ಕರ್ನಾಟಕದ ಸಂಸದರಿಗೆ ಮತ್ತೆ ಬಿಜೆಪಿ ಟಿಕೆಟ್?: 75 ದಾಟಿದವರಿಗೆ ಇಲ್ಲ, ಗೆಲ್ಲುವವರಿಗೆ ಮಣೆ..!
ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಮುಂದಿರುವಾಗ ವಯಸ್ಸಿನ ಕಾರಣವೊಂದನ್ನೇ ನೆಪವಾಗಿರಿಸಿಕೊಂಡು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವುದು ಬೇಡ ಎಂಬ ಅನಿಸಿಕೆಯನ್ನು ವರಿಷ್ಠರಿಗೆ ರವಾನಿಸಲಾಗಿದೆ.
ಬೆಂಗಳೂರು(ಜ.27): 75 ವರ್ಷ ವಯಸ್ಸು ದಾಟಿದವರನ್ನು ಬಿಟ್ಟು ಮತ್ತೊಮ್ಮೆ ಗೆಲ್ಲುವ ಸಾಮರ್ಥ್ಯ ಹೊಂದಿರುವ ಹಾಗೂ ಯಾವುದೇ ಕಳಂಕ ಇಲ್ಲದ ಇನ್ನುಳಿದ ಹಿರಿಯ ಸಂಸದರಿಗೆ ಮಣೆ ಹಾಕುವುದು ಸೂಕ್ತ ಎಂಬ ಚಿಂತನೆ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ವ್ಯಕ್ತವಾಗುತ್ತಿದೆ. ಅಂದರೆ, 70 ಮತ್ತು 75 ವರ್ಷದೊಳಗಿನ ಹಲವು ಸಂಸದರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ನಿಲುವಿನಿಂದ ಹಿಂದೆ ಸರಿದು ಗೆಲ್ಲುವ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯವನ್ನು ರಾಜ್ಯ ಬಿಜೆಪಿ ನಾಯಕರು ಹೊಂದಿದ್ದಾರೆ. ಈಗಾಗಲೇ ಈ ಅಭಿಪ್ರಾಯವನ್ನು ಪಕ್ಷದ ಹೈಕಮಾಂಡ್‌ಗೆ ತಲುಪಿಸಲಾಗಿದ್ದು, ವರಿಷ್ಠರು ಪರಿಶೀಲಿಸುವುದಾಗಿ ಭರವಸೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
75 ದಾಟಿದವರು ಯಾರು?:
ಎಪ್ಪತ್ತೈದು ವರ್ಷ ದಾಟಿದ ಸಂಸದರ ಪೈಕಿ ಚಾಮರಾಜನಗರ ಕ್ಷೇತ್ರದ ಶ್ರೀನಿವಾಸ್ ಪ್ರಸಾದ್ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿ.ಎನ್.ಬಚ್ಚೇಗೌಡ ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅದೇ ರೀತಿ ತುಮಕೂರು ಕ್ಷೇತ್ರದ ಸಂಸದ ಜಿ.ಎಸ್.ಬಸವರಾಜು ಸ್ಪರ್ಧಿಸುವುದಿಲ್ಲ ಎಂಬ ಮಾತು ಹೇಳಿದ್ದಾರೆ. ಅವರೂ ಇನ್ನುಳಿದಂತೆ 70 ವರ್ಷ ವಯಸ್ಸು ದಾಟಿರುವ ವಿಜಯಪುರದ ರಮೇಶ್ ಜಿಗಜಿಣಗಿ, ದಾವಣಗೆರೆಯ ಜಿ.ಎಂ.ಸಿದ್ದೇಶ್ವರ, ಬಳ್ಳಾರಿಯ ದೇವೇಂದ್ರಪ್ಪ, ಕೊಪ್ಪಳದ ಕರಡಿ ಸಂಗಣ್ಣ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್ ಅವರ ಪೈಕಿ ಈಗಲೂ ವರ್ಚಸ್ಸು ಹಾಗೂ ಗೆಲ್ಲುವ ಸಾಮರ್ಥ ಹೊಂದಿರುವವರಿಗೆ ಮತ್ತೊಮ್ಮೆ ಟಿಕೆಟ್ ನೀಡುವುದು ಸೂಕ್ತ. ಇದರಿಂದ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗಳಿಸಲು ಸುಲಭವಾಗುತ್ತದೆ ಎಂಬ ಚರ್ಚೆ ಪಕ್ಷದಲ್ಲಿ ನಡೆದಿದೆ ಎನ್ನಲಾಗಿದೆ.
ಬಿಜೆಪಿ ಸಂಸದರನ್ನ ಮತ್ತೊಮ್ಮೆ ಗೆಲ್ಲಿಸುವಂತೆ ಕಾಂಗ್ರೆಸ್ ಶಾಸಕ ಕರೆ! ಬಿವೈ ರಾಘವೇಂದ್ರ ಪರ ಶಾಮನೂರು ಬ್ಯಾಟಿಂಗ್!
ಇದಕ್ಕೆ ಕಾರಣವೇನು?:
ಕೇವಲ ವಯಸ್ಸಿನ ಕಾರಣದಿಂದ ಗೆಲ್ಲುವ ಸಂಸದರಿಗೆ ಟಿಕೆಟ್ ನಿರಾಕರಿಸಿದರೂ ಆ ಕ್ಷೇತ್ರದಲ್ಲಿ ಪರ್ಯಾಯ ಸಮರ್ಥ ಅಭ್ಯರ್ಥಿ ಸಿಗದೇ ಇದ್ದಲ್ಲಿ ಕಷ್ಟವಾಗುತ್ತದೆ. ಅದರ ಬದಲು ಹಾಲಿ ಸಂಸದರನ್ನು ಗೆಲ್ಲುವ ಮಾನದಂಡ ಆಧರಿಸಿ ಪರಿಗಣಿಸಬೇಕು. ಅವರು ಆರೋಗ್ಯವಾಗಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂಥವರಾಗಿದ್ದರೆ ಟಿಕೆಟ್ ನಿರಾಕರಿಸುವುದರಲ್ಲಿ ಅರ್ಥವಿಲ್ಲ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಮುಂದಿರುವಾಗ ವಯಸ್ಸಿನ ಕಾರಣವೊಂದನ್ನೇ ನೆಪವಾಗಿರಿಸಿಕೊಂಡು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವುದು ಬೇಡ ಎಂಬ ಅನಿಸಿಕೆಯನ್ನು ವರಿಷ್ಠರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.