ಕಾಂಗ್ರೆಸ್ ಗೆಲ್ಲುತ್ತೆಂದು ಯಡಿಯೂರಪ್ಪಗೆ ಗೊತ್ತು: ಸಿದ್ದರಾಮಯ್ಯ
ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಅವರು ಅಂತರಾಳದಿಂದ ಹೇಳಿಲ್ಲ: ವಿಪಕ್ಷ ನಾಯಕ ವ್ಯಾಖ್ಯಾನ
ಬೆಂಗಳೂರು(ಜು.25): ‘ಬಿ.ಎಸ್. ಯಡಿಯೂರಪ್ಪ ಬಿಜೆಪಿಯವರು. ಬಿಜೆಪಿಯವರು ನಮ್ಮನ್ನು ಟೀಕಿಸೋದು ಸಹಜ. ಇಷ್ಟಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಯಡಿಯೂರಪ್ಪ ತಮ್ಮ ಅಂತರಾಳದಿಂದ ಹೇಳಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದೇ ಯಡಿಯೂರಪ್ಪ ಅವರ ಮಾತಿನ ಅರ್ಥ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬುದು ತಿರುಕನ ಕನಸು’ ಎಂದಿರುವ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ‘ಯಡಿಯೂರಪ್ಪ ಬಿಜೆಪಿಯವರು. ಅವರು ಕಾಂಗ್ರೆಸ್ ಪರವಾಗಿ ಮಾತನಾಡುತ್ತಾರಾ? ಆದರೂ, ಈ ಮಾತನ್ನು ಯಡಿಯೂರಪ್ಪ ಅಂತರಾಳದಿಂದ ಹೇಳಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದೇ ಯಡಿಯೂರಪ್ಪ ಅವರ ಮಾತಿನ ಅರ್ಥ’ ಎಂದರು.
ಕ್ಲೀನ್‌ಚಿಟ್ ಅಂದ್ರೆ ‘ಕೇಸು ಮುಚ್ಚಿ ಹಾಕುತ್ತಾರೆ’:
ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯ ಪೊಲೀಸರು ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಬಗ್ಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದರೆ ಅವರು ನಿರ್ದೋಷಿ ಎಂದಲ್ಲ, ಕೇಸ್ ಮುಚ್ಚಿ ಹಾಕಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ನಿರಪರಾಧಿ ಎಂದು ಕೋರ್ಚ್ ಹೇಳಿಲ್ಲ. ರಾಜ್ಯ ಸರ್ಕಾರದ ಪೊಲೀಸರು ಬಿ ರಿಪೋರ್ಚ್ ಸಲ್ಲಿಕೆ ಮಾಡಿದ್ದಾರೆ ಅಷ್ಟೇ. ತನ್ಮೂಲಕ ರಾಜ್ಯ ಬಿಜೆಪಿಯವರು ಅಕ್ರಮ, ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಿಕೊಂಡು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು. ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಸ್ವತಃ ಅವರ ಮೃತರ ಪತ್ನಿಯೇ ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದರು. ಈ ಬಗ್ಗೆ ಯಾವ ಕ್ರಮ ಆಯಿತು?’ ಎಂದು ಪ್ರಶ್ನಿಸಿದರು.
ಆ ಜಮೀರ್‌ಗೆಲ್ಲ ಉತ್ತರಿಸಲು ನಾನು ತಯಾರಿಲ್ಲ: ಡಿಕೆಶಿ ಕಿಡಿ
ಯತ್ನಾಳ ಮಾತನಾಡಿದ್ದು ಶಿಸ್ತಾ?:
‘ಕಾಂಗ್ರೆಸ್ ಪಕ್ಷ ಬಿಜೆಪಿ ನೋಡಿ ಶಿಸ್ತು ಕಲಿಯಲಿ’ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಬಸನಗೌಡ ಪಾಟೀಲ್ ಯತ್ನಾಳ್ ಅವರು 2500 ಕೋಟಿ ಕೊಟ್ಟರೆ ಮುಖ್ಯಮಂತ್ರಿ ಮಾಡುತ್ತಾರೆ ಎಂದಿದ್ದರು. ಅದೇನಾ ಶಿಸ್ತು ಎಂದರೆ? ಯಡಿಯೂರಪ್ಪ ಮನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದವರೂ ಯತ್ನಾಳ್ ಅವರೇ ಅಲ್ಲವೇ’ ಎಂದು ತಿರುಗೇಟು ನೀಡಿದರು.
ಸಿ.ಟಿ.ರವಿಗೆ ಟಾಂಗ್
ಸಿ.ಟಿ. ರವಿಗೆ ಅಹಿಂದ, ಹಿಂದ ಅಂದರೇನೂ ಅಂತ ಗೊತ್ತಿಲ್ಲ. ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಇರುವವರು ಬಿಜೆಪಿಯವರು. ಮಂಡಲ್ ಕಮಿಷನ್ ವರದಿ ವಿರೋಧ ಮಾಡಿದ್ದು ಯಾರು? ರಾಮಾ ಜೋಯಿಸ್ ಯಾಕೆ ಸುಪ್ರೀಂಕೋರ್ಚ್‌ಗೆ ಹೋದರು? ಅಂತ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.