’15 ಕ್ಷೇತ್ರದಲ್ಲೂ ಬಿಜೆಪಿಗೆ ಗೆಲುವು, ವರದಿಯಲ್ಲಿ ಬಹಿರಂಗ'
15 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲುವ ವರದಿ ಇದೆ| ಬಿಎಸ್‌ವೈ, ಕಟೀಲ್ ನೇತೃತ್ವದಲ್ಲಿ ಉಪ ಚುನಾವಣೆ ಕ್ಷೇತ್ರಗಳ ಉಸ್ತುವಾರಿ ಸಭೆ
ಬೆಂಗಳೂರು[ನ.21]: ಉಪ ಚುನಾವಣೆ ಹಿನ್ನೆಲೆಯಲ್ಲಿ ಹದಿನೈದು ಕ್ಷೇತ್ರದ ಉಸ್ತುವಾರಿಗಳ ಸಭೆ ನಡೆದಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲುವ ಸ್ಥಿತಿಯಲ್ಲಿದೆ ಎಂಬ ವರದಿ ಇದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಉಪಚುನಾವಣೆಯ ಉಸ್ತುವಾರಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಬುಧವಾರ ಉಸ್ತುವಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹದಿನೈದು ಕ್ಷೇತ್ರಗಳ ಉಸ್ತುವಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳ ಸ್ಥಿತಿ ಬಗ್ಗೆ ವರದಿಯನ್ನು ನೀಡಲಾಗಿದ್ದು, ವಿಶ್ಲೇಷಣೆ ನಡೆದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಸ್ಥಿತಿಯಲ್ಲಿದ್ದಾರೆ ಎಂಬ ವರದಿ ಇದೆ ಎಂದರು.
ಇದರ ಆಧಾರದ ಮೇಲೆ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾದಿಯಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ ಹಾಗೂ ಶ್ರೀರಾಮಲು ಅವರು ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಪ್ರವಾಸ ವೇಳಾಪಟ್ಟಿಯನ್ನು ಶೀಘ್ರ ನೀಡಲಾಗುವುದು ಎಂದು ತಿಳಿಸಿದರು.
ಶರತ್ ಬಚ್ಚೇಗೌಡಗೆ ಗಡುವು
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಗುರುವಾರ ಮಧ್ಯಾಹ್ನದೊಳಗೆ ನಾಮಪತ್ರ ಹಿಂಪಡೆಯಲು ಪಕ್ಷ ಸೂಚನೆ ನೀಡಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಪಕ್ಷದ ಅಭ್ಯರ್ಥಿ ವಿರುದ್ಧ ಕಣಕ್ಕೆ ಇಳಿಯದಂತೆ ರಾಜ್ಯಾಧ್ಯಕ್ಷರು ಪಕ್ಷದ ಬಂಡಾಯ ಅಭ್ಯರ್ಥಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಸ್ಪರ್ಧೆ ಮಾಡಿದರೆ ಪಕ್ಷ ಶಿಸ್ತು ಕ್ರಮಕೈಗೊಳ್ಳಲಿದೆ. ಹೊಸಕೋಟೆ ಹೊರತುಪಡಿಸಿದರೆ ಉಪ ಚುನಾವಣೆ ನಡೆಯುವ ಯಾವುದೇ ಕ್ಷೇತ್ರಗಳಲ್ಲೂ ಗೊಂದಲಗಳಿಲ್ಲ. ಇದ್ದ ಗೊಂದಲಗಳು ನಿವಾರಣೆಯಾಗಿದೆ ಎಂದರು.
ನವೆಂಬರ್ 21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: