ಐಷಾರಾಮಿ ವಿಮಾನದಲ್ಲಿ ಸಿಎಂ ಸೇರಿ ಹಲವರ ರಾಯಲ್ ಜರ್ನಿ, ಜಮೀರ್ ಗೆ ಕಂಟಕವಾಯ್ತು ವಿಡಿಯೋ, ಬಿಜೆಪಿ ವ್ಯಂಗ್ಯ
ರಾಯಲ್ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣಿಸಿದ್ದು, ರಾಜ್ಯದಲ್ಲಿ ಬರ ಬಂದು ಜನತೆ ಸಂಕಷ್ಟದಲ್ಲಿದ್ದರೆ ಮಜಾವಾದಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಆಪ್ತ ಜಮೀರ್ ಅಹ್ಮದ್ ಖಾನ್ ಆಡಂಬರಕ್ಕೇನು ಕಡಿಮೆ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಬೆಂಗಳೂರು (ಡಿ.22): ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರು ಮರಳಿ ಬೆಂಗಳೂರು ದೆಹಲಿಯಿಂದ ವಾಪಸಾಗಿದ್ದಾರೆ. ದೆಹಲಿಯಿಂದ ವಾಪಸ್ ಬರುವಾಗ ಕರ್ನಾಟಕ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಜೊತೆಗೆ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.
ಈ ಪ್ರಯಾಣಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ, ಪಕ್ಷದ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಬರ ಬಂದು ಜನತೆ ಸಂಕಷ್ಟದಲ್ಲಿದ್ದರೆ ಮಜಾವಾದಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಆಪ್ತ ಜಮೀರ್ ಅಹ್ಮದ್ ಖಾನ್ ಆಡಂಬರಕ್ಕೇನು ಕಡಿಮೆ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.ಮಾತ್ರವಲ್ಲ ಜನಪ್ರತಿನಿಧಿಗಳ ಈ ವಿಚಾರಕ್ಕೆ ಕೂಡ ಸಾರ್ವಜನಿಕರು ತರಹೇವಾರಿ ಕಮಂಟ್ ಮಾಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬಿವೈ ವಿಜಯೇಂದ್ರ ಅವರು, ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ, ಜನರ ದುಡ್ಡು ಆಕಾಶದಲ್ಲಿ ಜಾತ್ರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ, ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂತಹ ಗಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು ಪ್ರದರ್ಶಿಸಿಕೊಳ್ಳುತ್ತಿರುವ ಸಚಿವ ಜಮೀರ್ ಅವರ ಜೊತೆ ಜನರ ತೆರಿಗೆ ಹಣ ವ್ಯಯಿಸಿ ಐಶಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವ ಮುಖ್ಯಮಂತ್ರಿ
ಸಿದ್ದರಾಮಯ್ಯನವರು ಮೋಜಿನ ಭಾಗವಾಗಿರುವುದು ಈ ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತಿನ್ನೇನು ಅಲ್ಲ.
ಮುಖ್ಯಮಂತ್ರಿ ಮತ್ತವರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನಗಳನ್ನು ನೋಡಿದರೆ "ರೋಮ್ ದೊರೆ ನೀರೋ" ಉಲ್ಲೇಖಿಸುವ ಬದಲು “ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ ದೊರೆ ಆಕಾಶದಲ್ಲಿ ಓಲಾಡುತ್ತ ತೇಲುತ್ತಿದ್ದಾರೆ….” ಎಂದು ವರ್ಣಿಸಬಹುದಾಗಿದೆ ಎಂದಿದ್ದಾರೆ.
ಬಿಜೆಪಿ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪೈಲ್ಸ್ ಕರ್ನಾಟಕ ಎಂದು ಹ್ಯಾಶ್ ಟ್ಯಾಗ್ ಬಳಸಿ,
ರಾಜ್ಯದಲ್ಲಿ ತೀವ್ರ ಬರ ಬಂದು ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಮುಗಿದರೂ ಒಂದೇ ಒಂದು ಗುಂಡಿ ಮುಚ್ಚುವ ಕಾಮಗಾರಿ ಕೂಡ ನಡೆದಿಲ್ಲ. ಆದರೆ, ಮಜವಾದಿ ಸಿದ್ದರಾಮಯ್ಯ ಮತ್ತು ಅವರ ಅತ್ಯಾಪ್ತ ಜಮೀರ್ ಅವರ ಆಡಂಬರಕ್ಕೇನು ಕಡಿಮೆ ಇಲ್ಲ. ಜನರ ತೆರಿಗೆ ದುಡ್ಡಿನಲ್ಲಿ ಪ್ರೈವೇಟ್ ಜೆಟ್ ಒಳಗೆ ಮೋಜು ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣುಕಿಸುತ್ತಿರುವುದಕ್ಕೆ ಈ ಅವತಾರವೇ ಸಾಕ್ಷಿ. ಎಂದಿದೆ.