ಶಿರಾ (ನ.11): ನೆಲೆಯೇ ಇಲ್ಲದ ಶಿರಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿದ್ದು, ಕಳೆದ ಉಪಚುನಾವಣೆಯಲ್ಲಿ ಕೆ.ಆರ್‌.ಪೇಟೆಯಲ್ಲಿ ಹೊರಬಿದ್ದ ಫಲಿತಾಂಶವೇ ಇಲ್ಲಿಯೂ ಪುನರಾವರ್ತನೆಗೊಂಡಿದೆ. ಶಿರಾ ಕ್ಷೇತ್ರದಲ್ಲಿ 12,949 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಗೆಲುವು ಸಾಧಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿಯ ಈ ಅಚ್ಚರಿಯ ಗೆಲುವಿನ ಹಿಂದೆ ಇರುವುದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ರೀತಿ ಚಾಣಕ್ಯನಂತೆ ರಾಜಕೀಯ ತಂತ್ರಗಾರಿಕೆ ಮೆರೆಯುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ.

ಶಿರಾ ಕ್ಷೇತ್ರದ ಗೆಲುವಿನ ಹಿಂದೆ ವಿಜಯೇಂದ್ರ ರೂಪಿಸಿದ್ದ ಕಾರ್ಯತಂತ್ರ ಕೆಲಸ ಮಾಡಿದೆ ಎನ್ನುವುದು ಇದೀಗ ಜಗಜ್ಜಾಹೀರಾಗಿರುವ ಸಂಗತಿ. ಅತ್ಯಂತ ಶಿಸ್ತಿನಿಂದ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯುವ ಮೂಲಕ ಚಾಣಕ್ಯನಂತೆ ಕಾರ್ಯನಿರ್ವಹಿಸಿರುವುದಕ್ಕೆ ಪಕ್ಷ ಜಯಗಳಿಸಿರುವುದೇ ನಿದರ್ಶನ. ಬಿಜೆಪಿ, ಸಂಘ ಪರಿವಾರದ ಯುವಕರ ಜತೆಗೆ ತನ್ನದೇ ಆದ ತಂಡವೊಂದನ್ನು ಕಟ್ಟಿಕೊಂಡು ಪ್ರತಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಶಿರಾ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ ವಿಜಯೇಂದ್ರ ತಮ್ಮದೇ ರಾಜಕೀಯ ತಂತ್ರಗಾರಿಕೆ ರೂಪಿಸಿದರು. ಜೆಡಿಎಸ್‌ ಪಕ್ಷದ ವತಿಯಿಂದ ಕ್ಷೇತ್ರದ ಜವಾಬ್ದಾರಿಯನ್ನು ಸಂಸದ ಪ್ರಜ್ವಲ್‌ ರೇವಣ್ಣ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಹಿಸಿಕೊಂಡಿದ್ದರಾದರೂ ಅವರ ಆಟ ವಿಜಯೇಂದ್ರ ಕಾರ್ಯತಂತ್ರದ ಮುಂದೆ ನಡೆಯಲಿಲ್ಲ. ಅಂತೆಯೇ ಕಾಂಗ್ರೆಸ್‌ನ ತಂತ್ರಗಾರಿಕೆಯು ಸಹ ವಿಜಯೇಂದ್ರ ಮುಂದೆ ಮಂಡಿಯೂರಬೇಕಾಯಿತು.

ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆ : ಗೆದ್ದ ಮುನಿರತ್ನ ...

ಸುಲಭದ ತುತ್ತಾಗಿರಲಿಲ್ಲ ಶಿರಾ

ಹಿಂದೆ ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ರೂಪಿಸಿದ ರಾಜಕೀಯ ತಂತ್ರಗಾರಿಕೆಯಂತೆ ಶಿರಾ ಕ್ಷೇತ್ರದಲ್ಲಿಯೂ ರಣತಂತ್ರ ರೂಪಿಸಿ ಚುನಾವಣಾ ಅಖಾಡಕ್ಕಿಳಿದರು. ಕೆ.ಆರ್‌.ಪೇಟೆ ಉಸ್ತುವಾರಿಯನ್ನು ಪಕ್ಷದ ವರಿಷ್ಠರಿಂದ ಕೇಳಿ ಪಡೆದು ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಜಯೇಂದ್ರ ತಂತ್ರಗಾರಿಕೆಯನ್ನು ಗಮನಿಸಿದ ವರಿಷ್ಠರು ಶಿರಾ ಕ್ಷೇತ್ರದ ಹೊಣೆಗಾರಿಕೆಯನ್ನು ನೀಡಿದರು. ತಮಗೆ ವರ್ಚಸ್ಸನ್ನು ವೃದ್ಧಿಸಲು ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳು ಇಚ್ಚಿಸದೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಕೆ.ಆರ್‌.ಪೇಟೆಯಂತೆ ಶಿರಾ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂಬುದನ್ನು ವಿಜಯೇಂದ್ರ ತಿಳಿದಿದ್ದರು. ಗ್ರಾಮಪಂಚಾಯಿತಿಯಿಂದ ಕ್ಷೇತ್ರದವರೆಗೆ ಎಲ್ಲಿಯೂ ಬಿಜೆಪಿಗೆ ಸ್ಥಾನಮಾನ ಇಲ್ಲ. ಆದರೂ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ತಂತ್ರಗಾರಿಕೆ ರೂಪಿಸಿ ಶಿರಾ ಉಪಚುನಾವಣೆಯ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾದರು. ಜೆಡಿಎಸ್‌ಗೆ ಲಭಿಸಲಿರುವ ಸಹಾನುಭೂತಿಯ ಮತಗಳನ್ನು ಮತ್ತು ಕಾಂಗ್ರೆಸ್‌ನ ಪಾರಂಪರಿಕ ಮತಗಳನ್ನು ಒಡೆದು, ಬಿಜೆಪಿಯನ್ನು ಗೆಲ್ಲಿಸುವಲ್ಲಿ ಸಫಲರಾದ ಕೀರ್ತಿ ವಿಜಯೇಂದ್ರಗೆ ಸಲ್ಲುತ್ತದೆ.

ತಂದೆಯ ಆಸೆ ಈಡೇರಿಸಿದ ಮಗ

ಡಾ.ರಾಜೇಶ್‌ಗೌಡ ಅವರನ್ನು ಗೆಲ್ಲಿಸುವ ಮೂಲಕ ಶಿರಾದಲ್ಲಿ ಪಕ್ಷದ ಖಾತೆ ತೆರೆಯಬೇಕು ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮಹಾದಾಸೆಯನ್ನು ಈಡೇರಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜಾತಿಯ ಸೂಕ್ಷ್ಮತೆಯನ್ನು ಅರಿತು ರಣತಂತ್ರ ರೂಪಿಸಿ ಜನರ ಮನವೊಲಿಸುವ ಪ್ರಯತ್ನ ನಡೆಸಿದರು. ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು. ಇದರ ಫಲವಾಗಿ ಡಾ.ರಾಜೇಶ್‌ಗೌಡ ಅವರು ಬಿಜೆಪಿಯಿಂದ ಆಯ್ಕೆಯಾಗಿ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದ ಪ್ರಥಮ ಶಾಸಕ ಎಂಬ ಕೀರ್ತಿಗೆ ಪಾತ್ರರಾದರು. ಖಾತೆಯನ್ನೇ ತೆರೆಯದಿದ್ದ ಶಿರಾ ಕ್ಷೇತ್ರದಲ್ಲಿ ಮುಂದಿನ ದಿನದಲ್ಲಿ ಬಿಜೆಪಿ ಉತ್ತಮ ಭವಿಷ್ಯ ಇದೆ ಎಂಬುದನ್ನು ವಿಜಯೇಂದ್ರ ಅಕ್ಷರಶಃ ಸಾಬೀತುಪಡಿಸಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಮತಗಳಿಗೆ ಬಲೆ

ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ ವಿಜಯೇಂದ್ರ, ತಮ್ಮ ತಂಡವನ್ನು ತಳಮಟ್ಟದವರೆಗೆ ಕಳುಹಿಸಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದರು. ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ನೀಡುವ ಮೂಲಕ ತಮ್ಮ ಕಾರ್ಯತಂತ್ರವನ್ನು ಹೆಣೆದರು. ಪ್ರತಿಯೊಬ್ಬರು ನಿರ್ವಹಿಸುತ್ತಿರುವ ಕೆಲಸ ಮೇಲೆ ನಿಗಾವಹಿಸಿ ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸಿದ್ದರು. ಶಿರಾ ಕ್ಷೇತ್ರದ ಉಸ್ತುವಾರಿ ತೆಗೆದುಕೊಂಡ ಬಳಿಕ ಅಲ್ಲಿಯೇ ಮೊಕ್ಕಾ ಹೂಡಿ ಹಗಲಿರುಳು ಶ್ರಮವಹಿಸಿದರು. ಹಿಂದುತ್ವ ಅಜೆಂಡಾವನ್ನು ಮುಂದಿಟ್ಟುಕೊಂಡು ಮತ ಕೇಳುವ ಸಾಮಾನ್ಯ ತಂತ್ರವನ್ನು ತೆಗೆದು ಪಕ್ಕಕ್ಕಿಟ್ಟರು. ಬಿಜೆಪಿ ಮತಗಳೆಂದರೆ ಲಿಂಗಾಯತ, ಬ್ರಾಹ್ಮಣರು ಎಂಬ ಭಾವನೆಯನ್ನು ದೂರ ಮಾಡಿದರು. ಹಿಂದುಳಿದ ಮತ್ತು ಸಣ್ಣ ಸಮುದಾಯಗಳ ಜನರು ಸಹ ಬಿಜೆಪಿಯನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಕಾಂಗ್ರೆಸ್‌-ಜೆಡಿಎಸ್‌ಗೆ ಹಂಚಿಕೆಯಾಗಿದ್ದ ಮತಗಳನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಸಫಲರಾದರು. ಕ್ಷೇತ್ರದಲ್ಲಿ 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಮೂಲಕ ತಮ್ಮ ಪ್ರಭಾವವನ್ನು ರಾಜಕೀಯದಲ್ಲಿ ಮತ್ತು ಪಕ್ಷದಲ್ಲಿ ಮತ್ತಷ್ಟುಹೆಚ್ಚಿಸಿಕೊಂಡಿದ್ದಾರೆ.