ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಆಶೀರ್ವಾದ ಮಾಡಿದರೆ ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಮಳವಳ್ಳಿ (ಆ.16): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಆಶೀರ್ವಾದ ಮಾಡಿದರೆ ಪಂಚರತ್ನ ಯೋಜನೆ ಮೂಲಕ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ತಾಲೂಕಿನ ವಡ್ಡರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಘಟಕ ಉದ್ಘಾಟನೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಸ್ವಾತಂತ್ರವಾಗಿ ಜನರ ನಿರೀಕ್ಷೆಗೆ ತಕ್ಕಂತೆ ಅಧಿಕಾರ ನಡೆಸಲು, ಯೋಜನೆ ಜಾರಿ ಮಾಡಲು ಬಿಡಲಿಲ್ಲ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು. ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರ ನೀಡಿದರೆ ‘ಪಂಚರತ್ನ’ ಯೋಜನೆ ಮೂಲಕ ಪ್ರತಿಯೊಬ್ಬರಿಗೂ ಮನೆ, ಮನೆಗೊಂದು ಉದ್ಯೋಗ, ಉಚಿತ ಶಿಕ್ಷಣ ಮತ್ತು ಬಡ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಲಾಗುವುದು, ಒಂದೇ ಕ್ಯಾಂಪಸ್‌ನಲ್ಲಿ 1ರಿಂದ 12ನೇ ತರಗತಿವರೆಗೆ ಕನ್ನಡ ಇಂಗ್ಲಿಷ್‌ ಮಾಧ್ಯಮದಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದರು.

ಯಾರನ್ನೋ ಮೆಚ್ಚಿಸಲು ಎಚ್‌ಡಿಕೆ ಕಣ್ಣೀರು ಹಾಕೋ ನಾಟಕವಾಡಿಲ್ಲ: ಪುಟ್ಟರಾಜು

ಅಕ್ರಮಗಳ ತಡೆಗೆ ಕ್ರಮ: ಗ್ರಾಪಂ ಮಟ್ಟದಲ್ಲಿ 30 ಬೆಡ್‌ಗಳ ಗುಣಮಟ್ಟದ ಆಸ್ಪತ್ರೆಯೊಂದಿಗೆ ಉಚಿತ ಆರೋಗ್ಯ ನೀಡಲಾಗುವುದು. ತಾಯಂದಿರು ಒತ್ತಾಯದ ಮೇರೆಗೆ ಹಿಂದಿನ ಸರ್ಕಾರದಲ್ಲಿ ಸಾರಾಯಿ ಮತ್ತು ಲಾಟರಿ ನಿಷೇಧ ಮಾಡಿದ್ದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಸೇರಿದಂತೆ ಇತರೆ ಅಕ್ರಮಗಳ ತಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಸಹಕಾರ ಸಂಘದ ಕಾರ್ಯದರ್ಶಿಗಳು ಹಾಗೂ ಕೆಲವರು ಹೊಂದಾಣಿಕೆ ಮಾಡಿಕೊಂಡು ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಎಆರ್‌ಡಿಆರ್‌ ಭ್ರಷ್ಟಾಚಾರಕ್ಕೆ ಸಹಕಾರ ನೀಡುತ್ತಿರುವುದರಿಂದ ಸರ್ಕಾರ ಬಂದರೆ ಎಆರ್‌ ಡಿಆರ್‌ ವ್ಯವಸ್ಥೆ ತೆಗೆಯಲು ಕ್ರಮ ಕೈಗೊಳ್ಳುವುದು. ನಿಮ್ಮ ಸಮಸ್ಯೆ ಬಗೆಹರಿಸಲು ನೀವು ಮುಂದೆ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿದೆ ಎಂದರು.

ಡಾ.ಅನ್ನದಾನಿಯನ್ನು ಮತ್ತೊಮ್ಮೆ ಗೆಲ್ಲಿಸಿ: ಎಲ್ಲಾ ಸೌಕರ್ಯ ಪಡೆದು ಬೆಳವಣಿಗೆ ನಡೆದ ಬೆನ್ನಿಗೆ ಚೂರಿ ಹಾಕುವವರಿಗಿಂತ ಜೆಡಿಎಸ್‌ ಪಕ್ಷ, ಜನತೆಗೆ ಪ್ರಾಮಾಣಿಕವಾಗಿರುವ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ನನಗೆ ಶಕ್ತಿ ನೀಡಬೇಕು. ನನ್ನ ರಾಜಕೀಯ ಬೆಳವಣಿಗೆ ಮಳವಳ್ಳಿ ಜನರೂ ಕೂಡ ಕಾರಣರಾಗಿದ್ದಾರೆ. ಹೀಗಾಗಿ ಬದುಕಿರುವವರೆಗೂ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಮೇಲಿರುವ ವಿಶ್ವಾಸದಿಂದ ಅನ್ನದಾನಿ ಮತ್ತೊಮ್ಮೆ ಗೆಲ್ಲಬೇಕು. ಮಾಡಿರುವ ತಪ್ಪುಗಳನ್ನು ಕ್ಷಮಿಸಿ ಚುನಾವಣೆಯಲ್ಲಿ ಹಣಕ್ಕೆ ಮತ ಮಾರಿಕೊಳ್ಳದೇ ಅಭಿವೃದ್ಧಿಗಾಗಿ ಯೋಚಿಸಿ ಮತ ಹಾಕಬೇಕು ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಒಂದು ದಿನ ವಾಸ್ತವ್ಯ: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ಭ್ರಷ್ಟಾಚಾರ ಮಾಡಿಲ್ಲ. ಹಣ ಲೂಟಿ ಹೊಡೆದಿಲ್ಲ. ನಿಮ್ಮಗಳ ಪ್ರೀತಿ ಗಳಿಸಿರುವುದಕ್ಕೆ ನಾನು ಇನ್ನೂ ರಾಜಕೀಯವಾಗಿ ಉಳಿದಿದ್ದೇನೆ. ರಾಜಕೀಯಕ್ಕೆ ಬರುವ ಮುನ್ನಾ 45 ಎಕರೆ ಜಮೀನು ಸಂಪಾದಿಸಿದ್ದೇ. ರಾಜಕೀಯಕ್ಕೆ ಬಂದಮೇಲೆ ಜನರ ಪ್ರೀತಿಬಿಟ್ಟು ಬೇರೆ ಏನು ಸಂಪಾದಿಸಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ನನ್ನದು ಎಂದರು. ಜೆಡಿಎಸ್‌ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಂಚಯಾತ್ರೆ ಮೂಲಕ ಸಂಚರಿಸಿ ಪಕ್ಷ ಸಂಘಟಿಸಲಾಗುವುದು. ಮಳವಳ್ಳಿ ತಾಲೂಕಿನಾದ್ಯಂತ ಯಾತ್ರೆ ಸಂಚರಿಸಲಿದೆ. ಈ ವೇಳೆ ಒಂದು ದಿನ ತಾಲೂಕಿನಲ್ಲಿ ವಾಸ್ತವ್ಯ ಮಾಡಲಾಗುವುದು ಎಂದರು.

ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ: ಮಾಜಿ ಸಿಎಂ ಯಡಿಯೂರಪ್ಪ

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ, ಪುತ್ರ ನಿಖಿಲ್‌, ಶಾಸಕ ಡಾ.ಕೆ.ಅನ್ನದಾನಿ, ಕೆಎಂಎಫ್‌ ನಿರ್ದೇಶಕ ವಿಶ್ವನಾಥ್‌ ಸೇರಿದಂತೆ ಹಲವರನ್ನು ತಾಲೂಕಿನ ವಡ್ಡರಹಳ್ಳಿಯಿಂದ ವೇದಿಕೆಗೆ ಜಾನಪದ ಕಲಾ ತಂಡದೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಸಮಾರಂಭದಲ್ಲಿ ಶಾಸಕರಾದ ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಮನ್ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಉಪಾಧ್ಯಕ್ಷ ಎಂ.ಎಸ್‌.ರಘುನಂದನ್‌, ನಿರ್ದೇಶಕರಾದ ಕೆ.ರಾಮಚಂದ್ರ, ರೂಪ, ಎನ್‌.ಬಾಲಕೃಷ್ಣ , ಸುಜಾತ, ಕೆ.ರವಿ, ಎಚ್‌.ಟಿ.ಮಂಜು, ಮುಖಂಡರಾದ ಎಂ.ಸಿ.ವೀರೇಗೌಡ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಪುರಸಭೆ ಉಪಾಧ್ಯಕ್ಷ ಪ್ರಶಾಂತ್‌, ಪುರಸಭೆ ಮಾಜಿ ಅಧ್ಯಕ್ಷ ದೊಡ್ಧಯ್ಯ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ವ್ಯವಸ್ಥಾಪಕ ನಿರ್ದೇಶಕ ಪಿ.ಆರ್‌.ಮಂಜೇಶ್‌ ಇತರರು ಇದ್ದರು.