ಪಕ್ಷದ ಒಳಗಿನವರೋ ಹೊರಗಿನವರೋ ಹೇಳಲ್ಲ, ಬಿಡಿಎನಲ್ಲಿ ಯಡಿಯೂರಪ್ಪ ಯಾವ ಕಂಪನಿಗೂ ಗುತ್ತಿಗೆ ಕೊಟ್ಟಿಲ್ಲ: ಬಿಎಸ್‌ವೈ ಪುತ್ರ
ಬೆಂಗಳೂರು(ಸೆ.25): ಈಗಾಗಲೇ 30 ಪ್ರಕರಣ ಎದುರಿಸಿದ್ದೇವೆ. ಇದು 31ನೇ ಪ್ರಕರಣ. ಯಾವನಿಗೂ ಹೆದರಿ ಓಡಿಹೋಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ. ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ಕುತಂತ್ರ ಇದು. ಜತೆಗೆ ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕುತಂತ್ರವೂ ಅಡಗಿದೆ. ಇದಕ್ಕೆ ತಕ್ಕ ಉತ್ತರವನ್ನು ಎಲ್ಲಿ ಕೊಡಬೇಕು, ಯಾರಿಗೆ ಕೊಡಬೇಕು ಎಂಬುದು ಗೊತ್ತಿದೆ ಎಂದು ಗುಡುಗಿದರು.
ನಮ್ಮ ವಿರುದ್ಧ ರಾಜಕೀಯ ವಿರೋಧಿಗಳು ಷಡ್ಯಂತ್ರ ಮಾಡಿದ್ದಾರೆ. ಆ ರಾಜಕೀಯ ವಿರೋಧಿಗಳು ಪಕ್ಷದವರಾ ಅಥವಾ ಹೊರಗಿನವರಾ ಎನ್ನುವುದನ್ನು ಹೇಳುವುದಿಲ್ಲ. ಅವರು ರಾಜಕೀಯ ವಿರೋಧಿಗಳು ಅಂತ ಮಾತ್ರ ಹೇಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಬಿಎಸ್‌ವೈಯವರನ್ನು ಪಂಚಮಸಾಲಿ ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಯತ್ನ ವಿಷಾದನೀಯ: ವಿಜಯೇಂದ್ರ
ರಾಜಕೀಯ ವಿರೋಧಿಗಳ ಷಡ್ಯಂತ್ರ ಮೆಟ್ಟಿನಿಲ್ಲುವ ತಾಕತ್ ನನಗೆ ಇದೆ. ಆ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಆ ಬುದ್ಧಿಶಕ್ತಿಯೂ ನಮಗೆ ಇದೆ. ಇಂಥ ನೂರು ಆರೋಪ ಬಂದರೂ ಎದುರಿಸುತ್ತೇನೆ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ರಾಜಕೀಯ ವಿರೋಧಿಗಳೆಲ್ಲರ ಕೈವಾಡ ಇದರಲ್ಲಿದೆ. ಬಿಜೆಪಿಯವರ ಕೈವಾಡ ಇದೆ ಅಂತ ನಾನು ಹೇಳುತ್ತಿಲ್ಲ ಎಂದರು.
ನಾನು ರಾಜಕೀಯವಾಗಿ ಬೆಳೆಯುತ್ತಿರುವ ಸಂದರ್ಭ ಇದು. ಇಂಥ ಸವಾಲುಗಳು ಬಂದಾಗ ನಮಗೂ ಬೆಳೆಯುವುದಕ್ಕೆ ಅನುಕೂಲವಾಗುತ್ತದೆ. ಈ ಸವಾಲುಗಳನ್ನು ಬಹಳ ಸಂತೋಷದಿಂದ ಎದುರಿಸುತ್ತೇನೆ. ಎಷ್ಟೇ ಪ್ರಕರಣ ಹಾಕಿದರೂ ಎದುರಿಸುತ್ತೇವೆ. ತಲೆ ಕೆಡಿಸಿಕೊಳ್ಳುವುದಿಲ್ಲ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದರು. ಆದರೂ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಪ್ಪಿಸುವುದಕ್ಕೆ ಆಗಲಿಲ್ಲ. ರಾಜಕೀಯ ವಿರೋಧಿಗಳು ಏನೇ ಷಡ್ಯಂತ್ರ ಮಾಡಿದರೂ ಯಶಸ್ವಿ ಆಗಿಲ್ಲ. ಮುಂದೆಯೂ ಕೂಡ ವಿರೋಧಿಗಳು ಯಶಸ್ವಿಯಾಗಲ್ಲ ಎಂದು ಖಡಕ್ಕಾಗಿ ಹೇಳಿದರು.
ರಾಜ್ಯದ ಇತಿಹಾಸದಲ್ಲಿ ಒಬ್ಬ ಮಾಜಿ ಮುಖ್ಯಮಂತ್ರಿ ವಿರುದ್ಧ 28ರಿಂದ 30 ಕ್ರಿಮಿನಲ… ಪ್ರಕರಣ ದಾಖಲಿಸಿದ ಉದಾಹರಣೆಯೇ ಇಲ್ಲ. ನಾವು ಬಹುತೇಕ ಎಲ್ಲ ಪ್ರಕರಣಗಳಲ್ಲೂ ಜಯಶಾಲಿ ಆಗಿದ್ದೇವೆ. ಈಗ ಮೊನ್ನೆ ಹೊಸ ಪ್ರಕರಣ ಉದ್ಭವ ಆಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಸಲ್ಲಿಸಿದ ವಿಶೇಷ ಮೇಲ್ಮನವಿ ಪುರಸ್ಕರಿಸಿ ಸುಪ್ರೀಂಕೋರ್ಟ್ ತಡೆಯಾಜ್ಞೆ ಕೊಟ್ಟಿದೆ ಎಂದು ತಿಳಿಸಿದರು.
ಯಾವ ಪುಣ್ಯಾತ್ಮ ಯಡಿಯೂರಪ್ಪ ಕುಟುಂಬದ ವಿರುದ್ಧ ಪಿತೂರಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿದರೋ ಅವರ ವಿರುದ್ಧ ನಾನು ಮಾನನಷ್ಟಮೊಕದ್ದಮೆ ಹಾಕಿದ್ದೇನೆ. ಈಗಾಗಲೇ ಕೋರ್ಚ್‌ನಲ್ಲಿ ಅದರ ವಿಚಾರಣೆ ಆಗಿದೆ. ಮಾನನಷ್ಟಮೊಕದ್ದಮೆ ಕೇಸ್ ತಾರ್ಕಿಕ ಹಂತಕ್ಕೆ ಈಗಾಗಲೇ ಹೋಗಿದೆ ಎಂದು ಮಾಹಿತಿ ನೀಡಿದರು.
ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ವಿರೋಧ: ಸ್ವಾಮೀಜಿ ಆರೋಪಕ್ಕೆ ವಿಜಯೇಂದ್ರ ಸ್ಪಷ್ಟನೆ
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಿಡಿಎದಲ್ಲಿ ಖಾಸಗಿ ಕಂಪನಿಗೆ ಗುತ್ತಿಗೆ ಕೊಟ್ಟಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಆರೋಪ ಮಾಡುವವರು ಯಾವ ಕಂಪನಿಗೆ ಗುತ್ತಿಗೆ ಕೊಟ್ಟಿದಾರೆ ಎಂಬುದನ್ನು ಉಲ್ಲೇಖ ಮಾಡಿಲ್ಲ. ಯಡಿಯೂರಪ್ಪ ಅವರು ಬಿಡಿಎದಲ್ಲಿ ಯಾವ ಕಂಪನಿಗೂ ಗುತ್ತಿಗೆ ಕೊಟ್ಟಿಲ್ಲ ಎಂದು ಪ್ರತಿಪಾದಿಸಿದರು.
ಆ ಕಂಪನಿಯಿಂದ ಕೋಲ್ಕತ್ತ ಮೂಲದ ಐದು ಕಂಪನಿಗಳಿಗೆ 7.5 ಕೋಟಿ ರು. ಹಣ ಸಂದಾಯವಾಗಿದೆ ಎಂಬ ಆರೋಪ ಮಾಡಿದ್ದಾರೆ. ಒಂದು ರುಪಾಯಿ ಕೂಡ ಹಣ ಸಂದಾಯ ಆಗಿಲ್ಲ. ಇದೆಲ್ಲದರ ಬಗ್ಗೆ ನಾವು ಮಾನನಷ್ಟಮೊಕದ್ದಮೆಯಲ್ಲಿ ಪ್ರಶ್ನಿಸಿದ್ದೇವೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುತ್ತೇವೆ ಎಂದರು.
