ಮತ್ತೆ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕರ ಅತೃಪ್ತಿ ಸ್ಫೋಟ
ಕಾಂಗ್ರೆಸ್ ಹಿರಿಯ ನಾಯಕ ಸಿದ್ಧರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕರ ಅಸಮಾಧಾನ ಇದೀಗ ಮತ್ತೊಮ್ಮೆ ಸ್ಫೋಟವಾಗಿದೆ.
ಬೆಂಗಳೂರು [ನ.12]: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಎಚ್. ಮುನಿಯಪ್ಪ ನಡುವಿನ ವಿರಸ ಮುಂದುವರಿದಿದ್ದು, ಸೋಮವಾರ ನಡೆದ ಹಿರಿಯ ನಾಯಕರ ಸಭೆಯಲ್ಲಿ ಅದು ಮತ್ತೆ ಸ್ಫೋಟಗೊಂಡಿತು. ಉಪ ಚುನಾವಣೆಗೆ ಶಿವಾಜಿನಗರದಿಂದ ರಿಜ್ವಾನ್ ಅರ್ಷದ್ ಒಂಟಿ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿದ ಬಗ್ಗೆ ಹರಿಪ್ರಸಾದ್ ಹಾಗೂ ಮನಿಯಪ್ಪ ಅವರು ಸಿದ್ದರಾಮಯ್ಯ ಅವರನ್ನು ಸಭೆಯಲ್ಲಿ ಪ್ರಶ್ನಿಸಿದ್ದು, ಬಿರುಸು ಮಾತಿನ ನಂತರ ಉಭಯ ನಾಯಕರು ಅರ್ಧದಲ್ಲೇ ಸಭೆಯಿಂದ ಹೊರ ನಡೆದಘಟನೆಯೂ ನಡೆಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮುನಿಯಪ್ಪ, ಹಿರಿಯ ನಾಯಕರೊಂದಿಗೆ ಚರ್ಚೆ ಮಾಡದೆ ಎಂಟು ಕ್ಷೇತ್ರಗಳಿಗೆ ಅವಸರದಲ್ಲಿ ಹೆಸರು ಘೋಷಣೆ ಮಾಡಲಾಗಿದೆ. ಈ ವಿಚಾರದಲ್ಲಿ ಹಿರಿಯರನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು. ಆಗ ಮಧ್ಯಪ್ರವೇಶ ಮಾಡಿದ ಮಾಜಿ ಸ್ಪೀಕರ್ ಕೆ.ಆರ್. ರಮೇಶ್‌ಕುಮಾರ್, ನಗರಸಭೆ ಚುನಾವಣೆಯಲ್ಲಿ ನಾವು ಹೇಳಿದವರಿಗೆ ಟಿಕೆಟ್ ನೀಡಿಲ್ಲ ಎಂದು ದೂರಿದರು ಎನ್ನಲಾಗಿದೆ.
ಈ ವೇಳೆ ಗರಂ ಆದ ಕೆ.ಎಚ್. ಮುನಿಯಪ್ಪ, ನನ್ನ ಸೋಲಿಗೆ ನಿಮ್ಮ ಪಕ್ಷವಿರೋಧಿ ಚಟುವಟಿಕೆಯೇ ಕಾರಣ. ನಿಮ್ಮ ಬಗ್ಗೆ ನಾನು ದೂರು ನೀಡಿದ್ದೇನೆ. ಅದರ ಮೇಲೆ ಕ್ರಮ ಕೈಗೊಂಡಿದ್ದರೆ ನೀವು ಪಕ್ಷದಲ್ಲೇ ಇರುವಂತಿಲ್ಲ. ಆದರೆ, ಸಿದ್ದರಾಮಯ್ಯ ತಮ್ಮ ಮೇಲೆ ಆರೋಪ ಮಾಡಿದ ವರನ್ನು ಪಕ್ಷದಿಂದ ಉಚ್ಚಾಟಿಸಿದರು. ನಮ್ಮ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿದವರನ್ನು ಏನೂ ಮಾಡುತ್ತಿಲ್ಲ ಎಂದರು ಎನ್ನಲಾಗಿದೆ. ಆಗ ಧ್ವನಿಗೂಡಿಸಿದ ಬಿ.ಕೆ. ಹರಿಪ್ರಸಾದ್, ಐಎಂಎ ಪ್ರಕರಣದಲ್ಲಿ ಆರೋಪಿ ಯಾಗಿರುವ ರಿಜ್ವಾನ್ ಅರ್ಷದ್ ಅವರಿಗೆ ಶಿವಾಜಿನಗರ ಕ್ಷೇತ್ರದ ಟಿಕೆಟ್ ನೀಡುವುದಾಗಿ ಹೇಳಿದ್ದೀರಿ. ಕ್ಷೇತ್ರದಿಂದ ಒಬ್ಬರ ಹೆಸರನ್ನು ಮಾತ್ರ ಶಿಫಾರಸು ಮಾಡಿದ್ದೀರಿ.
ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಳ್ಳಲು ಐಎಂಎ ಪ್ರಕರಣವೇ ಕಾರಣ. ಹೀಗಿದ್ದಾಗ ಎರಡು ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಹಾಗೂ ಹಾಲಿ ಪರಿಷತ್ ಸದಸ್ಯರಾಗಿರುವ ರಿಜ್ವಾನ್ ಅರ್ಷದ್ ಹೆಸರನ್ನು ಯಾರ ಅಭಿ ಪ್ರಾಯವನ್ನೂ ಸ್ವೀಕರಿಸದೆ ಶಿಫಾರಸು ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು. ಹಿರಿಯ ನಾಯಕರ ಅಭಿಪ್ರಾಯ ಸ್ವೀಕರಿಸದೆ ನಿಮ್ಮ ಇಚ್ಛೆಯಂತೆ ನಡೆದುಕೊಂಡರೆ ನಮಗೆ ಬೆಲೆ ಇರುವುದಿಲ್ಲ.
ಶಿವಾಜಿನಗರ ಕ್ಷೇತ್ರಕ್ಕೆ ಸಲೀಂ ಅಹಮದ್ ಅವರ ಹೆಸರು ಪರಿಗಣಿಸಬಹುದಿತ್ತು. ನೀವು ಸರ್ವಾಧಿಕಾರಿ ಧೋರಣೆ ತೋರುವುದಾದರೆ ನೀವೇ ಚುನಾವಣೆ ಮಾಡಿಕೊಳ್ಳಿ. ನೀವೇ ಜವಾಬ್ದಾರಿಗಳನ್ನು ತೆಗೆದುಕೊಂಡು ಚುನಾವಣೆಯ ಫಲಿತಾಂಶದ ಹೊಣೆಯನ್ನೂ ನೀವೇ ಹೊತ್ತುಕೊಳ್ಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಸಿದ್ದರಾಮಯ್ಯ ಅವರು, ರಿಜ್ವಾನ್ ಅರ್ಷದ್ ಹೆಸರು ಅಂತಿಮಗೊಂಡಿಲ್ಲ. ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ನಿರ್ಧರಿಸುವ ವಿಚಾರವನ್ನು ಮುಸ್ಲಿಂ ಸಮುದಾಯದ ನಾಯಕರಿಗೆ ಬಿಡೋಣ. ನಾಯಕರೆಲ್ಲ ಸೇರಿ ಯಾರ ಹೆಸರು
ಸೂಚಿಸುತ್ತಾರೋ ಅವರಿಗೆ ಕೊಡೋಣ ಎಂದರು ಎನ್ನಲಾಗಿದೆ. ಆದರೆ, ಸಮಾಧಾನಗೊಳ್ಳದ ಉಭಯ ನಾಯಕರು ಅನ್ಯ ಕಾರ್ಯದ ನೆಪವೊಡ್ಡಿ ಸಭೆಯಿಂದ ಹೊರನಡೆದರು ಎನ್ನಲಾಗಿದೆ.