Asianet Suvarna News Asianet Suvarna News

ಕೋರ್ ಕಮಿಟಿಯಲ್ಲಿ ಮಹತ್ವದ ತೀರ್ಮಾನ, ವಿಜಯೇಂದ್ರಗೆ ಬಂಪರ್...!

* ಕರ್ನಾಟಕ ಬಿಜೆಪಿ ಕೋರ್ ಕಮಿಟಿಯಲ್ಲಿ ಮಹತ್ವದ ತೀರ್ಮಾನ
* ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರಗೆ ಬಂಪರ್
* ಬೊಮ್ಮಾಯಿ ಸಂಪುಟ ಸೇರ್ತಾರಾ ವಿಜಯೇಂದ್ರ?

by vijayendra name suggested for MLC Election Says CM Bommai rbj
Author
Bengaluru, First Published May 14, 2022, 4:05 PM IST

ಬೆಂಗಳೂರು, (ಮೇ.14): ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಒಂದು ಕಡೆ ವಿಧಾನಪರಿಷತ್ ಚುನಾವಣೆ ಹಾಗೂ ಸಂಪುಟ ವಿಸ್ತರಣೆ ಸಂಬಂಧ ಬಿಜೆಪಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಈ ಸಂಬಂಧ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್​ ಕಮಿಟಿ ಸಭೆ ನಡೆದಿದ್ದು, ರಾಜ್ಯ ವಿಧಾನ ಪರಿಷತ್​ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಹೆಸರು ಶಿಫಾರಸಿಗೆ ನಿರ್ಧಾರ ಮಾಡಲಾಗಿದೆ.

ರಾಜ್ಯ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಕೋರ್ ಕಮಿಟಿ ಸಭೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ವಿಜಯೇಂದ್ರ ಹೆಸರನ್ನು ಮಾಜಿ ಸಿಎಂ ಯಡಿಯೂರಪ್ಪ ಪ್ರಸ್ತಾಪ ಮಾಡಿದರು. ನಾವು ಹೆಸರು ಕಳುಹಿಸುತ್ತೇವೆ, ಮೇಲಿನವರು ತೀರ್ಮಾನ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. 1:5 ಆಧಾರದಲ್ಲಿ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಕೋರ್ ಕಮಿಟಿ ಸಭೆ ಅಧಿಕಾರ ನೀಡಿದೆ. ಸಿಎಂ ಮತ್ತು ರಾಜ್ಯಾಧ್ಯಕ್ಷರು ಮತ್ತೊಮ್ಮೆ ಮಾತುಕತೆ ನಡೆಸಿ ಕೇಂದ್ರೀಯ ಚುನಾವಣಾ ಸಮಿತಿಗೆ ಹೆಸರುಗಳು ರವಾನೆಯಾಗಲಿವೆ.

Karnataka Politics: ವಿಜಯೇಂದ್ರಗೆ ಭೇಷ್‌ ಎಂದ ಅಮಿತ್‌ ಶಾ

 ಪರಿಷತ್​ನ ನಾಲ್ಕು ಸ್ಥಾನಗಳಿಗೆ 5 ಹೆಸರು ಕಳುಹಿಸುವಂತೆ ಬಿಜೆಪಿ ಕೋರ್ ಕಮಿಟಿ ಸಭೆಗೂ ಮುನ್ನ ಹೈಕಮಾಂಡ್ ಸೂಚಿಸಿತ್ತು. ಸೋಷಿಯಲ್ ಇಂಜಿನಿಯರಿಂಗ್ ಆಧಾರದಲ್ಲಿ ಕಳಿಸುವಂತೆ ಸೂಚಿಸಲಾಗಿತ್ತು. ಅದರಂತೆ 4 ಸ್ಥಾನಗಳಿಗೆ ಒಟ್ಟು 20 ಹೆಸರು ಕಳುಹಿಸಲು ತೀರ್ಮಾನ ಮಾಡಲಾಗಿದೆ. ಸದ್ಯಕ್ಕೆ ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರ,  ಹೈಕಮಾಂಡ್ ಅಂಗೀಕರಿಸಿದರೆ ಎಂಎಲ್ ಸಿ ಆಗುವುದು ಖಚಿತವಾಗಿದೆ. ಅಲ್ಲದೇ  ಬೊಮ್ಮಾಯಿ ಸಂಪುಟ ಸೇರುವ ಎಲ್ಲಾ ಸಾಧ್ಯತೆಗಳಿವೆ.
"

ರಾಜ್ಯಸಭೆಯ ಎರಡು ಸ್ಥಾನಗಳಿಗೆ ಇಬ್ಬರ ಹೆಸರು ಶಿಫಾರಸು
ಹಾಲಿ ಮೇಲ್ಮನೆ ಸದಸ್ಯರಾದ ನಿರ್ಮಲಾ ಸೀತಾರಾಮನ್ ಮತ್ತು ಕೆ.ಸಿ.‌ ರಾಮಮೂರ್ತಿ ಅವರಿಬ್ಬರ ಹೆಸರುಗಳನ್ನೂ ರಾಜ್ಯಸಭೆಗೆ ಶಿಫಾರಸು ಮಾಡಲು ನಿರ್ಧರಿಸಿದೆ. ರಾಜ್ಯಸಭೆಯ 2ನೇ ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ.‌ರಾಮಮೂರ್ತಿ, ನಿರ್ಮಲ್ ಕುಮಾರ್ ಸುರಾನಾ ಸೇರಿದಂತೆ ಐವರ ಹೆಸರನ್ನು ರಾಜ್ಯ ಬಿಜೆಪಿ ನಾಯಕರು ಶಿಫಾರಸು ಮಾಡಿದ್ದಾರೆ.

ವಿಧಾನ ಪರಿಷತ್ 4 ಸ್ಥಾನಗಳಿಗೆ ಜೂನ್ 15ಕ್ಕೆ ಮತದಾನ:
ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಪದವೀಧರ ಕ್ಷೇತ್ರಗಳ ಎರಡು ಮತ್ತು ಶಿಕ್ಷಕರ ಕ್ಷೇತ್ರಗಳ ಎರಡು ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯವ್ಯ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 19ರಂದು ಪರಿಷತ್​ ಚುನಾವಣೆಯ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನ. ಜೂನ್ 13ರಂದು ಮತದಾನ ಮತ್ತು ಜೂನ್ 15ರಂದು ಮತ ಎಣಿಕೆ ನಡೆಯಲಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹನುಮಂತ ನಿರಾಣಿ, ಶ್ರೀಕಂಠೇಗೌಡ ಮತ್ತು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಸವರಾಜ ಹೊರಟ್ಟಿ, ಅರುಣ ಶಹಾಪುರ ಅವಧಿ ಜುಲೈ 7ಕ್ಕೆ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಮೇ 18ರಂದು ರಾಜೀನಾಮೆ ನೀಡುವ ಸಾಧ್ಯತೆಯಿದೆ. ರಾಜೀನಾಮೆ ನೀಡಿದ ನಂತರ ಮೇ 19ರಂದು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿಯು ದಾವೋಸ್​ಗೆ ತೆರಳುವ ಮುನ್ನ ಹೊರಟ್ಟಿ ಬಿಜೆಪಿಗೆ ಸೇರಲು ತೀರ್ಮಾನಿಸಿದ್ದಾರೆ. ಹೊರಟ್ಟಿ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಜೂನ್‌ ವೇಳೆಗೆ ವಿಧಾನ ಪರಿಷತ್ ಚುನಾವಣೆ (MLC Elections) ನಡೆಯಲಿದೆ. ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಪಕ್ಷಗಳು ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ನಿರತವಾಗಿವೆ. ಈ ಸಂಬಂಧ ಭಾರತೀಯ ಜನತಾ ಪಕ್ಷ- ಬಿಜೆಪಿ (BJP) ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿದೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹನುಮಂತ ನಿರಾಣಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಅರುಣ್ ಶಹಾಪುರ್ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆ ಇದೆ. ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಮೋಹನ್ ಲಿಂಬಿಕಾಯಿ ಹೆಸರು ಘೋಷಿಸುವ ನಿರೀಕ್ಷೆ ಇದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಗೋ.‌ಮಧುಸೂದನ್ ಹಾಗೂ ಕಳೆದ ಬಾರಿ ಸೋತಿದ್ದ ಮೈ.ವಿ.ರವಿಶಂಕರ ಹೆಸರುಗಳು ರೇಸ್​ನಲ್ಲಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Follow Us:
Download App:
  • android
  • ios