"

ಹೊಸಕೋಟೆ, (ನ.18):  ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆದ್ದರೆ 24 ಗಂಟೆಯೊಳಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ಧಾರೆ. 

ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರ ಬಂಡಾಯದಿಂದ ಕಾವೇರಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ ಇಂದು (ಸೋಮವಾರ) ನಾಮಪತ್ರ ಸಲ್ಲಿಕೆಗೆ ಖುದ್ದು ಸಿಎಂ ಯಡಿಯೂರಪ್ಪ ಸಾಥ್ ನೀಡಿದರು.

ಎಂಟಿಬಿ ನಾಗರಾಜ್ ವಿರುದ್ಧ ಸಹೋದರನಿಂದ ಗಂಭೀರ ಆರೋಪ

ಬಳಿಕ ಮಾತನಾಡಿದ ಬಿಎಸ್‌ವೈ, ಹೊಸಕೋಟೆಯನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಘೋಷಿಸಿದ ಸಿಎಂ ಯಡಿಯೂರಪ್ಪ, ಎಂಟಿಬಿ ನಾಗರಾಜ್ ಅವರ ಪರಿಶ್ರಮದಿಂದ ಹೊಸಕೋಟೆ ಕ್ಷೇತ್ರ ಅಭಿವೃದ್ದಿ ಆಗಲಿದೆ ಎಂದು ಹೇಳಿದರು.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶರತ್ ಗೌಡ ಅವರನ್ನು ಈಗಾಗಲೇ  ಉಚ್ಛಾಟನೆ ಮಾಡಲಾಗಿದೆ. ಅವರನ್ನ ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು. 

‘ಎಂಟಿಬಿ ರಾಜೀನಾಮೆ ನೀಡಿದ್ದಕ್ಕೆ ಕಾರಣವೇ ಇದು’

ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಎಂಟಿಬಿ ನಾಗರಾಜ್ ಎಂದು ಹೊಗಳಿದ ಯಡಿಯೂರಪ್ಪ, ನಾಗರಾಜ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಹೊಸಕೋಟೆ ತಾಲೂಕಿನಲ್ಲಿ 20 ವರ್ಷಗಳಿಂದ ಸತತವಾಗಿ ಕುಡಿಯುವ ನೀರಿನ ಅಭಾವವಿದೆ. ಕೈ ಮುಗಿದು ಪರಿಪರಿಯಾಗಿ ಹೆಚ್ಡಿಕೆಗೆ ಅನುದಾನ ಕೊಡುವಂತೆ ಕೇಳಿಕೊಂಡೆ. ಆದ್ರೆ ಕೊಡಲಿಲ್ಲ. ಕೇವಲ ಜೆಡಿಎಸ್ ಎಂಎಲ್ಎಗಳಿಗೆ ಮಾತ್ರ ಕೊಟ್ರು ಎಂದು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

 ತಾರತಮ್ಯ ಮಾಡದೆ ಅನುದಾನ ನೀಡುವ ರಾಜ್ಯದ ಧೀಮಂತ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಹಾಡಿ ಹೊಗಳಿದರು. ಎಂಟಿಗೆ ನಾನು ಟಿಕೆಟ್ ಕೊಟ್ಟೆ ಅಂತ ಸಿದ್ದರಾಮಯ್ಯ ಹೇಳ್ತಾರೆ, ಆದ್ರೆ, ನಾನು ಪಕ್ಷಕ್ಕೆ ಸೇರಿದಾಗ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು ಎಂದು ಎಂಟಿಬಿ ಟಾಂಗ್ ತಿರುಗೇಟು ನೀಡಿದರು. 

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.