Asianet Suvarna News Asianet Suvarna News

ಉಗ್ರ ಕೃತ್ಯ ಬಗ್ಗೆ ಕಾಂಗ್ರೆಸ್ ಸರ್ಕಾರ ಸಹಾನುಭೂತಿ: ಆರ್‌.ಅಶೋಕ್‌

ಸಮಾಜಘಾತುಕ ಶಕ್ತಿಗಳು ಹಾಗೂ ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ದುಷ್ಕೃತ್ಯಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಸಹಾನುಭೂತಿ ತೋರುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. 
 

BJP Opposition Leader R Ashok Slams On Congress Govt gvd
Author
First Published Mar 4, 2024, 4:00 AM IST

ಬೆಂಗಳೂರು (ಮಾ.04): ಸಮಾಜಘಾತುಕ ಶಕ್ತಿಗಳು ಹಾಗೂ ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ದುಷ್ಕೃತ್ಯಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಸಹಾನುಭೂತಿ ತೋರುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮತ್ತು ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಕಳವಳಕಾರಿಯಾಗಿದೆ. ದೇಶ ವಿದ್ರೋಹಿ ಶಕ್ತಿಗಳನ್ನೇ ಸಮರ್ಥನೆ ಮಾಡುವ, ದುಷ್ಕೃತ್ಯಗಳನ್ನು ಮುಚ್ಚಿಹಾಕುವ ಷಡ್ಯಂತ್ರ ನಡೆಸಲಾಗಿದೆ. 

ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಲ್ಲಿ ನಿರತವಾಗಿರುವ ಕಾಂಗ್ರೆಸ್‌ ಸರ್ಕಾರ ಇಂತಹ ಕೃತ್ಯಗಳಲ್ಲೂ ಕೀಳು ಮನೋಭಾವ ಪ್ರದರ್ಶಿಸುತ್ತಿರುವುದು ರಾಜ್ಯದ ಜನತೆಯಲ್ಲಿ ಆಘಾತವುಂಟು ಮಾಡಿದೆ ಎಂದರು. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶದ್ರೋಹ ಕೃತ್ಯಗಳನ್ನೂ ಕಾಂಗ್ರೆಸ್‌ ಸಮರ್ಥಿಸಿಕೊಳ್ಳುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಮತ ಪಡೆಯಲು ದೇಶದ್ರೋಹ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗಿದೆ. ಜನವಿರೋಧಿ ಧೋರಣೆಯ ಈ ಸರ್ಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಅಲ್ಪಸಂಖ್ಯಾತರ ಮನಸ್ಸನ್ನು ಕಲ್ಮಶಗೊಳಿಸಲಾಗಿದೆ. ನೀವು ಏನೇ ಮಾಡಿದರೂ ರಕ್ಷಿಸುತ್ತೇವೆ, ನಿಮ್ಮ ಜತೆ ನಾವಿದ್ದೇವೆ. ಬಹುಸಂಖ್ಯಾತರನ್ನು ಬಗ್ಗುಬಡಿಯುತ್ತೇವೆ ಎಂಬ ಕಾಂಗ್ರೆಸ್‌ ಮನಸ್ಥಿತಿಯನ್ನು ಅಲ್ಪಸಂಖ್ಯಾತರಲ್ಲಿ ತುಂಬಿಸಲಾಗಿದೆ. ಈ ಕಾರಣದಿಂದಲೇ ಡಿಜೆ ಹಳ್ಳಿ, ಕೆಜೆ ಹಳ್ಳಿ ಘಟನೆಗಳು ನಡೆದವು. ಮೈಸೂರಿನಲ್ಲಿ ಕೆಎಫ್‌ಡಿ ಕಾರ್ಯಕರ್ತನೊಬ್ಬ ಶಾಸಕ ತನ್ವಿರ್‌ ಸೇಠ್‌ ಅವರನ್ನೇ ಹತ್ಯೆ ಮಾಡುವ ಯತ್ನ ನಡೆಸಿದ ಎಂದು ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಹೋಟೆಲ್‌ ಸ್ಫೋಟಕ್ಕೆ ಸಿಎಂ, ಡಿಸಿಎಂ ನೇರ ಹೊಣೆಗಾರರು: ಪ್ರಲ್ಹಾದ್‌ ಜೋಶಿ

ನಮ್ಮ ಸರ್ಕಾರದ ಅವಧಿಯಲ್ಲಿ ಇಲಿಯಂತೆ ಬಾಲ ಮುದುರಿ ಬಿಲ ಸೇರಿದ್ದವರು ಇಂದು ಹುಲಿಗಳಂತೆ ಬಿಲದಿಂದ ಆಚೆ ಬಂದು ದುಷ್ಕೃತ್ಯ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಮನಸ್ಥಿತಿ ಇದಕ್ಕೆ ಕಾರಣ. ರಾಜ್ಯದ ಇತಿಹಾಸದಲ್ಲೇ ಇಂತಹ ಸರ್ಕಾರವನ್ನು ಜನತೆ ಕಂಡಿರಲಿಲ್ಲ. ಈ ರೀತಿ ಆಡಳಿತ ನಡೆಸುವುದಕ್ಕಿಂತ ರಾಜೀನಾಮೆ ನೀಡಿ ಮನೆಗೆ ಹೋಗುವುದು ಎಷ್ಟೋ ಮೇಲು ಎಂದು ಹೇಳಿದರು.

Follow Us:
Download App:
  • android
  • ios