ಬಳ್ಳಾರಿಯಲ್ಲಿ ಇಂದು ಬಿಜೆಪಿ ಎಸ್‌ಟಿ ರ‍್ಯಾಲಿ, ಮೀಸಲಾತಿ ಹೆಚ್ಚಳ ಬಳಿಕ ಮೊದಲ ಸಮಾವೇಶ
10 ಲಕ್ಷ ಜನರ ಸೇರಿಸಿ ಬಲ ಪ್ರದರ್ಶನದ ಗುರಿ, 20 ಕಡೆ: ವಿವಿಧೆಡೆ ಪಾರ್ಕಿಂಗ್‌ಗೆ ಜಾಗ. 500 ಎಕರೆ ಜಾಗ ಮೀಸಲು
ಬಳ್ಳಾರಿ(ನ.19): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ, ಬಳ್ಳಾರಿಯಲ್ಲಿ ಇಂದು(ಭಾನುವಾರ) ರಾಜ್ಯ ಪರಿಶಿಷ್ಟಪಂಗಡಗಳ ಬೃಹತ್ ನವಶಕ್ತಿ ಸಮಾವೇಶ ಹಮ್ಮಿಕೊಂಡಿದೆ. ಎಸ್ಟಿಮೀಸಲಾತಿ ಹೆಚ್ಚಳದ ನಂತರ ನಡೆಯುತ್ತಿರುವ ಬಿಜೆಪಿಯ ಮೊದಲ ಬೃಹತ್ ಸಮಾವೇಶ ಇದಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದೆ. ಈ ಸಮಾವೇಶವನ್ನು ಪಕ್ಷದ ಶಕ್ತಿ ಪ್ರದರ್ಶನ ಎಂದೇ ಬಿಂಬಿಸಲಾಗಿದ್ದು, ಇದರ ಯಶಸ್ಸಿಗೆ ಕಮಲ ಪಡೆ ಟೊಂಕ ಕಟ್ಟಿನಿಂತಿದೆ. ಪರಿಶಿಷ್ಟಪಂಗಡಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಪ್ರಚುರಗೊಳಿಸುವುದು ಸಮಾವೇಶದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.
ಬಳ್ಳಾರಿಯಲ್ಲಿ ಜರುಗಿದ ಕಾಂಗ್ರೆಸ್‌ನ ಯುವ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ ಜೋಡೋ ಯಾತ್ರೆಯ ಸಮಾವೇಶಕ್ಕಿಂತಲೂ ಅದ್ಧೂರಿಯಾಗಿ ಎಸ್ಟಿಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿದೆ.
ಕ್ಷೇತ್ರ ಸಿಗದೆ ಸಿದ್ದರಾಮಯ್ಯ ಅಲೆಮಾರಿಯಾಗಿದ್ದಾರೆ: ಶ್ರೀರಾಮುಲು
100 ಎಕರೆ ಜಾಗದಲ್ಲಿ ಬೃಹತ್ ವೇದಿಕೆ:
ರಾಜ್ಯದ ವಿವಿಧೆಡೆಯಿಂದ ಸುಮಾರು 10 ಲಕ್ಷ ಜನ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆಯಿದೆ. ನಗರದ ಹೊರವಲಯದ ಜಿ-ಸ್ಕಾ$್ವ್ಯರ್ ಲೇಔಟ್ ಬಳಿ 100 ಎಕರೆ ಪ್ರದೇಶದಲ್ಲಿ ಸಮಾವೇಶದ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, 25 ಎಕರೆ ಜಾಗದಲ್ಲಿ ಸುಮಾರು 4 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದ ಎಡ ಭಾಗದಲ್ಲಿ 380 ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ. ಸಮಾವೇಶ ನಡೆಯುವ ಆಸುಪಾಸಿನ 20 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೆಳಗಲ್ ಬೈಪಾಸ್ ರಸ್ತೆ ಬಳಿ 500 ಎಕರೆ ಜಾಗವನ್ನು ಪಾರ್ಕಿಂಗ್‌ಗೆಂದೇ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.
ಸಮಾವೇಶದ ಸಿದ್ಧತೆ ಹಿನ್ನೆಲೆಯಲ್ಲಿ 41 ಉಪ ಸಮಿತಿಗಳನ್ನು ರಚಿಸಲಾಗಿದೆ. ಕಾರ್ಯಕರ್ತರ ಸಂಪರ್ಕಕ್ಕಾಗಿ ನಗರದಲ್ಲಿ ಕಾಲ್‌ಸೆಂಟರ್ ತೆರೆಯಲಾಗಿದೆ. 2 ಸಾವಿರ ಜನರ ಕಲಾ ತಂಡವನ್ನು ರಾಜ್ಯದ ವಿವಿಧೆಡೆಗಳಿಂದ ಕರೆಸಲಾಗುತ್ತಿದೆ. 3 ಸಾವಿರ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಮುಂಜಾನೆ 10 ಗಂಟೆಗೆ ಸಮಾವೇಶ ಆರಂಭವಾಗಲಿದೆ.
ಸಮುದಾಯ ಭವನ, ಕಲ್ಯಾಣ ಮಂಟಪಗಳು ಭರ್ತಿ:
ದೂರದ ಊರುಗಳಿಂದ ಬರುವ ಕಾರ್ಯಕರ್ತರ ವಾಸ್ತವ್ಯಕ್ಕಾಗಿ ದಾರಿಯುದ್ದಕ್ಕೂ ಅಲ್ಲಲ್ಲಿ ಸಮುದಾಯ ಭವನ ಹಾಗೂ ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸಲಾಗಿದೆ. ನಗರದ ಲಾಡ್ಜ್‌ಗಳಲ್ಲಿ ಪಕ್ಷದ ಪ್ರಮುಖರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿಯಿಂದ ಪ್ರಮುಖ ರಸ್ತೆಗಳ 10 ಕಿ.ಮೀ. ವ್ಯಾಪ್ತಿಯಲ್ಲಿ ಪಕ್ಷದ ಧ್ವಜಗಳು ಹಾಗೂ ಬಂಟಿಂಗ್ಸ್‌ಗಳನ್ನು ಕಟ್ಟಲಾಗಿದೆ. ಬಳ್ಳಾರಿಯಿಂದ ಸುಮಾರು 30 ಕಿ.ಮೀ.ವರೆಗೆ ಅಲ್ಲಲ್ಲಿ ಸಮಾವೇಶದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಬಳ್ಳಾರಿ: ಕಾಂಗ್ರೆಸ್ ಸೇರ್ತಾರಾ ಮಾಜಿ ಸಚಿವ ಜನಾರ್ದನ ರೆಡ್ಡಿ?
ರಾಷ್ಟ್ರೀಯ ನಾಯಕರು ಭಾಗಿ:
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬುಡಕಟ್ಟು ಸಮುದಾಯದ ಕೇಂದ್ರ ಸಚಿವ ಅರ್ಜುನ ಮುಂಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಹುಗ್ಗಿ, ಪಲಾವ್, ಮೊಸರನ್ನ:
ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಹುಗ್ಗಿ, ಪಲಾವ್, ಮೊಸರನ್ನ ಹಾಗೂ ಅರ್ಧ ಲೀಟರ್ ನೀರಿನ ಬಾಟಲ್ ಕೊಡಲು ನಿರ್ಧರಿಸಲಾಗಿದೆ. ಊಟಕ್ಕೆ ನೂಕು ನುಗ್ಗಲು ಆಗದಂತೆ ಸಮಾವೇಶದ ಬಳಿ 380 ಕೌಂಟರ್ ತೆರೆಯಲಾಗಿದೆ. ಅಲ್ಲದೆ, ಅಲ್ಲಲ್ಲಿ ಊಟದ ಕೌಂಟರ್‌ಗಳನ್ನು ತೆರೆದು, ಜನರಿಗೆ ಊಟ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.