* ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಧೂಳೀಪಟ* ಉಪ ಚುನಾವಣೆಯಲ್ಲಿ ಬಿಜೆಪಿ ಸುನಾಮಿ: ಸಿಎಂ* 2023ರಲ್ಲೂ ಬಿಜೆಪಿಗೇ ಜಯ: ಬೊಮ್ಮಾಯಿ

ವಿಜಯಪುರ(ಅ.25): ಸಿಂದಗಿ(Sindhagi), ಹಾನಗಲ್‌(Hangal) ಉಪ ಚುನಾವಣೆಯಲ್ಲಿ ಬಿಜೆಪಿ ಸುನಾಮಿ ಶುರುವಾಗಿದೆ. ಈ ಸುನಾಮಿಯಲ್ಲಿ ಕಾಂಗ್ರೆಸ್‌(Congress), ಜೆಡಿಎಸ್‌(JDS) ಎರಡೂ ಪಕ್ಷಗಳು ಧೂಳೀಪಟವಾಗಲಿವೆ. ಈ ಉಪ ಚುನಾವಣೆ ಮಾತ್ರವಲ್ಲ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಪಕ್ಕಾ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾನುವಾರ ಸಿಂದಗಿ ಮತಕ್ಷೇತ್ರದಲ್ಲಿ ದಿನವಿಡೀ ಪ್ರಚಾರ ನಡೆಸಿದ ಅವರು ಪ್ರತಿಪಕ್ಷಗಳನ್ನು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ ಮುಖಂಡರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ(Siddaramaiah) ಹಾಗೂ ಕಾಂಗ್ರೆಸ್‌ನ(Congress) ಇತರೆ ನಾಯಕರು ಬಿಜೆಪಿ ವಿರುದ್ಧ ಹತಾಶೆಯಿಂದ ಟೀಕೆ ಮಾಡುತ್ತಿದ್ದಾರೆ. ಈ ಮೊದಲು ಕಾಂಗ್ರೆಸ್‌ ಸೋತ ನಂತರ ಇಂಥ ಟೀಕೆ ಮಾಡುತ್ತಿತ್ತು. ಈಗ ಸೋಲುವ ಮೊದಲೇ ಈ ರೀತಿಯ ಟೀಕೆಗೆ ಮುಂದಾಗಿದೆ. ಈ ಮೂಲಕ ಚುನಾವಣೆಗೂ ಮೊದಲೇ ಕಾಂಗ್ರೆಸ್‌ ಸೋಲೊಪ್ಪಿಕೊಂಡಂತಾಗಿದೆ ಎಂದರು.

ಡಿಕೆಶಿ, ಸಿದ್ದು ಕಾಂಗ್ರೆಸ್‌ ಬೇರೆ ಬೇರೆ:

ದೇಶದಲ್ಲಿ ಮಹಾತ್ಮ ಗಾಂಧಿ ಕಾಂಗ್ರೆಸ್‌, ರಾಹುಲ್‌ ಗಾಂಧಿ(Rahul Gandhi) ಕಾಂಗ್ರೆಸ್‌ ಹೇಗೆ ಬೇರೆ ಬೇರೆಯೋ, ಅದೇ ರೀತಿ ಕರ್ನಾಟಕದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕಾಂಗ್ರೆಸ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಬೇರೆ ಬೇರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಎತ್ತಿನಗಾಡಿ ಹಗ್ಗ ಸಿದ್ದರಾಮಯ್ಯ ಕೈಯಲ್ಲಿದ್ದರೆ, ಬಾರುಕೋಲು ಡಿ.ಕೆ.ಶಿವಕುಮಾರ್‌ ಕೈಯಲ್ಲಿದೆ. ಎತ್ತಿನಗಾಡಿಗೆ ಒಬ್ಬರು ಹೊಡೆಯುತ್ತಾರೆ, ಇನ್ನೊಬ್ಬರು ಎಳೆಯುತ್ತಾರೆ. ಹೀಗಾಗಿ, ಎತ್ತಿನಗಾಡಿ ಮುರಿದು ಬಿತ್ತು. ಇದೇ ರೀತಿ ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಪತನವಾಗಲಿದೆ ಹೇಳಿದರು.

ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್‌ ಅನ್ಯಾಯ ಮಾಡಿದೆ. ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್‌ ಮೊಸಳೆ ಕಣ್ಣೀರು ಹಾಕುತ್ತದೆ. ಅಲ್ಪಸಂಖ್ಯಾತರನ್ನು ವೋಟ್‌ ಬ್ಯಾಂಕ್‌ ಆಗಿ ಮಾತ್ರ ಕಾಂಗ್ರೆಸ್‌ ಪರಿಗಣಿಸುತ್ತದೆ. ಅಲ್ಪಸಂಖ್ಯಾತರ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಇದೇ ವೇಳೆ ಬೊಮ್ಮಾಯಿ ತಿಳಿಸಿದರು.