ಬೆಂಗಳೂರು ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ, ನಮಗೆ ಅಧಿಕಾರ ಸಿಕ್ಕರೆ ಬ್ರ್ಯಾಂಡ್‌ ಮರುಸ್ಥಾಪನೆ: ಡಿ.ಕೆ. ಶಿವಕುಮಾರ್‌ 

ಬೆಂಗಳೂರು(ಸೆ.09): ಬಿಜೆಪಿಯವರಿಗೆ ಬೆಂಗಳೂರು ನಿವಾಸಿಗಳ ಬಗ್ಗೆ ಕಾಳಜಿ ಇಲ್ಲ. ಬೆಂಗಳೂರಿಗರು ನಮಗೆ ಒಂದು ಅವಕಾಶ ಕೊಡಿ. ನಿಮ್ಮ ಗೌರವ ಕಾಪಾಡುವ ಹಾಗೂ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಗಳೂರು ಜನರಿಗೆ ಮನವಿ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿಯವರು ಬ್ರ್ಯಾಂಡ್‌ ಬೆಂಗಳೂರು ಹೆಸರನ್ನು ಹಾಳು ಮಾಡಿದ್ದಾರೆ. ಐಟಿ-ಬಿಟಿ ಕಂಪೆನಿಗಳವರು ಹಿಡಿಶಾಪ ಹಾಕುವಂತಾಗಿದೆ. ನಮಗೆ ಅಧಿಕಾರ ಬಂದರೆ ಬ್ರ್ಯಾಂಡ್‌ ಬೆಂಗಳೂರು ಹೆಸರನ್ನು ಮತ್ತೆ ಮರು ಸ್ಥಾಪನೆ ಮಾಡುತ್ತೇವೆ ಎಂದರು.

ನಿನ್ನ ಭ್ರಷ್ಟಾಚಾರದಿಂದಲೇ ಬೆಂಗಳೂರಿಗೆ ಈ ಸ್ಥಿತಿ: ಸಿಎಂ ವಿರುದ್ಧ ಏಕವಚನದಲ್ಲಿ ಡಿಕೆಶಿ ವಾಗ್ದಾಳಿ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ನಿರಂತರ ಮಳೆ ಬೀಳುತ್ತಿದೆ. ಈ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ತಿಳಿದಿಲ್ಲ. ಬೆಂಗಳೂರು ಎಷ್ಟುಜನರಿಗೆ ಉದ್ಯೋಗ ನೀಡಿದೆ ಎಂಬುದು ಗೊತ್ತಿಲ್ಲ. ದೇಶಕ್ಕೆ ಸುಮಾರು ಶೇ.30 ರಷ್ಟುತೆರಿಗೆ ಆದಾಯ ಕೇಂದ್ರಕ್ಕೆ ಇಲ್ಲಿಂದಲೇ ಹೋಗುತ್ತದೆ. ನಾನೂ ಬೆಂಗಳೂರು ನಿವಾಸಿಯಾಗಿದ್ದು, ನಮಗೆ ಒಂದು ಅವಕಾಶ ನೀಡಿ. ನಾವು ನಿಮ್ಮ ಗೌರವ ಕಾಪಾಡಿ ಉತ್ತಮ ಬದುಕು ನೀಡುವಂತಹ ಆಡಳಿತ ನೀಡುತ್ತೇವೆ ಎಂದು ಮನವಿ ಮಾಡಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಮಾನ ಹರಾಜಾಗುತ್ತಿರುವ ಬಗ್ಗೆ ಕೇಳಿದಾಗ ‘ನಮಗೆ ಅವಕಾಶ ಕೊಟ್ಟರೆ ನಾವು ಬೆಂಗಳೂರಿನ ಬ್ರ್ಯಾಂಡ್‌ ಅನ್ನು ಮರು ಸ್ಥಾಪಿಸುತ್ತೇವೆ’ ಎಂದರು.

‘ಜನಸ್ಪಂದನ’ ಬದಲು ‘ಜಲ ಸ್ಪಂದನ’ ಮಾಡಲಿ: ಡಿಕೆಶಿ ವ್ಯಂಗ್ಯ

ಬೆಂಗಳೂರು: ರಾಜ್ಯ ಸರ್ಕಾರ ಜನೋತ್ಸವ ಹೆಸರನ್ನು ಜನಸ್ಪಂದನ ಎಂದು ಬದಲಿಸಿದೆ. ಇದರ ಬದಲು ‘ಜಲ ಸ್ಪಂದನ’ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಿ. ಜತೆಗೆ ಬೆಂಗಳೂರಿನ ಐಟಿ ಕಾರಿಡಾರ್‌ನಲ್ಲಿ ಜಲ ಸಂಚಾರಕ್ಕಾಗಿ ಬೋಟ್‌ ಫ್ಯಾಕ್ಟರಿ ಆರಂಬಿಸಲಿ ಎಂದು ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದರು. ಬಿಜೆಪಿ ಅವರು ಜನಸ್ಪಂದನ ಬದಲಾಗಿ ಮೊದಲು ಜಲಸ್ಪಂದನ ಕೆಲಸ ಮಾಡಲಿ. ಇನ್ನಾದರೂ ಎಚ್ಚೆತ್ತುಕೊಂಡು ಜನಪರ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.