ತುಮಕೂರಿಗೆ ಮೆಟ್ರೋ ರೈಲು ವಿಸ್ತರಣೆ ಯೋಜನೆಗೆ ಸಂಸದರಿಂದ ಆಕ್ಷೇಪ ವ್ಯಕ್ತವಾಗಿದ್ದು, ರಿಯಲ್ ಎಸ್ಟೇಟ್ ಲಾಭದ ಆರೋಪ ಕೇಳಿಬಂದಿದೆ. ಈ ಯೋಜನೆಯನ್ನು ಮೂರ್ಖತನ ಎಂದು ಕರೆದ ಸಂಸದ ತೇಜಸ್ವಿ ಸೂರ್ಯ, ಬದಲಾಗಿ ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಿಸುವಂತೆ ಸಲಹೆ ನೀಡಿದ್ದಾರೆ. ಸಚಿವ ಪರಮೇಶ್ವರ್ ಸಂಸದರ ಹೇಳಿಕೆಯನ್ನು ಖಂಡಿಸಿದ್ದಾರೆ.

ಬೆಂಗಳೂರು: ಮೆಟ್ರೋ ರೈಲು ಸೌಲಭ್ಯವನ್ನು ತುಮಕೂರಿಗೆ ವಿಸ್ತರಿಸುವ ಬಗ್ಗೆ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌, ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ರಿಯಲ್ ಎಸ್ಟೇಟ್ ಲಾಭದ ಆರೋಪ ಮಾಡಿದ್ದಾರೆ. ಪಿ.ಸಿ.ಮೋಹನ್‌ ಅವರು, ‘ತುಮಕೂರಿಗೆ ಉಪನಗರ ರೈಲು ಕಿಮೀಗೆ ₹ 100ರಿಂದ ₹ 150 ಕೋಟಿ ವೆಚ್ಚವಾಗುತ್ತದೆ. ಮೆಟ್ರೋ ಕಿಮೀ ₹ 350 ಕೋಟಿ ವೆಚ್ಚವಾಗುತ್ತದೆ. ಇದರಲ್ಲಿ ರಿಯಲ್ ಎಸ್ಟೇಟ್ ಲಾಭವೇ ₹ 1,000 ಕೋಟಿ ಎಂದು ದೂರಿದ್ದಾರೆ.

ತುಮಕೂರು, ಹೊಸೂರು, ಹೊಸಕೋಟೆ ಅಥವಾ ಬಿಡದಿಗೆ ಮೆಟ್ರೋ ಸಂಪರ್ಕದ ಬಗ್ಗೆ ಯೋಜನೆಗಳು ಇಲ್ಲ. ಇದು ರಿಯಲ್ ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ಮಾತ್ರ. ರಾಜ್ಯ ಸರ್ಕಾರವು ಉಪನಗರ ರೈಲುಗಳ ಹಳಿತಪ್ಪಿಸುವುದನ್ನು ಬಿಟ್ಟು ಬೇರೇನನ್ನೂ ನಿರ್ಮಿಸುವುದಿಲ್ಲ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಸಂಸದ ತೇಜಸ್ವಿ ಸೂರ್ಯ ಅವರು, ತುಮಕೂರಿಗೆ ಮೆಟ್ರೋ ವಿಸ್ತರಿಸುವ ಕರ್ನಾಟಕ ಸರ್ಕಾರದ ಯೋಚನೆ ಮೂರ್ಖತನದ್ದು. ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಬದಲಾಗಿ ಬಾಕಿ ಇರುವ ಮೆಟ್ರೋ ಮಾರ್ಗಗಳನ್ನು ಬೇಗನೆ ಪೂರ್ಣಗೊಳಿಸುವ ಮತ್ತು ಬೆಂಗಳೂರಿನೊಳಗೆ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸುವತ್ತ ಗಮನಹರಿಸಬೇಕು. ಮೆಟ್ರೋ ನಗರದೊಳಗಿನ ಸಂಪರ್ಕವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದೆ. ತುಮಕೂರನ್ನು ಆರ್‌ಆರ್‌ಟಿಎಸ್‌ ( ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ) ಅಥವಾ ಉಪನಗರ ರೈಲಿನೊಂದಿಗೆ ಸಂಪರ್ಕಿಸಬೇಕು ಎಂದು ಸಲಹೆ ನೀಡಿದ್ದಾರೆ.

ಸಂಸದರ ಹೇಳಿಕೆಗೆ ಪರಮೇಶ್ವರ್ ಆಕ್ರೋಶ
ತುಮಕೂರಿಗೆ ಅಭಿವೃದ್ಧಿ ದೃಷ್ಟಿಯಿಂದ ಮೆಟ್ರೋ ರೈಲು ಅಗತ್ಯವಿದ್ದು, ಈ ಕುರಿತು ಇಬ್ಬರು ಸಂಸದರು ನೀಡಿರುವ ಹೇಳಿಕೆ ಅರ್ಥ ವಿಲ್ಲದ್ದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿಗೆ ಮೆಟ್ರೋ ಯೋಜನೆ ಮೂರ್ಖತನದ್ದು ಎಂದಿರುವ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರ ಹೇಳಿಕೆಗಳು ಏನೆಂದು ಅರ್ಥವಾಗಿಲ್ಲ. ಟೋಕಿಯೋ, ನ್ಯೂಯಾರ್ಕ್ ಸೇರಿ ದೊಡ್ಡ ನಗರಗಳಲ್ಲಿ ದೂರದ ಊರುಗಳನ್ನು ಅಭಿ ವೃದ್ಧಿಪಡಿಸುತ್ತಾರೆ. ಅದೇ ರೀತಿ ತುಮಕೂ ರಿಗೆ ಮೆಟ್ರೋ ಯೋಜನೆ ತರಬೇಕು ಎಂಬ ಉದ್ದೇಶ ನಮಗಿದೆ. ಸಂಸದರು ಇದನ್ನು ಅರ್ಥ ಮಾಡಿಕೊಂಡು ಹೇಳಿಕೆ ನೀಡುವುದು ಉತ್ತಮ ಎಂದರು. 

ಸಿಎಂ ಅವರ ಮನವೊಲಿಸಿ, ಕಳೆದ ಬಾರಿಯ ಬಜೆಟ್‌ನಲ್ಲಿ ಕಾರ್ಯಸಾಧ್ಯತಾ ವರದಿಗೆ ಘೋಷಿಸಲಾಗಿತ್ತು. ಹೈದ್ರಾ ಬಾದ್ ಕಂಪನಿ ವರದಿ ಸಿದ್ದ ಪಡಿಸಿ, ಸರ್ಕಾರಕ್ಕೆ ಸಲ್ಲಿಸಿದೆ. ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರದೇಶವನ್ನು ನಿರ್ಮಿಸಲಾಗಿದೆ. ರಸ್ತೆ ಮೂಲಕ ತುಮಕೂರಿಗೆ ಹೋಗಲು ನಮಗೆ 2 ತಾಸು ಆಗುತ್ತಿದ್ದು, ಮೆಟ್ರೋದಿಂದ ಓಡಾಟ ಸುಲಭವಾಗುತ್ತದೆ. ಕೇಂದ್ರ ಸಚಿವ ವಿ.ಸೋಮಣ್ಣ ಬೆಂಗಳೂರಿನವರು. ತುಮಕೂರು ವಿಚಾರ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು, ಮೆಟ್ರೋ ರೈಲು ಮಾಡಬೇಕು ಎನ್ನುವ ವಿಚಾರ ಅವರಿಗೂ ಇದೆ. ತುಮ ಕೂರಿಗೆ ಮೆಟ್ರೋ ಬೇಕೇಬೇಕು ಎಂದರು.

ಬಿಎಂಆರ್‌ಸಿಎಲ್‌ಗೆ ವರದಿ ಸಲ್ಲಿಕೆ
ತುಮಕೂರಿಗೆ ಮೆಟ್ರೋ ವಿಸ್ತರಣೆ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಇನ್ನು ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿ ಪಡೆಯುವ ನಿರೀಕ್ಷೆಯಿದೆ. ಇದರ ಜೊತೆಗೆ 3ನೇ ಹಂತದ ಯೋಜನೆಯಲ್ಲಿ ಡಬ್ಬಲ್‌ ಡೆಕ್ಕರ್‌ ಮಾದರಿಯನ್ನು ಎಲ್ಲೆಲ್ಲಿ ಅಳವಡಿಸಬಹುದು ಎಂಬ ಬಗ್ಗೆ ನಡೆಸಲಾಗಿರುವ ಅಧ್ಯಯನದ ವರದಿಯೂ ಬಿಎಂಆರ್‌ಸಿಎಲ್‌ಗೆ ಸಲ್ಲಿಕೆಯಾಗಲಿದೆ.

ಮೆಟ್ರೋವನ್ನು ಬೆಂಗಳೂರಿನ ಆಚೆಗೆ ವಿಸ್ತರಿಸುವ ಸರ್ಕಾರದ ಆಶಯ ಈಡೇರಿಕೆ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ಮಹತ್ವದ ಹೆಜ್ಜೆಯಿಟ್ಟಿದೆ. ಹೈದ್ರಾಬಾದ್ ಮೂಲದ ಆರ್‌ವಿ ಅಸೋಸಿಯೇಟ್ಸ್‌ ಆರ್ಕಿಟೆಕ್ಟ್ಸ್‌ ಎಂಜಿನಿಯರ್ಸ್‌ ಆ್ಯಂಡ್‌ ಕನ್ಸಲ್ಟಂಟ್ಸ್ ಕಂಪನಿಗೆ ತುಮಕೂರು ಮೆಟ್ರೋದ ಕಾರ್ಯಸಾಧ್ಯತಾ ವರದಿ ನೀಡಲು ಅಂದಾಜು ₹1.25 ಕೋಟಿ (₹1,25,54,343) ವೆಚ್ಚದ ಗುತ್ತಿಗೆ ನೀಡಿದೆ.

ತುಮಕೂರಿಗೆ ಮೆಟ್ರೋ ಬರುತ್ತೆ ಎಂದ ವಿ ಸೋಮಣ್ಣ
ತುಮಕೂರಿಗೆ ಶೀಘ್ರ ಮೆಟ್ರೋ ಯೋಜನೆ ಬರುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಸೋಮಣ್ಣ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೆ ಕಾಮಗಾರಿಗಳ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಬಿಎಂಆರ್ ಸಿಎಲ್ ವರದಿ ಕೊಟ್ಟಿದ್ದು, ನಮ್ಮ ಕಾಲದಲ್ಲೇ ಕಾರ್ಯರೂಪಕ್ಕೆ ತರುವ ಕೆಲಸ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.