ಬೆಂಗಳೂರು, (ಸೆ.26): ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಮೇಲೆ ಸಿದ್ದರಾಮಮಯ್ಯ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ಕೊಟ್ಟಿದ್ದಾರೆ.

ಬಿ.ಎಸ್. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ. ಇನ್ನೊಬ್ಬರು ಅವರ ಪುತ್ರ ಬಿ.ವೈ. ವಿಜಯೇಂದ್ರ  ಸೂಪರ್ ಸಿಎಂ.‌ ಇದಲ್ಲದೆ ಯಡಿಯೂರಪ್ಪ ಅವರ ಮೊಮ್ಮಕ್ಕಳು ಕೂಡ ನೇರವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಗಂಭೀರ ಆರೋಪ ಮಾಡಿದ್ದರು.

ಸದನದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್

ಈ ಬಗ್ಗೆ ಸದನದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ, ನನ್ನ ಮಗ ವಿಜಯೇಂದ್ರ ಯಾವುದೇ ಭ್ರಷ್ಟಾಚಾರ ಮಾಡಿಲ್ಲ.  ಮಾಡಿದ್ದನ್ನ ಪ್ರೂವ್ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ. ಇಲ್ಲವಾದಲ್ಲಿ ನೀವು ಪ್ರತಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ, ದಾಖಲೆ ನನ್ನ ಬಳಿ ಇದೆ. ಸಿಡಿ ಇದೆ ಕೇಳಿ ನೋಡಿ ಎಂದು ಹೇಳುತ್ತಿದ್ದಂತೆಯೇ  ಮಧ್ಯೆ ಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ಹೇಗೆ ಹೇಳ್ತೀರಾ ? ಸಿಎಂ ಆದವರು...ಯಾರೋ ಮಾತಾಡಿದ್ದಕ್ಕೆ ಯಡಿಯೂರಪ್ಪ ಹೆಸರನ್ನು ಹೇಗೆ ತರ್ತೀರಾ ? ನಿಮ್ಮ ಸರ್ಕಾರದ ಪಾಪನಾವು ಹೊರ್ಬೇಕಾ ? ಎಂದು ಆಕ್ರೋಶ ವ್ಯಕ್ತಪಡಿಸಿದರು.