡು-ಮೂರು ದಿನಗಳಲ್ಲಿ ರಾಜ್ಯ ಪ್ರವಾಸ ಆರಂಭಿಸುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Follow Us:
Download App:
  • android
  • ios