ಪ್ರಧಾನಿ ಮೋದಿ ಅವರು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಸಿಎಂ ಆಹ್ವಾನಿಸಿಲ್ಲ ಎಂಬ ಜೆಡಿಎಸ್‌ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಚುನಾವಣೆ ಸಮೀಪಿಸುತ್ತಿರುವ ಕಾರಣ ಜೆಡಿಎಸ್‌ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ಮಾಡುತ್ತಿದೆ ಎಂದು ಟೀಕಿಸಿದರು.

ಯಾದಗಿರಿ (ನ.14): ಪ್ರಧಾನಿ ಮೋದಿ ಅವರು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಸಿಎಂ ಆಹ್ವಾನಿಸಿಲ್ಲ ಎಂಬ ಜೆಡಿಎಸ್‌ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ಚುನಾವಣೆ ಸಮೀಪಿಸುತ್ತಿರುವ ಕಾರಣ ಜೆಡಿಎಸ್‌ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ಮಾಡುತ್ತಿದೆ ಎಂದು ಟೀಕಿಸಿದರು.

ಭಾನುವಾರ ಇಲ್ಲಿನ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಖುದ್ದಾಗಿ ಮಾಜಿ ಪ್ರಧಾನಿ ದೇವೇಗೌಡರನ್ನು ಆಹ್ವಾನಿಸಿದ್ದಾರೆ. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ದೇವೇಗೌಡರಿಗೆ ಕರೆದಿಲ್ಲ ಎಂದು ಅರೋಪಿಸುವ ಮೂಲಕ ಪ್ರಚಾರ ಗಿಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಟಾಂಗ್‌ ನೀಡಿದರು.

ಮೀಸಲು ಹೆಚ್ಚಿಸಿ ವಿರೋಧಿಗಳಿಗೆ ಬಿಜೆಪಿ ಉತ್ತರ: ಎನ್‌.ರವಿಕುಮಾರ

ರಾಜ್ಯದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಮೀಸಲಾತಿಯನ್ನು ನಮ್ಮ ಸರ್ಕಾರ ಹೆಚ್ಚಿಸಿ ಬದ್ಧತೆ ಮೆರೆದಿದೆ. ದೇಶ ಮೊದಲು, ಪಕ್ಷ ನಂತರ ಆಮೇಲೆ ಕಾರ್ಯಕರ್ತ ಎಂಬ ಸಿದ್ಧಾಂತ ಬಿಜೆಪಿಯದ್ದು. ನಾವು ಮೊದಲು ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು. ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೂ ಕೇಂದ್ರ ಸರ್ಕಾರ ಶೇ.10 ರಷ್ಟುಮೀಸಲಾತಿ ಕಲ್ಪಿಸುವ ಮೂಲಕ ಎಲ್ಲ ಸಮುದಾಯವನ್ನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡುತ್ತಿದೆ. ಗ್ರಾಮೀಣ ಭಾಗದಲ್ಲಿನ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು, ರಸ್ತೆ ಹಾಗೂ ಮೂಲಸೌಲಭ್ಯ ಒದಗಿಸುವ ಕೆಲಸ ನಮ್ಮ ಪ್ರಧಾನಿಗಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಿಯಾಂಕ್‌ ವಿರುದ್ಧ ರವಿಕುಮಾರ್‌ ವಾಗ್ದಾಳಿ: ಬಿಜೆಪಿಯವರು ಮುಂದಿನ ದಿನಗಳಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಕಾಂಗ್ರೆಸ್‌ ಮುಖಂಡ ಮತ್ತು ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆನ್ನಲಾದ ಬಗ್ಗೆ ಮಾತನಾಡಿದ ರವಿಕುಮಾರ್‌, ಖರ್ಗೆ ಅವರ ಈ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುಂದುಂಟು ಮಾಡುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ನಂತರ ಕಳೆದ ಆರು ದಶಕಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ ಪಕ್ಷವು ಸಂವಿಧಾನವನ್ನು ಕಡೆಗಣಿಸಿ, ಗೂಂಡಾಗಿರಿ ಮೂಲಕ ಜನರನ್ನು ಹೆದರಿಸಿ ಆಡಳಿತ ನಡೆಸಿತ್ತು. 

ಆದರೆ, ಬಿಜೆಪಿ ಸೈದ್ಧಾಂತಿಕ ಹೋರಾಟ, ಬಾಬಾಸಾಹೇಬರ ಸಂವಿಧಾನಕ್ಕೆ ಗರಿಷ್ಠ ಗೌರವ ಕೊಡುತ್ತ ರಾಜಕಾರಣ ಮಾಡುವುದರಲ್ಲಿ ನಂಬಿಕೆ ಇಟ್ಟುಕೊಂಡಿದೆ ಎಂದರು. ಕೇವಲ ಬೆದರಿಕೆ, ಹತ್ಯೆ ಮತ್ತು ಹಿಂದೂ ವಿರೋಧಿ​ ಮತ್ತು ಅಲ್ಪಸಂಖ್ಯಾತರ ಪರ ತುಷ್ಟೀಕರಣ ನೀತಿ ಕಾಂಗ್ರೆಸ್‌ ಪಕ್ಷದ್ದು. ಇದು ದೀರ್ಘ ಕಾಲ ಉಳಿಯುವುದಿಲ್ಲ ಎಂಬುದನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಜನತೆ ತೋರಿಸಿದ್ದಾರೆ. ನಾವು ಶಾಂತಿ- ಸುವ್ಯವಸ್ಥೆ ಕಾಪಾಡಲು ಬದ್ಧತೆಯನ್ನು ಹೊಂದಿದ್ದೇವೆ. ಅದರನುಗುಣವಾಗಿಯೇ ಕಾರ್ಯ ನಿರ್ವಹಿಸುತ್ತೇವೆ ಎಂದ ರವಿಕುಮಾರ, ಪ್ರಿಯಾಂಕ್‌ ಖರ್ಗೆ ಅವರ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಾವರ್ಕರ್‌ರಷ್ಟು ದೇಶಭಕ್ತಿ ರಾಗಾಗಿಲ್ಲ: ವಿಧಾನಪರಿಷತ್‌ ಸದಸ್ಯ ರವಿಕುಮಾರ್

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಭೂಪಾಲರಡ್ಡಿ ನಾಯ್ಕಲ್‌, ಶಾಸಕ ವೆಂಕಟರಡ್ಡಿ ಮುದ್ನಾಳ್‌, ಮಾಜಿ ಶಾಸಕರುಗಳಾದ ಡಾ.ವೀರಬಸವಂತರಡ್ಡಿ ಮುದ್ನಾಳ್‌, ಗುರು ಪಾಟೀಲ್‌ ಶಿರವಾಳ, ಬಿಜೆಪಿ ಜಿಲ್ಲಾ ಪ್ರಭಾರಿ ಅಮರನಾಥ್‌ ಪಾಟೀಲ್‌, ಚಂದ್ರಶೇಖರಗೌಡ ಮಾಗನೂರ, ನಾಗರತ್ನ ಕುಪ್ಪಿ, ಅಲೆಮಾರಿ ನಿಗಮ ಮಂಡಳಿ ಅದ್ಯಕ್ಷ ದೇವೇಂದ್ರನಾಥ ನಾದ್‌, ಅಮೀನರಡ್ಡಿ ಯಾಳಗಿ. ಡಿಸಿಸಿ ಬ್ಯಾಂಕ್‌ ಉಪಾದ್ಯಕ್ಷ ಸುರೇಶ ಸಜ್ಜನ್‌, ಎಚ್‌.ಸಿ.ಪಾಟೀಲ್‌, ವೆಂಕಟರಡ್ಡಿ ಅಬ್ಬೆತುಮಕೂರು, ಗುರು ಕಾಮಾ ಮುಂತಾದವರು ಉಪಸ್ಥಿತರಿದ್ದರು.