Surprise No 1: ಏಕನಾಥ್ ಶಿಂಧೆ ಮಹಾರಾಷ್ಟ್ರ ಸಿಎಂ
ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ನೇಮಕವಾಗಲಿದ್ದಾರೆ ಎಂದು ಹೇಳಲಾಗಿದೆ. ಇಲ್ಲಿಯವರೆಗೂ ಬಿಜೆಪಿಯ ದೇವೇಂದ್ರ ಫಡ್ನವಿಸ್ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು.
ಮುಂಬೈ (ಜೂನ್ 30): ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ (eknath shinde ) ಪದಗ್ರಹಣ ಮಾಡಲಿದ್ದಾರೆ ಎಂದು ಘೋಷಣೆಯಾಗಿದೆ.
ಈವರೆಗೀ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ (BJP) ದೇವೇಂದ್ರ ಫಡ್ನವಿಸ್ (Devendra fadnavis) ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಇದರಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಂಜೆ 7.30ಕ್ಕೆ ರಾಜಭವನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಮಹಾ ಅಘಾಡಿ ಸರ್ಕಾರ ಪತನವಾಗಲು ಪ್ರಮುಖವಾಗಿ ಕಾರಣವಾಗಿದ್ದ ಬಂಡಾಯ ಬಣದ ಲೀಡರ್ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಪಟ್ಟ ನೀಡುವ ನಿಟ್ಟಿನ ನಿರ್ಧಾರವನ್ನು ಸ್ವತಃ ದೇವೇಂದ್ರ ಫಡ್ನವಿಸ್ ಅವರೇ ಮಾಡಿದ್ದಾರೆ.
ಬಾಳಾಸಾಹೇಬ್‌ಗೆ ಸಿಎಂ ಪಟ್ಟ: 2019ರಲ್ಲಿ ನಾವು ಹಾಗೂ ಶಿವಸೇನೆ ಒಟ್ಟಾಗಿ ಚುನಾವಣೆ ಎದುರಿಸಿದ್ದೆವು. ನಾವು ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದುಕೊಂಡಿದ್ದೆವು. ಆದರೆ, ಚುನಾವಣೆಯ ಬಳಿಕ, ಶಿವಸೇನೆ ಬೇರೆಯದೇ ಆದ ನಿರ್ಧಾರ ಮಾಡಿತು. ಇದರಿಂದಾಗಿ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಗಳಾದವು. ಈ ಮೈತ್ರಿಯನ್ನು ಮುರಿಯಬೇಕು ಎಂದು ಶಿವಸೇನೆ ಶಾಸಕರು ಒತ್ತಾಯಿಸಿದರೂ ಈಡೇರಿಲ್ಲ. ಆದರೆ ಉದ್ಧವ್ ಠಾಕ್ರೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಇರಲು ನಿರ್ಧರಿಸಿದ್ದಾರೆ. ಮತ್ತು ಅವರು ತಮ್ಮ ಸ್ವಂತ ಶಾಸಕರ ಮಾತನ್ನು ಕೇಳಲಿಲ್ಲ ಎಂದು ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಅವರನ್ನು ನೇಮಕ ಮಾಡಿದ್ದರ ಹಿಂದಿನ ಕಾರಣ ತಿಳಿಸಿದರು.
ಶಿಂಧೆ ಅವರನ್ನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ ಬಳಿಕ ಮಾತನಾಡಿದ ಏಕನಾಥ್ ಶಿಂಧೆ, "ನಾವು ಇಂದು ತೆಗೆದುಕೊಂಡ ನಿರ್ಧಾರವು ನಮ್ಮ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯ ಅಜೆಂಡಾದ ಜೊತೆಗೆ ಬಾಳಾಸಾಹೇಬರ ಹಿಂದುತ್ವ ಮತ್ತು ಸಿದ್ಧಾಂತಕ್ಕಾಗಿ, ನಾವು ಇಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಲ್ಲಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯ ಅಜೆಂಡಾವೂ ಇದೆ' ಎಂದಿದ್ದಾರೆ. ಇದೇ ವೇಳೆ ಏಕನಾಥ್ ಶಿಂಧೆ ನೇತೃತ್ವದ ಸಂಪುಟದಿಂದ ತಾವು ಸಂಪೂರ್ಣವಾಗಿ ಹೊರಗಿರುವುದಾಗಿ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ದಾರೆ.
ಮಕ್ಕಳ ಸಾವನ್ನು ಕಣ್ಣೆದುರೇ ಕಂಡಿದ್ದ ಏಕನಾಥ್ ಶಿಂಧೆ, ಇಂದು ಇಡಿ ಶಿವಸೇನೆಯೆ ಅವರ ಬೆನ್ನಹಿಂದೆ!
ಮಹಾವಿಕಾಸ್ ಅಘಾಡಿ ಸರ್ಕಾರ 2019 ರಲ್ಲಿ ನೀಡಿದ್ದ ಜನಾದೇಶವನ್ನು ಅವಮಾನಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಇಬ್ಬರು ಸಚಿವರು ಜೈಲಿನಲ್ಲಿದ್ದಾರೆ. ಒಂದೆಡೆ ಬಾಳಾಸಾಹೇಬ್ ಠಾಕ್ರೆ ದಾವೂದ್ ನನ್ನು ವಿರೋಧಿಸಿದರೆ, ಮತ್ತೊಂದೆಡೆ ದಾವೂದ್ ಜತೆ ಸಂಬಂಧ ಹೊಂದಿರುವ ಸಚಿವರನ್ನು ಜೈಲಿಗೆ ಹೋದರೂ ಸಂಪುಟದಿಂದ ಹೊರಹಾಕುವ ನಿರ್ಧಾರ ಮಾಡಿರಲಿಲ್ಲ.
ಅಧಿಕಾರದ ಆಸೆಗೆ ಮಾತೃಭಾಷೆ ಅಸ್ಮಿತೆ, ಆದರ್ಶ ಕಟ್ಟಿಟ್ಟ ಶಿವಸೇನೆಗೆ ಇದೆಂಥಾ ಗತಿ!
ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವ ನಿರ್ಧಾರವನ್ನು ಸರ್ಕಾರವು ಇನ್ನೇನು ಬೀಳುವ ಹಂತದಲ್ಲಿದ್ದ ವೇಳೆ ನಿರ್ಧಾರ ಮಾಡಲಾಗಿತ್ತು. "ಇದಕ್ಕೆ ಯಾವುದೇ ಅರ್ಥವಿಲ್ಲ. ಈ ನಿರ್ಧಾರವನ್ನು ಹೊಸ ಸರ್ಕಾರ ತೆಗೆದುಕೊಳ್ಳಬೇಕು. ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ನಮ್ಮಿಂದ ಸೋತವರ ನಿರ್ಧಾರಗಳೇ ಪ್ರಮುಖವಾಗುತ್ತಿದ್ದವು. ಅದಕ್ಕಾಗಿಯೇ ಇವರು ಮೈತ್ರಿಯಿಂದ ಹೊರಬರಲು ನಿರ್ಧರಿಸಿದ್ದರು ಎಂದು ಫಡ್ನವಿಸ್ ಹೇಳಿದ್ದಾರೆ.
ದೇವೇಂದ್ರ ಫಡ್ನವಿಸ್ ನೀಡಿದ ಬೆಂಬಲಕ್ಕೆ ಧನ್ಯವಾದ ಹೇಳಿದ ಏಕನಾಥ್ ಶಿಂಧೆ, "ಫಡ್ನವಿಸ್ ಅವರ ಹೃದಯ ವಿಶಾಲವಾದದ್ದು. ಇಲ್ಲಿಯವರೆಗೂ ನಮಗೆ ಸಹಾಯ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಕಳೆದ ಎರಡೂವರೆ ವರ್ಷದಲ್ಲಿ ಏನೇನೆಲ್ಲಾ ಆಗಿತ್ತು ಅನ್ನೋದನ್ನ ಫಡ್ನವಿಸ್ ಅವರು ಈಗಾಗಲೇ ನಿಮಗೆ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ನಿಂತುಹೋಗಿದೆ' ಎಂದು ಶಿಂಧೆ ಹೇಳಿದ್ದಾರೆ. ಬಿಜೆಪಿ-ಶಿವಸೇನೆ ಮೈತ್ರಿ ನೈಸರ್ಗಿಕವಾದದ್ದು, ಆದರೆ, ಮಹಾ ವಿಕಾಸ್ ಅಘಾಡಿಯಲ್ಲಿ ನಮ್ಮ ಶಾಸಕರೇ ನೆಮ್ಮದಿಯಾಗಿರಲಿಲ್ಲ. ಸ್ವಾರ್ಥಕ್ಕಾಗಿ ಇವರೆಲ್ಲ ನಮ್ಮೊಂದಿಗೆ ಸೇರಿರಲಿಲ್ಲ ಎಂದು ಹೇಳಿದ್ದಾರೆ.