‘ಭ್ರಷ್ಟ ಲಿಂಗಾಯತ ಸಿಎಂ’: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ
ರಾಹುಲ್ ಅವರು ಮೋದಿ ಸಮುದಾಯದ ಬಗ್ಗೆ ಮಾತನಾಡಿದ ಹಾಗೆ, ಸಿದ್ದರಾಮಯ್ಯನವರು ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಇದು ಅವರ ಘನತೆಗೆ ತಕ್ಕುದಾದುದ್ದಲ್ಲ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಬೆಂಗಳೂರು(ಏ.24): ‘ರಾಜ್ಯದಲ್ಲಿ ಲಿಂಗಾಯತರೇ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಎಲ್ಲಾ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು’ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಿಜೆಪಿ ವಲಯದಲ್ಲಿ ಆಕ್ರೋಶದ ಕಿಡಿಯನ್ನೇ ಹಚ್ಚಿದ್ದು, ಭಾನುವಾರವೂ ಬಿಜೆಪಿ ನಾಯಕರು ಸಿದ್ದು ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬೊಮ್ಮಾಯಿ, ಸಚಿವರಾದ ಆರ್, ಅಶೋಕ್, ವಿ.ಸೋಮಣ್ಣ, ಶಾಸಕ ಬೆಲ್ಲದ, ಯತ್ನಾಳ, ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯನವರ ಹೇಳಿಕೆಗೆ ಕಿಡಿ ಕಾರಿದ್ದು, ಬಹಿರಂಗವಾಗಿ ಲಿಂಗಾಯತರ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಈ ಮೇಲಿನ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಾನುವಾರವೂ ಬಿಜೆಪಿಯ ಹಲವು ನಾಯಕರು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಿಂಗಾಯತರ ಕುರಿತು ಕಾಂಗ್ರೆಸ್ ಅಪಪ್ರಚಾರ: ಕೇಂದ್ರ ಸಚಿವ ಭಗವಂತ ಖೂಬಾ
ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಹುಲ್ ಅವರು ಮೋದಿ ಸಮುದಾಯದ ಬಗ್ಗೆ ಮಾತನಾಡಿದ ಹಾಗೆ, ಸಿದ್ದರಾಮಯ್ಯನವರು ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಇದು ಅವರ ಘನತೆಗೆ ತಕ್ಕುದಾದುದ್ದಲ್ಲ. ಮುಂದಿನ ದಿನಗಳಲ್ಲಿ ಜನ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ರಾಹುಲ್ ಗಾಂಧಿಯವರ ಜೊತೆಗೆ ಪ್ರವಾಸ ಮಾಡಿ ಸಿದ್ದರಾಮಯ್ಯನವರು ತಮ್ಮ ಐಕ್ಯೂವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಲಿಂಗಾಯತರು ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ್ನು ಕ್ಷಮಿಸುವುದಿಲ್ಲ. ಅವರ ಹುಚ್ಚು ಹೇಳಿಕೆಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿದ್ದುಗೆ ಲಿಂಗಾಯತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ತಾಕತ್ತಿದ್ದರೆ ಕಾಂಗ್ರೆಸ್‌ನವರು ಲಿಂಗಾಯತ ಸಮುದಾಯದವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿ, ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಸೇರಿದಂತೆ ಲಿಂಗಾಯತರನ್ನು ಸಿಎಂ ಮಾಡಿದೆ. ಲಿಂಗಾಯತರನ್ನು ಪಕ್ಷ ಕಡೆಗಣಿಸುವ ಮಾತೇ ಇಲ್ಲ ಎಂದಿದ್ದಾರೆ.
ಕನಕಪುರ ತಾಲೂಕಿನ ಮರಳೇಗವಿ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಸಿದ್ದರಾಮಯ್ಯನವರು ಲಿಂಗಾಯತ ಸಮುದಾಯದ ಎದೆಗೆ ಚೂರಿ ಇರಿಯುವುದರ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಸಫ್‌ರ್ ಪೌಡರ್ ಹಾಕಿ ತೊಳೆಯುವ ಕೆಲಸ ಮಾಡಿದ್ದಾರೆ. ಲಿಂಗಾಯಿತರು ಇನ್ನು ನೂರು ವರ್ಷವಾದರೂ ಕಾಂಗ್ರೆಸ್‌ಗೆ ಬೆಂಬಲ ನೀಡುವುದಿಲ್ಲ, ಸಿದ್ದರಾಮಯ್ಯನವರನ್ನು ಕ್ಷಮಿಸುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಹಾಗಿದ್ದರೆ, ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಸಿಎಂಗಳೂ ಭ್ರಷ್ಟರಾ? ಎಂದು ಸಿದ್ದು ಅವರನ್ನು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿಗೆ ಬಸವಣ್ಣನವರ ವಚನವನ್ನೇ ಸರಿಯಾಗಿ ಹೇಳಲು ಬರುವುದಿಲ್ಲ. ಈ ಹಿಂದೆ ಬೆಳಗಾವಿಗೆ ಬಂದಾಗ ‘ಇವನಾರವ, ಇವನಾರವ’ ಎಂಬ ಬಸವಣ್ಣನವರ ವಚನವನ್ನು ‘ಇವನರ್ವ, ಇವನರ್ವ’ ಎಂದು ಅಪಭ್ರಂಶ ಮಾಡಿದ್ದಾರೆ. ಅವರು ಹೇಗೆ ಲಿಂಗಾಯತರ ಪರವಾಗಿ ಮತಯಾಚನೆ ಮಾಡುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಲಿಂಗಾಯತರನ್ನು ಬಳಸಿಕೊಂಡು ಕೈ ಬಿಡುವುದೇ ಬಿಜೆಪಿ ಹಿಡನ್ ಅಜೆಂಡಾ: ಎಂ.ಬಿ.ಪಾಟೀಲ
ಇದೇ ವೇಳೆ, ಕಲಬುರಗಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ, ವರುಣ ಹಾಗೂ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಕೂಡ ಸಿದ್ದು ಹೇಳಿಕೆಯನ್ನು ಖಂಡಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.