ಬ್ರಿಟಿಷರಿಗಿಂತ ದೇಶದಲ್ಲಿ ಕಾಂಗ್ರೆಸ್ ದುಪ್ಪಟ್ಟು ದಬ್ಬಾಳಿಕೆ: ಕಟೀಲ್
* ಮಂಗಳೂರಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನದ 45ನೇ ವರ್ಷಾಚರಣೆ
* ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಹಿರಿಯರನ್ನು ಎಂದೂ ಮರೆಯುವಂತಿಲ್ಲ
* ನ್ಯಾಷನಲ್ ಹೆರಾಲ್ಡ್ ಪ್ರಕರಣದಿಂದಾಗಿ ರಾಹುಲ್ ಮತ್ತು ಸೋನಿಯಾ ಸ್ಥಿತಿ ಅಯೋಮಯ
ಮಂಗಳೂರು(ಜೂ.26): ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಇಂದಿರಾ ಗಾಂಧಿಯ ಸರ್ವಾಧಿಕಾರಿ ಧೋರಣೆಯ ತುರ್ತು ಪರಿಸ್ಥಿತಿ ವಿರುದ್ಧದ ಮಹತ್ವದ ಹೋರಾಟವಾಗಿತ್ತು. ಬ್ರಿಟಿಷರ ದಬ್ಬಾಳಿಕೆಗಿಂತ ಎರಡು ಪಟ್ಟು ದಬ್ಬಾಳಿಕೆ ದೇಶವನ್ನು ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್‌ನಿಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ದ.ಕ. ಜಿಲ್ಲಾ ಬಿಜೆಪಿ ಶನಿವಾರ ಏರ್ಪಡಿಸಿದ ‘ತುರ್ತು ಪರಿಸ್ಥಿತಿಯ ಕರಾಳ ದಿನ-45ನೇ ವರ್ಷ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಎರಡನೇ ಬೃಹತ್ ಹೋರಾಟ ನಡೆದಿದ್ದರೆ ಅದು ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟ. ಅದು ಕತ್ತಲೆಯ ಯುಗ ಅಲ್ಲ ಹೋರಾಟದ ಯುಗ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಹಿರಿಯರನ್ನು ಎಂದೂ ಮರೆಯುವಂತಿಲ್ಲ. ಹಿರಿಯರ ತ್ಯಾಗ ಬಲಿದಾನ ದೊಡ್ಡದು. ಅತ್ಯಂತ ಕ್ರೂರ ರೀತಿಯ ಶಿಕ್ಷೆಯನ್ನು ಅನುಭವಿಸಿದ್ದ ಹೋರಾಟಗಾರರು ದೇಶಕ್ಕಾಗಿ ಪ್ರಾಣ ತೆರಲೂ ಸಿದ್ಧರಾಗಿದ್ದರು. ದ.ಕ. ಜಿಲ್ಲೆಯಿಂದಲೂ ಸಾವಿರಾರು ಮಂದಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಹಳ್ಳಿ ಹಳ್ಳಿಗಳಲ್ಲಿ ಸಂಘಟಿತವಾಗಿ ನಡೆದ ಈ ಹೋರಾಟದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದರು ಎಂದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮೋದಿ ಚಿಂತನೆ: ಕತ್ತಿ..!
ತುರ್ತು ಪರಿಸ್ಥಿತಿ ಹೇರುವ ಮೂಲಕ ಅಂದಿನ ಇಂದಿರಾ ಗಾಂಧಿ ಸರ್ಕಾರ 21 ತಿಂಗಳ ಕಾಲ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿತ್ತು. ಹಿರಿಯರ ತ್ಯಾಗ ಬಲಿದಾನ ಮರೆತರೆ ಕಾಂಗ್ರೆಸ್ ಸ್ಥಿತಿಯಂತೆಯೇ ನಮ್ಮ ಸ್ಥಿತಿಯೂ ಆಗಲಿದೆ ಎಂಬ ಅರಿವು ನಮ್ಮಲ್ಲಿರಬೇಕು ಎಂದು ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕರ್ತರನ್ನು ಎಚ್ಚರಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಿಂದಾಗಿ ರಾಹುಲ್ ಮತ್ತು ಸೋನಿಯಾ ಗಾಂಧಿಯವರ ಸ್ಥಿತಿ ಅಯೋಮಯವಾಗಿದೆ. ತಾವು ತಪ್ಪಿತಸ್ಥರಲ್ಲ ಎಂದು ವಾದಿಸುವ ಅವರಿಗೆ ವಿಚಾರಣೆ ಎದುರಿಸಲು ಭಯ ಯಾಕೆ? ಹಿಂದಿನ ಸರ್ವಾಧಿಕಾರಿ ದೋರಣೆಯಿಂದ ಈಗಿನ ಕಾಂಗ್ರೆಸ್ ಮುಖಂಡರು ಕೂಡ ಹೊರಬಂದಿಲ್ಲ ಎಂಬುದನ್ನು ಇದು ಸಾಂಕೇತಿಸುತ್ತದೆ . ಈ ಹಿಂದೆ ಗುಜರಾತ್ ಸಿಎಂ ಆಗಿದ್ದಾಗ ನರೇಂದ್ರ ಮೋದಿ, ಬಿಜೆಪಿ ರಾಷ್ಟಾ್ರಧ್ಯಕ್ಷರಾಗಿದ್ದ ಅಮಿತ್ ಶಾ ಅವರು ವಿಚಾರಣೆ, ಬಂಧನಕ್ಕೆ ಒಳಗಾಗಿದ್ದರು. ಅವರೆಲ್ಲ ತಮ್ಮದೇನು ತಪ್ಪಿಲ್ಲ ಎಂದು ವಿಶ್ವಾಸದಿಂದ ವಿಚಾರಣೆ ಎದುರಿಸಿ ಹೊರಬಂದಿದ್ದಾರೆ. ಆಗ ಬಿಜೆಪಿ ಪಕ್ಷ ಈಗಿನ ಕಾಂಗ್ರೆಸಿಗರಂತೆ ಹಾದಿಬೀದಿಯಲ್ಲಿ ಪ್ರತಿಭಟನೆ ನಡೆಸಿಲ್ಲ, ಸಾರ್ವಜನಿಕ ಸ್ವತ್ತುಗಳನ್ನು ಹಾನಿ ಮಾಡಿಲ್ಲ. ಆದರೆ ಕಾಂಗ್ರೆಸ್‌ಗೆ ಕಾನೂನಿಗೆ ಮಹತ್ವವೇ ಗೊತ್ತಿಲ್ಲ, ಕಾನೂನಿಗೆ ಗೌರವವನ್ನೂ ನೀಡುತ್ತಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ ಮತ್ತು ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪ್ರಭಾ ಕಾಮತ್ ಹುಂಡಿ ಅವರು ತುರ್ತು ಪರಿಸ್ಥಿತಿಯ ಹೋರಾಟದಲ್ಲಿ ಪಾಲ್ಗೊಂಡ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡರು.
ದ.ಕ.ಜಿಲ್ಲೆಯಲ್ಲೂ ಬೃಹತ್ ಮಟ್ಟದಲ್ಲಿ ಹೋರಾಟ ಆಗಿತ್ತು. ತುರ್ತು ಪರಿಸ್ಥಿತಿಯ ಸಂದರ್ಭ ಹೋರಾಟ ಮಾಡಿದ ಹಲವಾರು ಮಂದಿ ಹಿರಿಯರು ಇಂದು ಮೂಲೆ ಗುಂಪಾಗಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕಿದೆ. ಅಲ್ಲದೆ ಅವರಿಗೆ ಸರ್ಕಾರದಿಂದ ಪೆನ್ಷನ್ ದೊರಕಿಸುವಲ್ಲಿಯೂ ಮನಸ್ಸು ಮಾಡಬೇಕು. ಸಂಸದರೂ ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಬೇಕು ಎಂದು ರುಕ್ಮಯ ಪೂಜಾರಿ ಆಗ್ರಹಿಸಿದರು.