ಕಾಂಗ್ರೆಸ್‌ನದು ಭಾರತ್ ಬಿಟ್ಟು ಓಡೋ ಯಾತ್ರೆ: ಕಟೀಲ್
ಒಬ್ಬೊಬ್ಬರಾಗಿ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದಾರೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬೆಂಗಳೂರು(ಅ.06): ಕಾಂಗ್ರೆಸ್ ಪಕ್ಷದ್ದು ಭಾರತ ಜೋಡೋ ಯಾತ್ರೆಯಲ್ಲ, ಅದು ಭಾರತ ಬಿಟ್ಟು ಓಡೋ ಯಾತ್ರೆಯಾಗಿ ಪರಿವರ್ತನೆ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವದ ವಿರುದ್ಧ ಕೋಪದಿಂದ ಇರುವ ನಾಯಕರ ಜತೆಗೂಡಿ ಜಿ-23 ಗುಂಪು ರಚಿಸಿದ್ದರು. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಅದು ಚೇತರಿಕೆ ಕಾಣಲಾರದು ಎಂಬುದನ್ನು ಮನಗಂಡ ಅನೇಕ ನಾಯಕರು ಒಬ್ಬೊಬ್ಬರಾಗಿ ಈಗಾಗಲೇ ಆ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಮೂಲಕ ಗುರುತಿಸಿಕೊಂಡ ಕಾಂಗ್ರೆಸ್ ಪಕ್ಷ ಮುಂದಿನ ದಿನದಲ್ಲಿ ಪಕ್ಷದೊಳಗಿನ ಭಿನ್ನಮತ ಮತ್ತು ಸಮರ್ಥ ನಾಯಕತ್ವದ ಕೊರತೆಯಿಂದ ನೆಲಕಚ್ಚಲಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ರಮೇಶ ಜಾರಕಿಹೊಳಿ ಮತ್ತೆ ಮಂತ್ರಿಯಾಗ್ತಾರೆ: ನಳಿನ್ ಕುಮಾರ ಕಟೀಲ್
ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಪಕ್ಷವಾಗಿದ್ದು, ಹಿಂದೂ ವಿರೋಧಿ, ಜಾತಿ-ಜಾತಿಗಳ ನಡುವೆ, ಮತೀಯ ಸಂಘರ್ಷ ಹೆಚ್ಚಿಸುವ ಪಕ್ಷ. ಆದರೆ, ಬಿಜೆಪಿ ಸದಾ ಜನಹಿತ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವ ಪಕ್ಷ ಎಂಬುದು ಜನತೆಗೆ ಅರಿವಾಗಿದೆ. ಕಾಂಗ್ರೆಸ್‌ದ ಆರು ದಶಕಗಳ ಭ್ರಷ್ಟಾಚಾರ, ಸಾಲು ಸಾಲು ಹಗರಣಗಳನ್ನು ಗಮನಿಸಿದ ಜನತೆ ಕಾಂಗೆಸ್ ಪಕ್ಷವನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ತೀರ್ಮಾನ ಕೈಗೊಂಡಿದ್ದಾರೆ ಎಂದ ಅವರು, ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡುವ ವೇಳೆಯಲ್ಲೇ ರಾಜ್ಯದ ಮುಖಂಡರು ಎರಡು ತಂಡಗಳಾಗಿ ಸ್ವಾಗತಿಸಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಹಗಲ ಕನಸು ಕಾಣುವ ಸಿದ್ದರಾಮಯ್ಯ ಒಂದೆಡೆ ಸ್ವಾಗತ ಕೋರಿದರೆ, ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಮತ್ತು ಹಗಲಿರುಳು ಮುಖ್ಯಮಂತ್ರಿ ಕುರ್ಚಿಯ ತಿರುಕನ ಕನಸು ಕಾಣುವ ಡಿ.ಕೆ.ಶಿವಕುಮಾರ್ ಮತ್ತೊಂದೆಡೆ ರಾಹುಲ್‌ಗಾಂಧಿ ಅವರನ್ನು ಸ್ವಾಗತಿಸಿದ್ದಾರೆ. ಇದು ಕಾಂಗ್ರೆಸ್ ಭಿನ್ನಮತಕ್ಕೆ ಸ್ಪಷ್ಟನಿದರ್ಶನ ಎಂದು ಹರಿಹಾಯ್ದಿದ್ದಾರೆ.